More

    ಕೈಗಾರಿಕಾ ಹಬ್, ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣ ; ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಭರವಸೆ

    ಚಿಕ್ಕಬಳ್ಳಾಪುರ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಗೈರು, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ ಪೊಲೀಸರ ಪಥ ಸಂಚಲನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

    ಜಿಲ್ಲಾಡಳಿತ, ಜಿಪಂ ವತಿಯಿಂದ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಧ್ವಜಾರೋಹಣ ನೆರವೇರಿಸಿದರು. ಪರೇಡ್ ಕಮಾಂಡರ್ ಡಿವೈಎಸ್ಪಿ ಮಂಜುನಾಥ್ ಅವರೊಂದಿಗೆ ತೆರೆದ ವಾಹನದಲ್ಲಿ ತೆರಳಿ ಪಥಸಂಚಲನ ತಂಡಗಳನ್ನು ವೀಕ್ಷಿಸಿದ ಬಳಿಕ ಧ್ವಜವಂದನೆ ಸ್ವೀಕರಿಸಿದರು.

    ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಜಿಲ್ಲಾಕೇಂದ್ರವನ್ನು ಕೈಗಾರಿಕಾ ಹಬ್ ಆಗಿ ಅಭಿವೃದ್ಧಿ ಪಡಿಸುವುದರ ಜತೆಗೆ ಆರೋಗ್ಯ ಮತ್ತು ಶಿಕ್ಷಣ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ಭರವಸೆಯಿತ್ತರು.

    ಚಿಂತಾಮಣಿ ತಾಲೂಕು ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ 2ನೇ ಹಂತದ ಅಭಿವೃದ್ಧಿಗಾಗಿ 414 ಮತ್ತು 3ನೇ ಹಂತದ ಅಭಿವೃದ್ಧಿಗಾಗಿ 1,489 ಎಕರೆ ಜಮೀನು, ಗೌರಿಬಿದನೂರು ತಾಲೂಕು ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ 3ನೇ ಹಂತದ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ 839 ಎಕರೆ ಜಮೀನು ಗುರುತಿಸಲಾಗಿದೆ ಎಂದರು.

    610 ಕೋಟಿ ರೂ.ವೆಚ್ಚದಲ್ಲಿ ಚಿಕ್ಕಬಳ್ಳಾಪುರದ ಅರೂರು ಬಳಿ ವೈದ್ಯಕೀಯ ಕಾಲೇಜು ಕಾಮಗಾರಿ ಆರಂಭಿಸಲಾಗಿದ್ದು, ಈಗಾಗಲೇ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದೆ, ಶಿಡ್ಲಘಟ್ಟದ ಅಮರಾವತಿ ಬಳಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ಫಾಪನೆಗೆ 175 ಎಕರೆ ಜಮೀನು ಗುರುತಿಸಲಾಗಿದೆ ಎಂದು ಡಾ.ಸುಧಾಕರ್ ತಿಳಿಸಿದರು.

    ರಾಷ್ಟ್ರಮಟ್ಟದ ಪ್ರಮಾಣೀಕರಣ:ಚಿಂತಾಮಣಿ ತಾಲೂಕಿನ ಮುನಗನಹಳ್ಳಿ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಮಕ್ಕಳಸ್ನೇಹಿ ಪ್ರಶಸ್ತಿಗೆ ಪಾತ್ರವಾಗಿರುವುದು ಜಿಲ್ಲೆಗೆ ಹೆಗ್ಗಳಿಕೆಯಾಗಿದೆ. ಲಕ್ಷ್ಯ ಕಾರ್ಯಕ್ರಮಡಿ ಜಿಲ್ಲಾಸ್ಪತ್ರೆ ಹಾಗೂ ಗೌರಿಬಿದನೂರು, ಚಿಂತಾಮಣಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಮಾಣೀಕರಣಕ್ಕೆ ಆಯ್ಕೆಯಾಗಿವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

    ಪಿಂಚಣಿ ಆಂದೋಲನ ಯಶಸ್ವಿ: ಕಳೆದ ಎರಡು ವರ್ಷಗಳಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ 34,207 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾಗಿದೆ. ಗ್ರಾಮ, ವಾರ್ಡ್‌ವಾರು ಪ್ರತಿ ಮನೆ ಸಮೀಕ್ಷೆ ನಡೆಸಿ ಪಿಂಚಣಿ ಆಂದೋಲನ ಕೈಗೊಂಡಿರುವ ಜತೆಗೆ ಫೌತಿ ಖಾತೆ ಅರ್ಜಿಗಳ ದಾಖಲಾತಿಕರಣ ಪೂರ್ಣಗೊಳಿಸಲು ಅಭಿಯಾನ ನಡೆಯುತ್ತಿದೆ ಎಂದರು.

    ಮುಂಜಾಗ್ರತಾ ಕ್ರಮಗಳ ಪಾಲನೆ:ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ತಂಡಗಳು ಮಾಸ್ಕ್ ಧರಿಸಿ, ಪರಸ್ಪರ ಅಂತರೊಂದಿಗೆ ಪಥ ಸಂಚಲನ ನಡೆಸಿದ್ದು ವಿಶೇಷವಾಗಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸೀಮಿತ ಸಂಖ್ಯೆಯ ಜನರು ಸೋಂಕು ತಡೆಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರು.

    ಪಥಸಂಚಲನ: ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಗೃಹ ರಕ್ಷಕ ದಳ ಮತ್ತು ಪೊಲೀಸ್ ವಾದ್ಯ ತಂಡ ಮಾತ್ರ ಪಥ ಸಂಚಲನ ನಡೆಸಿತು. ಯಾವುದೇ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿರಲಿಲ್ಲ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ.

    ಹಲವರಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿದ ಬಾಗೇಪಲ್ಲಿಯ ಯಂಗ್ ಇಂಡಿಯಾ ಪ್ರೌಢಶಾಲೆಯ ಡಿ.ವಿ.ಚರಣ್ ಗೌಡ, ಚಿಕ್ಕಬಳ್ಳಾಪುರದ ಬಿಜಿಎಸ್ ಪ್ರೌಢಶಾಲೆಯ ಸಿ.ಎ.ಬೃಂದಾ, ಎ.ದೀಪಿಕಾ, ಎಸ್.ದೀಪ್ತಿ, ವಿ.ಜಲಜಾ, ಜಯಶ್ರೀ, ಕಾವ್ಯಶ್ರೀ, ಕೀರ್ತನಾ, ಕೃಪಾ, ಮೈತ್ರಿ ಎಸ್.ಕುಮಾರ್, ಮಾನಸಾ, ಪಿ.ಬಿ.ಮೋಹಿತ್, ಎಸ್.ಪ್ರಜ್ವಲ್, ಆರ್.ರಮ್ಯಶ್ರೀ, ಶ್ರಾವಣಿ, ಎಸ್.ಸೃಷ್ಟಿ, ಎಸ್.ಸುಮಂತ್, ಜಿ.ವಿ.ವಿನಯ್ ಕುಮಾರ್, ಚಿಂತಾಮಣಿಯ ಭೈರವೇಶ್ವರ ಪ್ರೌಢಶಾಲೆಯ ಎಂ.ಲಿಖಿತಾ, ಕಿಶೋರ್ ವಿದ್ಯಾ ಭವನದ ಕೆ.ಎಲ್.ಉನ್ನತಿ, ಗೌರಿಬಿದನೂರು ಬಿಜಿಎಸ್ ಪ್ರೌಢಶಾಲೆಯ ಆರ್.ಕೆ.ಅಮೂಲ್ಯಾ, ಮಹೇಶ್ ಸಾಯಿರೆಡ್ಡಿ, ಶಿಡ್ಲಘಟ್ಟದ ಬಿಜಿಎಸ್ ಪಬ್ಲಿಕ್ ಸ್ಕೂಲ್‌ನ ಸಿ.ವಿ.ಅನನ್ಯಾ, ಟಿ.ಲಾವಣ್ಯ, ವಿ.ಲಾವ್ಯಶ್ರೀ, ಎಚ್.ಎಸ್.ನಿತ್ಯಶ್ರೀ, ಬಿ.ಎನ್.ಪ್ರೀತಂ, ವೈ.ಎಲ್.ತ್ರೀವೇಣಿ, ಡಿ.ಯಶಸ್ವಿನಿ, ದಿ ಕ್ರೇಸೆಂಟ್ ಪ್ರೌಢಶಾಲೆಯ ಡಿ.ನಂದನ್ ಕುಮಾರ್‌ರನ್ನು ಸನ್ಮಾನಿಸಲಾಯಿತು. ಸಚಿವ ಡಾ ಕೆ.ಸುಧಾಕರ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದರು.

    ಗಣ್ಯರ ಭಾಗಿ: ಸಂಸದ ಬಿ.ಎನ್.ಬಚ್ಚೇಗೌಡ, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಬಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts