More

    ಮಂಗಳೂರಿಗೆ ನೀರಿನ ಬಿಸಿ!

    ಮಂಗಳೂರು: ತುಂಬೆಯಿಂದ ನೀರಿನ ಪೂರೈಕೆ ನಿರಂತರವಾಗಿದ್ದರೂ ಮಂಗಳೂರಿಗೆ ನೀರಿನ ಬಿಸಿ ಆವರಿಸಿದೆ. ಕಳೆದ 1 ತಿಂಗಳಿನಿಂದ ಮಂಗಳೂರಿಗೆ ತುಂಬೆ ಡ್ಯಾಂನಿಂದ ನಿರಂತರ ನೀರು ಪೂರೈಕೆಯಾಗುತ್ತಿದ್ದರೂ, ನಗರದ ಎತ್ತರದ ಪ್ರದೇಶಗಳಿಗೆ ನೀರು ತಲುಪಿಲ್ಲ. ಈ ಮಧ್ಯೆ ಬುಧವಾರದಿಂದ ನಗರದ ಹಲವಡೆ ನೀರು ಪೂರೈಕೆಯಲ್ಲಿ ಕೊರತೆಯಾಗಿದ್ದು, ನಲ್ಲಿಗಳಲ್ಲಿ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

    ಗುರುವಾರ 0.06 ಮೀ ಇಳಿಕೆಯಾಗಿ ತುಂಬೆ ಅಣೆಕಟ್ಟಿನ ನೀರಿನ ಮಟ್ಟ 5.11ಮೀ., 0.06ಮೀ. ಇಳಿಕೆಯಾಗಿ ಎಎಂಆರ್ ಮಟ್ಟ 17.18ಮೀ.ಗೆ ತಲುಪಿದೆ. ಕಳೆದ 1 ವಾರದಿಂದ ಈ ಡ್ಯಾಂಗಳಲ್ಲಿ ಸರಾಸರಿ 0.5ಮೀ. ನೀರು ಇಳಿಕೆಯಾಗುತ್ತಿದ್ದರೂ ತುಂಬೆಯಿಂದ ಪ್ರತೀ ದಿನ 155 ಎಂಎಲ್‌ಡಿ ನೀರು ಲಿಫ್ಟ್ ಮಾಡಿ ಕುಡಿಯುವ ನೀರಿನ ಪೂರೈಕೆ ನಿರಂತರ ನಡೆಯುತ್ತಿದೆ. ಸಧ್ಯಕ್ಕೆ ಇಲ್ಲಿರುವ ನೀರು ಮುಂದಿನ 45 ದಿನಕ್ಕೆ ಮಾತ್ರ ಪೂರೈಸಬಹುದಾಗಿರುವುದರಿಂದ ಮಂಗಳೂರು ಪಾಲಿಕೆಯಿಂದ ನೀರಿನ ರೇಷನಿಂಗ್ ಸುಳಿವು ನೀಡಿದೆ. ನಗರ ಹಾಗೂ ನಗರದ ಹೊರವಲಯದಲ್ಲಿ ನೀರಿನ ಕೊರತೆಯಿರುವಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.

    *ಟ್ಯಾಂಕರ್ ನೀರು ಪೂರೈಕೆ

    ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್, ಪಾಂಡೇಶ್ವರ ಸಹಿತ ಪೈಪ್‌ಲೈನ್ ನಿಂದ ನೀರು ತಲುಪದ ಕೆಲವು ಪ್ರದೇಶಗಳಿಗೆ ಪ್ರತಿನಿತ್ಯ ಸುಮಾರು 70 ಟ್ಯಾಂಕರ್ (7 ಟ್ಯಾಂಕರ್‌ಗಳಲ್ಲಿ ಟ್ರಿಪ್‌ಗಳಲ್ಲಿ ) ನೀರು ಪಾಲಿಕೆಯಿಂದ ಪೂರೈಕೆಯಾಗುತ್ತಿದೆ. ಉಳ್ಳಾಲ ಗ್ರಾಮೀಣ ಭಾಗದ ತೊಕ್ಕೊಟ್ಟು, ಬಾಳೆಪುಣಿ, ಕೊಣಾಜೆ, ನರಿಂಗಾನ, ಪಜೀರು, ಮಂಜನಾಡಿ, ಇನೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 9 ಟ್ಯಾಂಕರ್‌ಗಳ ಮೂಲಕ ದಿನಕ್ಕೆ 30 ಟ್ರಿಪ್ ಸಹಿತ 20 ಹೆಚ್ಚುವರಿ ನೀರು ಪೂರೈಕೆಯಾಗುತ್ತಿದೆ. ಉಳ್ಳಾಲ, ಕೋಟೆಕಾರು, ಸೋಮೇಶ್ವರ ಸೇರಿ ನಗರ ಭಾಗದ 12 ವಾರ್ಡ್‌ಗಳಿಗೆ 10 ಟ್ಯಾಂಕರ್‌ಗಳ ಮೂಲಕ 62 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ.

    —————–

    ಟ್ಯಾಂಕರ್ ಮಾಫಿಯಾ ಮುನ್ನೆಲೆಗೆ

    ನಗರದಲ್ಲಿ ಕುಡಿಯುವ ನೀರಿನ ಅಭಾವ ಎದುರಾದಾಗಲೆಲ್ಲ ಟ್ಯಾಂಕರ್ ಮಾಫಿಯಾ ತಲೆಯೆತ್ತುತ್ತದೆ. ಈ ಬಾರಿ ಮಂಗಳೂರಿನ ಎಲ್ಲಾ ವಾರ್ಡ್ ಪ್ರದೇಶವೂ ಬರದ ಹಟ್ಟಿಯಲ್ಲಿದೆ. ಹೀಗಾಗಿ ಬೇಡಿಕೆಯಷ್ಟು ನೀರು ಪೂರೈಕೆ ಆಗದ ಕಾರಣ ಜನರು ಟ್ಯಾಂಕರ್ ಮೊರೆ ಹೋಗಿದ್ದಾರೆ. ಅದರಲ್ಲೂ ನಗರದ ಹೊರವಲಯದ ಬಹುತೇಕ ಕಡೆಗಳಲ್ಲಿ ಜನರು ಈಗಾಗಲೆ ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದಾರೆ. ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಯವರು ಕೂಡ ಟ್ಯಾಂಕರ್ ನೀರನ್ನೇ ಆಶ್ರಯಿಸಿದ್ದಾರೆ. ಮಂಗಳೂರು ಪಾಲಿಕೆಯು ಜನವಸತಿ ಪ್ರದೇಶ, ಬಡವರು ವಾಸಿಸುವ ಪ್ರದೇಶಕ್ಕೆ ಸೀಮಿತ ಸಂಖ್ಯೆಯಲ್ಲಿ ಟ್ಯಾಂಕರ್ ನೀರು ಪೂರೈಸುತ್ತಿದ್ದರೂ, ಅದು ಸಾಕಾಗುತ್ತಿಲ್ಲ. ಇದರ ಲಾಭ ಪಡೆಯುವ ನೀರು ಪೂರೈಕೆಯ ಖಾಸಗಿ ಸಂಸ್ಥೆಗಳು ಟ್ಯಾಂಕರ್ ನೀರು ಪೂರೈಕೆಗೆ ಬೇಕಾಬಿಟ್ಟಿ ಹಣ ವಸೂಲಿ ಮಾಡುವ ದಂದೆಗೆ ಇಳಿದಿದೆ.

    ——————–

    ಮಂಗಳೂರಿಗೆ ರೇಷನಿಂಗ್ ಅನಿವಾರ್ಯ

    ತುಂಬೆಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ ಹರೆಕಲದಿಂದ ನೀರು ನಿರಂತರ ಪಂಪಿಂಗ್ ಮಾಡಲಾಗುತ್ತಿದೆ. ಈ ಮಧ್ಯೆ ಎಎಂಆರ್ ನೀರನ್ನು ಹರಿಸಿ ತುಂಬೆಯ ಮಟ್ಟವನ್ನು 6ಮೀ. ವರೆಗೆ ಏರಿಸುವ ಯೋಜನೆ ಜಿಲ್ಲಾಡಳಿತದ ಮುಂದಿದ್ದು, ನೀರಿನ ಕೊರತೆ ನೀಗಿಸಲು ಅನಿವಾರ್ಯವಾದರೆ ಮಾತ್ರ ಎಎಂಆರ್ ನೀರು ಹರಿಸಲಾಗುವುದು ಎಂದು ಈಗಾಗಲೇ ಜಿಲ್ಲಾಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ಮಂಗಳೂರಿಗೆ ರೇಷನಿಂಗ್ ಅನಿವಾರ್ಯ ಎಂದು ಪಾಲಿಕೆ ಅಧಿಕಾರಿಗಳೂ ಜಿಲ್ಲಾಡಳಿತಕ್ಕೆ ಮೌಕಿಕ ಮಾಹಿತಿ ನೀಡಿದ್ದಾರೆ.

    —————-

    ಕುಡಿಯುವ ನೀರಿಗಾಗಿ ಕಂಟ್ರೋಲ್ ರೂಂ

    ಮಂಗಳೂರು ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಕಂಟ್ರೋಲ್ ರೂಂ (0824- 2220306 ಅಥವಾ 0824- 2220303) ಗೆ ಕರೆ ಮಾಡಿದರೆ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಪ್ರತೀ ದಿನ ನಿಗಾ ಇರಿಸಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

    ——————-

    ತುಂಬೆ ಹಾಗೂ ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತವಾಗುತ್ತಿದ್ದರೂ ಮಂಗಳೂರು ನಗರದ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ. ಅನಿವಾರ್ಯವಾದರೆ ಪಾಲಿಕೆಯಿಂದ ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ತುಂಬೆ ಡ್ಯಾಂ ನೀರಿನ ಮಟ್ಟ ಯಥಾ ಸ್ಥಿತಿ ಕಾಯ್ದುಕೊಳ್ಳಲು ಶೇ.30ರಷ್ಟು ನೀರನ್ನು ತುಂಬೆ ಡ್ಯಾಂನ ಕೆಳಭಾಗದಿಂದ ನಿರಂತರ ಪಂಪಿಂಗ್ ಮಾಡಲಾಗುತ್ತಿದೆ.

    ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts