More

    ಮತದಾನದ ಶೇಖಡವಾರು ಪ್ರಮಾಣ ಹೆಚ್ಚಿಸಿ: ಅಧಿಕಾರಿಗಳಿಗೆ ಜಿಪಂ ಸಿಇಒ ಕೆ.ಎ.ಗಾಯತ್ರಿ

    ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ವಿನೂತನವಾದ ಸ್ವೀಪ್ ಚಟುವಟಿಕೆ ನಡೆಸಿ ಮತದಾರರಿಗೆ ಜಾಗೃತಿ ಮೂಡಿಸುವ ಮೂಲಕ ಮತದಾನದ ಶೇಖಡವಾರು ಪ್ರಮಾಣ ಹೆಚ್ಚಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ತಿಳಿಸಿದರು.
    ಲೋಕಸಭಾ ಚುನಾವಣೆ ಅಂಗವಾಗಿ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಚಟುವಟಿಕೆಯಡಿ ಮೈಸೂರು ತಾಲೂಕು ಸ್ವೀಪ್ ಸಮಿತಿಯಿಂದ ತಾಲೂಕು ಆಡಳಿತ ಸೌಧದ (ಮಿನಿ ವಿಧಾನಸೌಧ) ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ‘ಹಸ್ತಾಕ್ಷರ ಸಂಗ್ರಹ ಅಭಿಯಾನಕ್ಕೆ’ ಸಹಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
    ಗ್ರಾಮೀಣ ಭಾಗದ ಎಲ್ಲ ಸಾರ್ವಜನಿಕರಿಗೂ ಏ.26ರಂದು ಮತದಾನ ಮಾಡುವಂತೆ ಅರಿವು ಮೂಡಿಸಬೇಕು. ಮತದಾನದ ಮಹತ್ವ ಕುರಿತು ಅವರಿಗೆ ಮನವರಿಕೆ ಮಾಡುವಂತಹ ಸ್ವೀಪ್ ಚಟುವಟಿಕೆ ನಡೆಸಬೇಕು ಎಂದು ಎಲ್ಲ ಗ್ರಾಮ ಪಂಚಾಯಿತಿಯ ಪಿಡಿಒ ಅವರಿಗೆ ಸೂಚನೆ ನೀಡಿದರು.
    ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತಗಟ್ಟೆಗಳಿಗೆ ಗುಣಮಟ್ಟದ ಮೂಲ ಸೌಕರ್ಯವನ್ನು ಸಕಾಲಕ್ಕೆ ಒದಗಿಸಬೇಕು. ಪಿಡಿಒ ಅವರು ಚಲನವಲನ ವಹಿ ನಿರ್ವಹಿಸಿ, ಎಲ್ಲ ಮಾಹಿತಿ ನಮೂದಿಸಬೇಕು. ಮತಗಟ್ಟೆ ಅಧಿಕಾರಿಗಳ ಜತೆ ಚರ್ಚಿಸಿ ಅವರಿಗೆ ಅಗತ್ಯವಿರುವ ವಸ್ತುಗಳನ್ನು ನಿಗದಿತ ಸಮಯಕ್ಕೆ ಪೂರೈಸಲು ಕ್ರಮವಹಿಸಿ ಎಂದು ತಿಳಿಸಿದರು.
    ಮತಗಟ್ಟೆ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ನೆರಳು, ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಸೌಲಭ್ಯಕ್ಕಾಗಿ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಬೇಕು. ವಿಶ್ರಾಂತಿ ಕೊಠಡಿ ಮೀಸಲಿರಿಸಲು ಕ್ರಮವಹಿಸಬೇಕು. ವಿಶೇಷ ಮತಗಟ್ಟೆಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿ ಎಂದು ಸಲಹೆ ನೀಡಿದರು.
    ಆ್ಯಪ್ ಮೂಲಕ ದೂರು ನೀಡಿ:
    ಪ್ರತಿಯೊಬ್ಬರೂ ಕಡ್ಡಾಯವಾಗಿ ಸಿ-ವಿಜಿಲ್ ಆ್ಯಪ್ ಡೌನ್‌ಲೌಡ್ ಮಾಡಿಕೊಳ್ಳಬೇಕು. ಚುನಾವಣಾ ಅಕ್ರಮಗಳು ಕಂಡುಬಂದರೆ ಕೂಡಲೇ ಆ್ಯಪ್ ಮೂಲಕ ದೂರು ಸಲ್ಲಿಸಿ. ಪ್ರಥಮ ಬಾರಿಗೆ ಮತ ಹಾಕುವವರಿಗೆ ತಿಳಿವಳಿಕೆ ನೀಡಲು ತರಬೇತಿ ಆಯೋಜಿಸಬೇಕು. ಹಿರಿಯ ನಾಗರಿಕರ ಸಹಾಯಕ್ಕಾಗಿ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಿ. ಒಟ್ಟಾರೆ ಯಾವುದೇ ಲೋಪ ಉಂಟಾಗದಂತೆ ಪರಸ್ಪರ ಚರ್ಚಿಸಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಎಂದರು.
    ತೊಂದರೆ ಆಗದಂತೆ ಕ್ರಮಕೈಗೊಳ್ಳಿ:
    ಚುನಾವಣೆ ಸಿದ್ಧತೆಯ ಜತೆಗೆ ಬರಗಾಲ ಅನೇಕ ಗ್ರಾಮಗಳನ್ನು ವ್ಯಾಪಿಸಿದ್ದು, ಸಮರ್ಪಕ ಕುಡಿಯುವ ನೀರಿನ ಪೂರೈಸಲು ನಿಗಾವಹಿಸಿ ಕೆಲಸ ಮಾಡಬೇಕು. ನರೇಗಾ ಯೋಜನೆಯಡಿ ಹೆಚ್ಚಿನ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಗುಳೇ ಹೋಗುವುದನ್ನು ತಡೆಗಟ್ಟಬೇಕು. ಹೆಚ್ಚಾಗಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.
    ಸಹಾಯಕ ಸ್ವೀಪ್ ನೋಡಲ್ ಅಧಿಕಾರಿ ಎಂ.ಶಾಂತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಧರಣೀಶ್, ತಾ.ಪಂ. ಸಹಾಯಕ ನಿರ್ದೇಶಕರಾದ ಭವ್ಯಾ, ಗಂಗಾಧರ, ಅನುಷ್ಠಾನ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯಿತಿ, ತಾಲೂಕು ಕಚೇರಿ ಸಿಬ್ಬಂದಿ, ಎಲ್ಲ ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts