More

    ಕರೊನಾ ಮಧ್ಯೆ ಕೈ ಹಿಡಿದ ಯೋಜನೆ

    ಪರಶುರಾಮ ಭಾಸಗಿ ವಿಜಯಪುರ

    ಕರೊನಾ ಮಹಾಮಾರಿಯಿಂದಾಗಿ ಕಳೆದೊಂದು ತಿಂಗಳಿಂದ ಸ್ಥಗಿತಗೊಂಡಿದ್ದ ಮಕ್ಕಳ ಬಿಸಿಯೂಟಕ್ಕೆ ನೂತನ ಸ್ಪರ್ಶ ನೀಡಲಾಗಿದ್ದು, ಆಹಾರದ ಬದಲಾಗಿ ಮಕ್ಕಳಿಗೆ ಅಕ್ಕಿ-ಬೇಳೆ ವಿತರಿಸಲಾಗುತ್ತಿದೆ. ಲಾಕ್‌ಡೌನ್ ಘೋಷಣೆಯಾದಾಗಿನಿಂದ ಬಿಸಿಯೂಟಕ್ಕೆ ಬ್ರೇಕ್ ಬಿದ್ದಿತ್ತು. ಇದರಿಂದ ಬಡ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೂ ಕಂಟಕ ಆವರಿಸಿತ್ತು. ಇದೀಗ ಲಾಕ್‌ಡೌನ್ ಮುಂದುವರಿದ ಹಿನ್ನೆಲೆ ಮಕ್ಕಳಿಗೆ ತೊಂದರೆಯಾಗದಿರಲೆಂದು ಶಿಕ್ಷಣ ಇಲಾಖೆ ಬಿಸಿಯೂಟಕ್ಕೆ ಬಳಸುತ್ತಿದ್ದ ಅಕ್ಕಿ ಮತ್ತು ಬೇಳೆಯನ್ನು ಪಾಲಕರಿಗೆ ತಲುಪಿಸುತ್ತಿರುವುದು ಮಕ್ಕಳ ಸಂತಸಕ್ಕೆ ಕಾರಣವಾಗಿದೆ.

    3.24 ಲಕ್ಷ ಮಕ್ಕಳಿಗೆ ಅನುಕೂಲ

    ಜಿಲ್ಲೆಯಲ್ಲಿ ಒಟ್ಟು 324259 ಮಕ್ಕಳು ಬಿಸಿಯೂಟದ ಸೌಲಭ್ಯ ಪಡೆಯುತ್ತಿದ್ದಾರೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಈ ಮೊದಲು 20 ಗ್ರಾಂ ಅಕ್ಕಿ ಬಿಸಿಯೂಟಕ್ಕೆ ಬಳಸಲಾಗುತ್ತಿತ್ತು. ಇದೀಗ ಪ್ರತೀ ಮಗುವಿಗೆ 100 ಗ್ರಾಂ ಅಕ್ಕಿ, 50 ಗ್ರಾಂ ಬೇಳೆ ನೀಡಲಾಗುತ್ತಿದೆ. 6-10ನೇ ತರಗತಿ ವಿದ್ಯಾರ್ಥಿಗಳಿಗೆ 150 ಗ್ರಾಂ ಅಕ್ಕಿ ಹಾಗೂ 75 ಗ್ರಾಂ ಬೇಳೆ ನೀಡಲಾಗುತ್ತಿದೆ. ಈಗಾಗಲೇ ಏ. 1 ರಿಂದ 10 ರವರೆಗೆ 240452 ಮಕ್ಕಳಿಗೆ ಅಕ್ಕಿ ಮತ್ತು ಬೇಳೆ ಹಂಚಿಕೆ ಮಾಡಲಾಗಿದೆ. ಅಂದಾಜು 3000 ಕ್ವಿಂಟಾಲ್ ಬೇಳೆ ಕೊರತೆಯಿದ್ದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶೇ. 74.15 ರಷ್ಟು ವಿದ್ಯಾರ್ಥಿಗಳಿಗೆ ಅಕ್ಕಿ-ಬೇಳೆ ಹಂಚಿಕೆ ಮಾಡಲಾಗಿದೆ.

    ಮಕ್ಕಳ ಸರತಿ ಸಾಲು

    ಲಾಕ್‌ಡೌನ್‌ನಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಕೈಗೊಂಡ ನಿರ್ಧಾರ ಸಾಕಷ್ಟು ಅನುಕೂಲಕರವಾಗಿದೆ. ಒಟ್ಟು 21 ದಿನಗಳ ದಾಸ್ತಾನು ಒಟ್ಟಿಗೆ ನೀಡಲಾಗುತ್ತಿದೆ. ಮಕ್ಕಳು ಬೇಸಿಗೆ ಬವಣೆ ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ಅಕ್ಕಿ- ಬೇಳೆ ಪಡೆಯುತ್ತಿದ್ದಾರೆ. ಹಿಂದಿನ ದಿನವೇ ಗ್ರಾಮದಲ್ಲಿ ಡಂಗುರ ಸಾರಲಾಗುತ್ತಿದ್ದು ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ತಮ್ಮ ಪಾಲು ಪಡೆದು ಸಂತಸದಿಂದ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಕ್ಷರ ದಾಸೋಹ ಸಿಬ್ಬಂದಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಪಾಲಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸರ್ಕಾರದ ಆದೇಶಾನುಸಾರ ಸಮರ್ಪಕವಾಗಿ ಅಕ್ಕಿ- ಬೇಳೆ ನೀಡಲಾಗುತ್ತಿದೆ. ಸಾಕಷ್ಟು ಮುಂಜಾಗೃತೆ ಕೈಗೊಳ್ಳಲಾಗಿದೆ. ಕರೊನಾದಂಥ ಕಡುಕಷ್ಟ ಕಾಲದಲ್ಲಿ ಯೋಜನೆ ಸಾಕಷ್ಟು ಅನುಕೂಲಕ್ಕೆ ಬಂದಿದೆ. ಶೀಘ್ರದಲ್ಲೇ ಹೆಚ್ಚುವರಿಯಾಗಿ ಬೇಳೆ ತರಿಸಿಕೊಂಡು ಹಂಚಲಾಗುವುದು.
    ವಿರೇಶ ಜೇವರಗಿ, ಅಕ್ಷರ ದಾಸೋಹ ಜಿಲ್ಲಾಧಿಕಾರಿ

    ಲಾಕ್‌ಡೌನ್‌ನಿಂದಾಗಿ ಬಡ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಗೋಳಿಡುತ್ತಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಅಕ್ಷರ ದಾಸೋಹದಡಿ ಅಕ್ಕಿ-ಬೇಳೆ ನೀಡುತ್ತಿರುವುದು ಸಂತಸದ ಸಂಗತಿ. ಸರ್ಕಾರದ ನಿರ್ಧಾರಕ್ಕೆ ಅಭಿನಂದನೆ.
    ರೇವಣಸಿದ್ದ ಗೋಡಕೆ, ಗ್ರಾಪಂ ಸದಸ್ಯ, ಸೊನಕನಳ್ಳಿ

    ಕರೊನಾ ಮಧ್ಯೆ ಕೈ ಹಿಡಿದ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts