More

    ಲೋಕಾ ಕಣದಲ್ಲಿ ಹೆಚ್ಚಿದ ಗುಂಪುಗಾರಿಕೆ

    ಕಿರುವಾರ ಎಸ್​. ಸುದರ್ಶನ್​ ಕೋಲಾರ
    ಲೋಕಸಭಾ ಚುನಾವಣಾ ಕಣದಲ್ಲಿರುವ ಪ್ರಚಾರ ಬಿರುಸುಗೊಂಡಿರುವ ನಡುವೆ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರಲ್ಲಿನ ಗುಂಪುಗಾರಿಕೆ ಹೆಚ್ಚುತ್ತಿರುವುದು ಅಭ್ಯರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

    ಕೋಲಾರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಇತ್ತೀಚೆಗೆ ಅಭ್ಯರ್ಥಿಗಳ ಪರವಾಗಿ ರಾಜ್ಯ ನಾಯಕರು ಪ್ರಚಾರಕ್ಕೆ ಆಗಮಿಸುತ್ತಿದ್ದು, ನಾಯಕರ ಭಾಷಣದ ವೇಳೆ ಸ್ಥಳಿಯವಾಗಿ ಪರಿಣಾಮ ಬೀರುವ ಬಾಂಬ್​ ಸಿಡಿಸುತ್ತಿದ್ದಾರೆ. ಇದು ಕಾರ್ಯಕರ್ತರು, ಮುಖಂಡರ ಅಸಮಾಧಾನಕ್ಕೂ ಕಾರಣವಾಗುತ್ತಿದೆ.
    ಮೈತ್ರಿ ಪಕ್ಷದಿಂದ ವಿಧಾನಸಭಾವಾರು ಸಮನ್ವಯ ಸಮಿತಿ ಸಭೆ ಪೂರ್ಣಗೊಂಡಿದ್ದು, ಹೋಬಳಿವಾರು ಸಭೆ ಹಮ್ಮಿಕೊಂಡಿದ್ದಾರೆ. ಎನ್​ಡಿಎ ಅಭ್ಯರ್ಥಿ ಮಲ್ಲೇಶ್​ ಬಾಬು ಪರವಾಗಿ ಈಗಾಲೇ ಸ್ಟಾರ್​ ಪ್ರಚಾರಕಿ ಶ್ರುತಿ, ಪ್ರತಿಪಕ್ಷದ ನಾಯಕ ಆರ್​.ಅಶೋಕ್​ ಸೇರಿ ಹಲವರು ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್​ನಿಂದಲೂ ವಿಧಾನಸಭಾ ಕ್ಷೇತ್ರವಾರು ಮುಖಂಡರ ಸಭೆಗಳು ಮುಗಿದಿದ್ದು, ಹೋಬಳಿಮಟ್ಟದಲ್ಲಿ ಪ್ರಚಾರ ಹಮ್ಮಿಕೊಂಡಿದ್ದಾರೆ. ಗೌತಮ್​ ಪರ ಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​, ಸಚಿವರಾದ ಡಾ.ಎಂ.ಸಿ.ಸುಧಾಕರ್​, ಬೈರತಿ ಸುರೇಶ್​ ಸೇರಿ ಹಲವು ರಾಜ್ಯ ಮುಖಂಡರು ಆಗಮಿಸಿದ್ದರು. ಆದರೆ, ರಾಜ್ಯ ನಾಯಕರು ಜಿಲ್ಲೆಗೆ ಆಗಮಿಸಿದಾಗ ರಾಜಕೀಯ ಮುಖಂಡರು, ಕಾರ್ಯಕರ್ತರ ಗುಂಪುಗಾರಿಗೆ ಪ್ರದರ್ಶನವಾಗುತ್ತಿದೆ. ಇದು ಗೆಲುವಿನ ಮೇಲೆ ಪರಿಣಾಮ ಬೀರಲಿದ್ದು, ಭಿನ್ನಾಭಿಪ್ರಾಯ ಶಮನ ಮಾಡುವುದು ಸವಾಲಾಗಿದೆ.

    ಎಲ್ಲೂ ಕಾಣಿಸಿಕೊಳ್ಳದ ಕೆಎಚ್​ಎಂ ಬೆಂಬಲಿಗರು
    ಲೋಕಸಭೆ ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ, ಕಾಂಗ್ರೆಸ್​ ಅಭ್ಯರ್ಥಿ ಗೌತಮ್​ ಅವರ ಜತೆ ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿ ಅನಿಲ್​ ಕುಮಾರ್​ ಹೊರತುಪಡಿಸಿದರೆ ಬೇರೆ ಯಾರು ಕಾಣಿಸಿಕೊಳ್ಳುತ್ತಿಲ್ಲ. ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಲಕ್ಷ್ಮಿ ನಾರಾಯಣ ಸೇರಿ ಇತರ ಪದಾಧಿಕಾರಿಗಳು ವೇದಿಕೆಗಳಲ್ಲಿ ಕಾಣಿಸಿಕೊಳ್ಳದಿರುವುದು ಕಾರ್ಯಕರ್ತರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಚುನಾವಣೆ ಪ್ರಚಾರಕ್ಕೆ ಜಿಲ್ಲೆಯಲ್ಲಿನ ಕಾಂಗ್ರೆಸ್​ ಕೆಲ ಶಾಸಕರ, ಮುಖಂಡರ ಸಹಕಾರ ಸಿಗುತ್ತಿಲ್ಲ ಎಂದು ಗೌತಮ್​ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಬಳಿ ಅಳಲು ತೊಡಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸಚಿವ ಕೆ.ಎಚ್​.ಮುನಿಯಪ್ಪ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವುದು ಅಷ್ಟಕ್ಕಷ್ಟೇ. ಇನ್ನು ಕೆಜಿಎ್​ ಶಾಸಕಿ ಎಂ.ರೂಪಕಲಾ ಕ್ಷೇತ್ರ ಬಿಟ್ಟು ಹೊರ ಬಂದಿಲ್ಲ.

    ಉಭಯ ಪಕ್ಷಗಳಲ್ಲಿ ಭಿನ್ನಮತದ ಬೇಗುದಿ
    ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಪಾಳಯದ ಗುಂಪುಗಾರಿಕೆ ಜಗಜ್ಜಾಹಿರಾಗಿದೆ. ಮೈತ್ರಿ ಪಕ್ಷಗಳ ಮುಖಂಡರ ನಡುವೆಯೂ ಭಿನ್ನಮತ ಶುರುವಾಗಿದೆ. ಕೆಜಿಎಫ್​ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಸಂಸದ ಮುನಿಸ್ವಾಮಿ ನಡುವಿನ ವೈಮನಸ್ಸು ಮುಂದುವರಿದಿದೆ. ಕೋಲಾರ ಹಾಗೂ ಕೆಜಿಎಫ್​ನಲ್ಲಿ ನಡೆದ ಜೆಡಿಎಸ್​ ಮತ್ತು ಬಿಜೆಪಿ ಸಮನ್ವಯ ಸಭೆಗಳಲ್ಲೂ ಕೂಡ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ವೇದಿಕೆ ಮೇಲೆಯೇ ಪ್ರದರ್ಶನವಾಗಿತ್ತು. ಕೆಜಿಎಫ್​ನಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಸಂಸದರನ್ನು ಹೊರಗಿಟ್ಟು ಸಭೆ ಮಾಡಿದ್ದರು. ಸಂಸದ ಮುನಿಸ್ವಾಮಿ ಬೆಂಬಲಿಗ ಮೋಹನ್​ಕೃಷ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮತ್ತು ಚುನಾವಣೆಗೆ ಬೆಂಬಲ ಕೋರುವ ವಿಚಾರದಕ್ಕೂ ಸಂಪಂಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    • ಸಂಸದ-ಮಾಜಿ ಶಾಸಕರ ನಡುವೆ ಭಿನ್ನಮತ
      ಜಿಲ್ಲೆಯ ಬಿಜೆಪಿಯಲ್ಲಿ ಭಿನ್ನಮತದ ಹೊಗೆಯಾಡುತ್ತಲೇ ಇದೆ. ಆದರೆ ಜೆಡಿಎಸ್​ ಅಭ್ಯರ್ಥಿ ಎನ್ನುವ ಕಾರಣಕ್ಕೆ ಬಿಜೆಪಿ ಮುಖಂಡರ ನಡುವೆ ಭಿನ್ನಾಭಿಪ್ರಾಯ ಅಷ್ಟಾಗಿ ಬಯಲಾಗುತ್ತಿಲ್ಲ. ಮಾಜಿ ಶಾಸಕರಾದ ವರ್ತೂರು ಆರ್​.ಪ್ರಕಾಶ್​, ಕೆ.ಎಸ್​.ಮಂಜುನಾಥ್​ಗೌಡ, ಬಿ.ಪಿ.ಮುನಿವೆಂಕಟಪ್ಪ ಮತ್ತು ಸಂಸದ ಎಸ್​.ಮುನಿಸ್ವಾಮಿ ನಡುವೆ ಹೊಂದಾಣಿಕೆ ಕೊರತೆಯಿದೆ. ಮೇಲ್ನೋಟಕ್ಕೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೂ ಕಾರ್ಯಕ್ರಮ ಆಯೋಜನೆಯಲ್ಲಿ ಸಮನ್ವಯತೆಯಿಲ್ಲದಂತಾಗಿದೆ. ಮಾಲೂರಿನ ಹೂಡಿ ವಿಜಯ್​ಕುಮಾರ್​ ಅವರನ್ನು ಜೆಡಿಎಸ್​ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಭೇಟಿ ಮಾಡಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ಕೋರಿದ್ದಾರೆ. ಇದಕ್ಕೆ ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ಗೌಡ ಅವರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನಲಾಗಿದೆ.
    • ಕಾರ್ಯಕರ್ತರನ್ನು ಸಂಪರ್ಕಿಸುವಲ್ಲಿ ವಿಫಲ
      ಜೆಡಿಎಸ್​ನಲ್ಲೂ ಮುಖಂಡರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿವೆ. ವೇದಿಕೆ ಹಂಚಿಕೆ, ಸಂಪನ್ಮೂಲ ವಿಚಾರ ಹೀಗೆ ಹಲವು ವಿಷಯಗಳಲ್ಲಿ ಉಸ್ತುವಾರಿ ವಹಿಸಿಕೊಳ್ಳಲು ನಾ ಮುಂದು, ತಾ ಮುಂದು ಎಂದು ಒಳಗೊಳಗೆ ಕಿತ್ತಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೆಡಿಎಸ್​ ಬಲಿಷ್ಠವಾಗಿದ್ದರೂ ಪದಾಧಿಕಾರಿಗಳು ಮೂಲ ಕಾರ್ಯಕರ್ತರನ್ನು ಸಂಪರ್ಕಿಸುವಲ್ಲಿ ವಿಫಲರಾಗುತ್ತಿದ್ದಾರೆ.
    • ಒಂದಾಗದ ರಾಜೀವ್​ ಗೌಡ, ಪುಟ್ಟು ಆಂಜಿನಪ್ಪ
      ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ರಾಜೀವ್​ಗೌಡ ಅವರಿಗೆ ಬಂಡಾಯವಾಗಿದ್ದ ಪುಟ್ಟು ಆಂಜಿನಪ್ಪ ಅವರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಲಾಗಿದೆ. ಆದರೆ ಇಬ್ಬರ ನಡುವೆ ಮುನಿಸು ಮುಂದುವರಿದಿದ್ದು, ಇಬ್ಬರನ್ನು ಒಗ್ಗೂಡಿಸುವ ಜವಾಬ್ದಾರಿ ಹೈಕಮಾಂಡ್​ ಮಾಜಿ ಸಚಿವ ವಿ.ಮುನಿಯಪ್ಪಗೆ ಒಪ್ಪಿಸಿದೆ. ಎರಡ್ಮೂರು ಸುತ್ತು ಸಂಧಾನ ನಡೆದಿದ್ದು, ವಿಲಗೊಂಡಿವೆ ಎನ್ನಲಾಗುತ್ತಿದೆ.
    • ರೋಡ್​ ಶೋ ರದ್ದು
      ಪ್ರತಿಪಕ್ಷ ನಾಯಕ ಆರ್​.ಅಶೋಕ್​ ಅವರು ಮೈತ್ರಿ ಅಭ್ಯರ್ಥಿ ಪರವಾಗಿ ಬಂಗಾರಪೇಟೆಯಲ್ಲಿ ರೋಡ್​ ಶೋ ಮೂಲಕ ಮತಯಾಚಿಸಲು ಆಗಮಿಸಿದ್ದರು. ಅರಿನಾಯಕನಹಳ್ಳಿ ಸಮೀಪ ಬಹಿರಂಗ ಸಭೆ ಮುಗಿದ ನಂತರ ಬಂಗಾರಪೇಟೆ ಪಟ್ಟಣದಲ್ಲಿ ರೋಡ್​ ಶೋ ಹಮ್ಮಿಕೊಳ್ಳಲಾಗಿತ್ತು. ಕೋಲಾರದಲ್ಲಿ ಆಯೋಜಿಸಿದ್ದ ಎಸ್ಸಿ ಎಸ್ಟಿ ಸಮಾವೇಶಕ್ಕೆ ಮಾಜಿ ಶಾಸಕರಾದ ವೈ.ಸಂಪಂಗಿ, ಬಿ.ಪಿ.ವೆಂಕಟಮುನಿಯಪ್ಪ ಅವರನ್ನು ಆಹ್ವಾನಿಸಿರಲಿಲ್ಲ. ಇದರಿಂದಾಗಿ ಬಂಗಾರಪೇಟೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ರೋಡ್​ ಶೋ ರದ್ದುಗೊಳಿಸಲಾಯಿತು. ಬಿಜೆಪಿ ಮುಖಂಡರಾದ ಮಹೇಶ್​, ವೆಂಕಟೇಶ್​ ರೋಡ್​ ಶೋ ಆರಂಭಕ್ಕೂ ಮುನ್ನ ವಿರೋಧ ಮಾಡಿದ್ದ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts