More

    ಲಿಚ್ಚಿ ಹಣ್ಣಿಗೆ ಹೆಚ್ಚಿದ ಬೇಡಿಕೆ

    ಸಿದ್ದಾಪುರ: ಕೊಡಗಿನ ಲಿಚ್ಚಿ ಹಣ್ಣಿಗೆ ಕೇರಳ, ಬೆಂಗಳೂರು ಹಾಗೂ ತಮಿಳುನಾಡಿನಲ್ಲಿ ಬೇಡಿಕೆ ಹೆಚ್ಚಾಗಿದ್ದು, ಕೆ.ಜಿ.ಗೆ 250 ರೂ.ನಿಂದ 300 ರೂ.ವರೆಗೂ ಮಾರಾಟವಾಗುತ್ತಿವೆ.

    ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕೆ ಇಲಾಖೆಯಲ್ಲಿ 20 ವರ್ಷಗಳಿಂದ ಲಿಚ್ಚಿ ಹಣ್ಣು ಬೆಳೆಯಲಾಗುತ್ತಿದೆ. 50ಕ್ಕೂ ಹೆಚ್ಚು ಮರಗಳಲ್ಲಿ ಲಿಚ್ಚಿ ಹಣ್ಣು ಬೆಳೆದಿದ್ದು, ಉತ್ತಮ ಫಸಲು ನೀಡುತ್ತಿವೆ.

    ಈ ಹಣ್ಣಿನ ಮೂಲ ದಕ್ಷಿಣ ಚೀನಾದ ಓಮನ್ ಪ್ರಾಂತ್ಯ. ಮ್ಯಾನ್ಮಾರ್,ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಥ್ಲಾಯೆಂಡ್ ಹಾಗೂ ಹಾಕಾಂಗ್‌ನಲ್ಲಿ ಲಿಚ್ಚಿ ಹಣ್ಣನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ ಶೇ.50ಕ್ಕೂ ಹೆಚ್ಚು ಪ್ರದೇಶದಲ್ಲಿ ಲಿಚ್ಚಿ ಬೆಳೆಯಲಾಗುತ್ತಿದೆ. ಉತ್ತರ ಭಾರತದ ಬಿಹಾರ, ಉತ್ತರಪ್ರದೇಶ, ಜಾರ್ಖಂಡ್, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ ಹಾಗೂ ಒಡಿಶಾದಲ್ಲಿ ಲಿಚ್ಚಿ ಹಣ್ಣು ಬೆಳೆಯಲಾಗುತ್ತಿದೆ. ವಿಶೇಷವೇನೆಂದರೆ ಉತ್ತರ ಭಾರತದಲ್ಲಿ ಏಪ್ರಿಲ್ ಅಥವಾ ಮೇನಲ್ಲಿ ಲಿಚ್ಚಿ ಕೊಯ್ಲಿಗೆ ಬರುತ್ತದೆ. ಆ ಸಮಯದಲ್ಲಿ ಲಿಚ್ಚಿಗೆ ಬೇಡಿಕೆ ಕಡಿಮೆ ಇರುವುದರಿಂದ ಕೆಜಿ 60 ರೂ.ಗೆ ಮಾರಾಟವಾಗುತ್ತದೆ.

    ಕೊಡಗು ಜಿಲ್ಲೆಯಲ್ಲಿ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಲಿಚ್ಚಿ ಕೊಯ್ಲಿಗೆ ಬರುತ್ತದೆ. ಈ ಸಮಯದಲ್ಲಿ ದೇಶದ ಯಾವ ಭಾಗದಲ್ಲೂ ಲಿಚ್ಚಿ ಫಸಲು ಇರುವುದಿಲ್ಲ. ಆದ್ದರಿಂದ ಕೊಡಗಿನಲ್ಲಿ ಲಿಚ್ಚಿ ಬೆಳೆಯವವರು ಹಾಗೂ ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತಾರೆ. ಜಿಲ್ಲೆಯಲ್ಲಿ ಹೆಚ್ಚು ಲಿಚ್ಚಿ ಬೆಳೆಯುತ್ತಿರುವುದು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಇಲಾಖೆಯಲ್ಲಿ. ಕೆಲವು ಬೆಳೆಗಾರರು ತಮ್ಮ ತೋಟದಲ್ಲಿ ಒಂದೆರಡು ಮರದಲ್ಲಿ ಲಿಚ್ಚಿ ಹಣ್ಣು ಬೆಳೆದಿದ್ದಾರೆ.

    ಬಾವಲಿ ಕಾಟ, ರಾತ್ರಿ ಕಾವಲು: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಇಲಾಖೆಯ ಲಿಚ್ಚಿ ಹಣ್ಣನ್ನು ಟೆಂಡರ್ ಪಡೆದಿರುವ ವ್ಯಾಪಾರಿಗಳು, ಲಿಚ್ಚಿ ಉಳಿಸಲು ಹರಸಾಹಸಪಡುವಂತಾಗಿದೆ. ಲಿಚ್ಚಿ ಹಣ್ಣಿಗೆ ಬಾವಲಿ ಕಾಟ ತಪ್ಪಿದ್ದಲ್ಲ. ಬಾವಲಿ ಕಾಟವನ್ನು ತಪ್ಪಿಸಲು ವ್ಯಾಪಾರಿಗಳು ಮರಕ್ಕೆ ಬಲೆ ಹಾಕಿ ಹಣ್ಣನ್ನು ಸಂರಕ್ಷಿಸುತ್ತಿದ್ದಾರೆ. ರಾತ್ರಿ ವೇಳೆ ಕಳ್ಳರ ಹಾವಳಿ ಇರುವುದರಿಂದ ಮರದ ಪಕ್ಕದಲ್ಲೇ ಟೆಂಟ್ ಹಾಕಿ ಕಾವಲು ಕಾಯುತ್ತಿದ್ದಾರೆ.

    ಉತ್ತಮ ವಾತಾವರಣ: ಸಮಶೀತೋಷ್ಣ ವಲಯದಲ್ಲಿ ಉತ್ತಮ ಫಲ ಬರುವುದರಿಂದ, ಕೊಡಗಿನ ವಾತಾವರಣವು ಲಿಚ್ಚಿ ಬೆಳೆಗೆ ಪೂರಕವಾಗಿದೆ. ಬೀಜದಿಂದ ಗಿಡ ಬೆಳೆಸಿದರೆ, ಫಸಲಾಗಲು ಬಹಳ ವರ್ಷ ಬೇಕಾಗುತ್ತದೆ. ಆದ್ದರಿಂದ ಕಸಿ ಮಾಡಿ ಗಿಡಗಳನ್ನು ಬೆಳೆಸಿದರೆ ಮೂರ್ನಾಲ್ಕು ವರ್ಷದಲ್ಲಿ ಹಣ್ಣು ಫಸಲಿಗೆ ಬರುತ್ತದೆ.

    ಆಸಕ್ತಿ ತೋರದ ಜಿಲ್ಲೆಯ ಬೆಳೆಗಾರರು: ಲಿಚ್ಚಿ ಲಾಭದಾಯಕ ಬೆಳೆಯಾಗಿದೆ. ಮರವನ್ನು ನೆಟ್ಟು ಸಂರಕ್ಷಿಸಿದರೆ 4 ರಿಂದ 5 ವರ್ಷದೊಳಗೆ ಫಸಲು ನೀಡುತ್ತದೆ. ಆರಂಭದಲ್ಲಿ ಒಂದು ಮರದಲ್ಲಿ 20 ರಿಂದ 40 ಕೆಜಿ ಫಲ ಬಂದರೆ ಏಳೆಂಟು ವರ್ಷದಲ್ಲಿ ಒಂದೇ ಮರದಲ್ಲಿ 100 ಕೆಜಿಗೂ ಅಧಿಕ ಹಣ್ಣನ್ನು ಬೆಳೆಯಬಹುದು. ಆದರೆ ಜಿಲ್ಲೆಯ ಬೆಳೆಗಾರರಿಗೆ ಲಿಚ್ಚಿ ಬೆಳೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅಲ್ಲದೆ ಯಾರೂ ಈವರೆಗೆ ಲಿಚ್ಚಿ ಬೆಳೆಯತ್ತ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ.

    ಕಾಫಿ, ಕರಿಮೆಣಸಿನ ಬೆಲೆ ಕುಸಿತ ನಿರ್ವಹಣೆ ಸಮಸ್ಯೆಯಿಂದ ತೊಂದರೆಗೆ ಸಿಲುಕುವ ಜಿಲ್ಲೆಯ ಬೆಳೆಗಾರರು ಲಾಭದಾಯಕ ಬೆಳೆಯಾದ ಲಿಚ್ಚಿ ಬೆಳೆಯತ್ತ ಮುಖ ಮಾಡಿದರೆ ಖಂಡಿತ ಲಾಭ ಗಳಿಸಬಹುದಾಗಿದೆ.

    ಟೆಂಡರ್‌ಗಾಗಿ ಬಿಗ್ ಫೈಟ್: ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಭಾರತದಲ್ಲಿ ಲಿಚ್ಚಿ ಹಣ್ಣು ಲಭ್ಯವಾಗುವ ಏಕೈಕ ಜಿಲ್ಲೆ ಕೊಡಗು ಮಾತ್ರ. ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರೀಯ ತೋಟಗಾರಿಕಾ ಇಲಾಖೆ ಬಹಿರಂಗವಾಗಿ ಟೆಂಡರ್ ಮುಖಾಂತರ ಲಿಚ್ಚಿ ಹಣ್ಣನ್ನು ಮಾರಾಟ ಮಾಡುತ್ತದೆ. ಈ ವೇಳೆ ವ್ಯಾಪಾರಿಗಳು ಟೆಂಡರ್ ಪಡೆಯಲು ಪೈಪೋಟಿ ಬೀಳುವುದು ಸಾಮಾನ್ಯ. ಈ ಬಾರಿ 20ಕ್ಕೂ ಹೆಚ್ಚು ವ್ಯಾಪಾರಸ್ಥರು ಟೆಂಡರ್ ಪಡೆಯಲು ಪೈಪೋಟಿ ನಡೆಸಿದ್ದರು. ಕೊನೆಗೆ ಚೀಟಿ ಮುಖಾಂತರ ಟೆಂಡರ್ ಮುಕ್ತಾಯಗೊಂಡಿತು. ಈ ಬಾರಿ 5 ಲಕ್ಷ ರೂ.ಗೆ ಲಿಚ್ಚಿ ಹಣ್ಣು ಟೆಂಡರ್ ಪಡೆದಿದ್ದಾರೆ.

    ರಸ್ತೆ ಬದಿ, ಅಂಗಡಿಗಳಲ್ಲಿ ಮಾರಾಟ!; ಟೆಂಡರ್ ಪಡೆದು ವ್ಯಾಪಾರ ನಡೆಸುತ್ತಿರುವುದರಿಂದ ಜಿಲ್ಲೆಯ ವಿವಿಧ ಭಾಗಗಳ ರಸ್ತೆ ಬದಿ ಹಾಗೂ ಅಂಗಡಿಗಳಲ್ಲಿ ಕೆಜಿಗೆ 300 ರಿಂದ 350 ರೂ. ವರೆಗೆ ಮಾರಾಟ ಮಾಡುತ್ತಾರೆ. ಕೊಡಗಿಗೆ ವಿವಿಧ ರಾಜ್ಯಗಳಿಂದ ಆಗಮಿಸುವವ ಪ್ರವಾಸಿಗರು ಕೊಡಗಿನ ರುಚಿಕರವಾದ ಲಿಚ್ಚಿ ಹಣ್ಣನ್ನು ಖರೀದಿಸುವುದು ವಾಡಿಕೆ.

    ಚಳಿಗಾಲದ ವಾತಾವರಣದಲ್ಲಿ ಕೊಯ್ಲಿಗೆ ಬರುವುದರಿಂದ ಕೊಡಗಿನ ಲಿಚ್ಚಿ ಹಣ್ಣಿಗೆ ಉತ್ತಮ ಬೇಡಿಕೆಯಿದೆ. ಲಿಚ್ಚಿ ಹಣ್ಣಿನ ಮರಗಳು ಸರಿಯಾದ ಸಮಯಕ್ಕೆ ಹೂ ಬಿಡುತ್ತಿಲ್ಲ. ಹೂ ಬಿಡಲು ಎಲ್ಲ ಆಧುನಿಕ ತಂತ್ರಗಳನ್ನು ಬಳಸಲಾಗುತ್ತಿದೆ. ಕೊಡಗಿನಲ್ಲಿ ಲಿಚ್ಚಿ ಹಣ್ಣು ಬೆಳೆಯಲು ಉತ್ತಮ ವಾತಾವರಣವಿದೆ.
    ಮುರುಳೀಧರ್ ವಿಜ್ಞಾನಿ, ಕೇಂದ್ರೀಯ ತೋಟಗಾರಿಕಾ ಇಲಾಖೆ, ಚೆಟ್ಟಳ್ಳಿ

    ಇದೀಗ ಹಣ್ಣಾಗಿರುವ ಲಿಚ್ಚಿ ಹಣನ್ನು ಮಾತ್ರ ಕೊಯ್ಲು ಮಾಡಿ ಮಾರಾಟ ಮಾಡುತ್ತಿದ್ದೇವೆ. ಡಿಸೆಂಬರ್‌ನಲ್ಲಿ ಲಿಚ್ಚಿ ಹಣ್ಣು ಪೂರ್ಣ ಪ್ರಮಾಣದಲ್ಲಿ ಹಣ್ಣಾಗುತ್ತದೆ. ಕೊಡಗಿನಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದೇವೆ. ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಲಿಚ್ಚಿ ಹಣ್ಣು ಖರೀದಿಸಲು ಬರುತ್ತಿದ್ದಾರೆ.
    ಮಜೀದ್ ಪೊನ್ನತ್ಮೊಟ್ಟೆ, ಲಿಚ್ಚಿ ಹಣ್ಣು ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts