More

    ವಿಶ್ವಕಪ್​ ಫೈನಲ್​: ಕೇವಲ 81 ರನ್​ಗೆ ಭಾರತದ 3 ವಿಕೆಟ್​ ಪತನ, ಕೊಹ್ಲಿ ಮೇಲೆ ಹೆಚ್ಚಿದ ಒತ್ತಡ

    ಅಹಮದಾಬಾದ್​: ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿರುವ ಭಾರತಕ್ಕೆ ಆರಂಭಿಕ ಆಘಾತ ಕಾಡಿದೆ. ಕೇವಲ 81 ರನ್​ಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿದೆ.

    ತಂಡದ ಮೊತ್ತ 30 ರನ್​ ಇರುವಾಗ ಕೇವಲ 4 ರನ್​ ಗಳಿಸಿದ್ದ ಶುಭಮಾನ್​ ಗಿಲ್ ಕ್ಯಾಚಿತ್ತು ನಿರ್ಗಮಿಸಿದರೆ, ಅದರ ಬೆನ್ನಲ್ಲೇ 47 ರನ್​ ಗಳಿಸಿದ ಅರ್ಧ ಶತಕದ ಹೊಸ್ತಿಲಲ್ಲಿದ್ದ ನಾಯಕ ರೋಹಿತ್​ ಶರ್ಮ ಗ್ಲೇನ್​ ಮ್ಯಾಕ್ಸ್​ವೆಲ್​ ಓವರ್​ನಲ್ಲಿ ಹೆಡ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ಗೆ ಮರಳಿದರು. ಇದರ ಬೆನ್ನಲ್ಲೇ ಮಧ್ಯಮ ಕ್ರಮಾಂಕದ ಆಧಾರಸ್ಥಂಭ ಎನಿಸಿಕೊಂಡಿದ್ದ ಶ್ರೇಯಸ್​ ಅಯ್ಯರ್​ ಕೂಡ ಕೇವಲ 4 ರನ್​ಗೆ ಔಟಾಗಿದ್ದು ಭಾರತಕ್ಕೆ ಬಹುದೊಡ್ಡ ಹೊಡೆತ ಬಿದ್ದಂತಾಗಿದೆ.

    ಕೇವಲ 81 ರನ್​ಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡಿರುವ ಭಾರತ ಭಾರೀ ಹಿನ್ನಡೆ ಅನುಭವಿಸಿದ್ದು, ಇದೀಗ ಟೀಮ್​ ಇಂಡಿಯಾಗೆ ವಿರಾಟ್​ ಕೊಹ್ಲಿ ಮತ್ತು ಕೆ.ಎಲ್​. ರಾಹುಲ್​ ಪ್ರಮುಖ ಭರವಸೆಯಾಗಿದ್ದಾರೆ. ರೋಹಿತ್​ ನಿರ್ಗಮನದ ಬಳಿಕ ಸಂಪೂರ್ಣ ಜವಾಬ್ದಾರಿ ಇದೀಗ ವಿರಾಟ್​ ಕೊಹ್ಲಿ ಮೇಲೆ ಬಿದ್ದಿದ್ದೆ. ಇಂದು ಉತ್ತಮ ಇನಿಂಗ್ಸ್​ ಆಡಲೇಬೇಕಾದ ಅನಿವಾರ್ಯತೆ ಕೊಹ್ಲಿಗೆ ಎದುರಾಗಿದೆ. ಕೊಹ್ಲಿಗೆ ಕೆ.ಎಲ್​. ರಾಹುಲ್ ಹಾಗೂ ಸೂರ್ಯಕುಮಾರ್​ ಯಾದವ್​ ಸಾಥ್​ ನೀಡಲೇಬೇಕಿದೆ.

    ಸದ್ಯ ವಿರಾಟ್​ ಕೊಹ್ಲಿ ಮತ್ತು ಕೆ.ಎಲ್​. ರಾಹುಲ್​ ಕ್ರೀಸ್​ನಲ್ಲಿದ್ದಾರೆ. 15 ಓವರ್​ ಮುಕ್ತಾಯಕ್ಕೆ 3 ವಿಕೆಟ್​ ನಷ್ಟಕ್ಕೆ ಭಾರತ 97 ರನ್​ ಕಲೆಹಾಕಿದೆ. ಕೊಹ್ಲಿ 26 ಮತ್ತು ರಾಹುಲ್​ 4 ರನ್​ ಗಳಿಸಿ ಆಟವಾಡುತ್ತಿದ್ದಾರೆ.

    ಅಂದಹಾಗೆ ಏಕದಿನ ವಿಶ್ವಕಪ್‌ ಇತಿಹಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ನಲ್ಲಿ ಮುಖಾಮುಖಿಯಾಗಿರುವುದು ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ವಿಶ್ವಕಪ್‌ನಲ್ಲಿ ಭಾರತ ಫೈನಲ್‌ ಪ್ರವೇಶಿಸಿರುವುದು ಇದು ನಾಲ್ಕನೇ ಬಾರಿ. 1983, 2003 ಮತ್ತು 2011 ರಲ್ಲಿ ಫೈನಲ್ ತಲುಪಿದೆ ಮತ್ತು 1983 ಮತ್ತು 2011 ರಲ್ಲಿ ಪ್ರಶಸ್ತಿಯನ್ನು ಗೆದ್ದಿದೆ.

    ಭಾರತ ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಲೀಗ್​ ಹಂತದಲ್ಲಿ 9 ಮತ್ತು ಒಂದು ಸೆಮಿಫೈನಲ್​ ಸೇರಿ ಆಡಿದ 10 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 10 ಪಂದ್ಯಗಳಲ್ಲಿ ಎರಡರಲ್ಲಿ ಸೋತು ಉಳಿದ ಎಂಟು ಪಂದ್ಯಗಳಲ್ಲಿ ಜಯಸಿದೆ. ಅ.8ರಂದು ಚೆನ್ನೈ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಲೀಗ್​ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತು. ಇದೀಗ ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ಎರಡೂ ತಂಡಗಳು ಕಾದಾಡುತ್ತಿವೆ.

    ಈ ಪಂದ್ಯವನ್ನು ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ವಿಶ್ವಕಪ್​ ಫೈನಲ್​: ಟೀಮ್​ ಇಂಡಿಯಾಗೆ ಆರಂಭಿಕ ಆಘಾತ, 4 ರನ್​ಗೆ ಶುಭಮಾನ್​ ಗಿಲ್​ ಔಟ್​

    IND Vs AUS ; ಟಾಸ್ ಗೆದ್ದ ಆಸ್ಟ್ರೇಲಿಯಾ…ಟೀಂ ಇಂಡಿಯಾ ಬ್ಯಾಟಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts