More

    ಸೋಂಕು ನಿಯಂತ್ರಣ ಸೌಲಭ್ಯಕ್ಕೆ ಕ್ರಮ, ಸಚಿವ ಕೋಟ ಮಾಹಿತಿ

    ಮಂಗಳೂರು: ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರ ಪರೀಕ್ಷೆ ಮಾಡುವ ಉದ್ದೇಶದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ ಪರೀಕ್ಷಾ ಯಂತ್ರವನ್ನು ಮೂರು ದಿನಗಳ ಒಳಗಾಗಿ ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆ ನೀಡುವ ಕುರಿತು ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಈ ಮಾಹಿತಿ ನೀಡಿದರು.

    ಕೋವಿಡ್‌ನಿಂದ ಮರಣ ಹೊಂದಿದವರ ಶವ ಸಾಗಾಣಿಕೆಗೆ ಉಚಿತ ಆಂಬುಲೆನ್ಸ್ ನೀಡುವುದರೊಂದಿಗೆ ಶವ ಸಂಸ್ಕಾರದ ವೆಚ್ಚವನ್ನೂ ಸರ್ಕಾರವೇ ಭರಿಸಲಿದ್ದು, ಕೂಡಲೇ ತಾಲೂಕಿನ ತಹಸೀಲ್ದಾರ್‌ಗಳಿಗೆ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

    ತಾಲೂಕು ಕೇಂದ್ರದ ಕೋವಿಡ್ ಆಸ್ಪತ್ರೆಗಳಲ್ಲಿ 50 ಐಸಿಯು ಘಟಕಗಳನ್ನು ಸ್ಥಾಪಿಸಿ, ಚಿಕಿತ್ಸೆ ನೀಡಬೇಕು. ಇದರಿಂದಾಗಿ ಜಿಲ್ಲಾ ಮಟ್ಟದ ಕೋವಿಡ್ ಕೇಂದ್ರಗಳಲ್ಲಿ ಒತ್ತಡ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರಬೇಕೆಂಬ ನಿಟ್ಟಿನಲ್ಲಿ ಜಾರಿಗೊಳಿಸಲಾಗಿರುವ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ವಿಡಿಯೋ ಸಂವಾದದಲ್ಲಿ ತಿಳಿಸಿದ್ದು, ಅದನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

    ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಪಂ ಸಿಇಒ ಡಾ.ಕುಮಾರ್, ಶಾಸಕ ರಾಜೇಶ್ ನಾಯ್ಕ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್ ಉಪಸ್ಥಿತರಿದ್ದರು.

    ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್: ಕರ್ಫ್ಯೂನಿಂದಾಗಿ ನಗರ ಪ್ರದೇಶದಿಂದ ಜನರು ಗ್ರಾಮಗಳತ್ತ ವಲಸೆ ಬರುತ್ತಿದ್ದಾರೆ. ಅವರಿಂದ ಸೋಂಕು ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ. ಇವುಗಳ ನಿಯಂತ್ರಣಕ್ಕೆ ಗ್ರಾಮಗಳ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ಗಳನ್ನು ರಚನೆ ಮಾಡುವುದರೊಂದಿಗೆ ಕಾಳಜಿ ವಹಿಸಬೇಕು. ರೋಗ ಇತರರಿಗೆ ಹರಡದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಸೂಚಿಸಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವವರಿಗೆ ಉತ್ತಮ ಚಿಕಿತ್ಸೆ ನೀಡುವುದರ ಜತೆಗೆ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಗುರುತಿಸಿ, ಅವರನ್ನು ಹೋಂ ಕ್ವಾರಂಟೈನ್ ಇಡುವುದರ ಜತೆಗೆ ಮೊಬೈಲ್ ಸ್ವಾೃಬ್ ಟೆಸ್ಟಿಂಗ್ ವಾಹನಗಳನ್ನು ಅವರಿದ್ದಲ್ಲಿಯೇ ಕೊಂಡೊಯ್ದು ಕೋವಿಡ್ ಟೆಸ್ಟ್‌ನ್ನು ಮಾಡಲು ಮುಂದಾಗಬೇಕು ಎಂದರು.

    ಐಸಿಯು ಬೆಡ್‌ಗಳನ್ನು ಹೆಚ್ಚಿಸಿ
    ವೈದ್ಯಕೀಯ ತಜ್ಞರ ಸಮಿತಿ ಸಭೆಯಲ್ಲಿ ಉಡುಪಿ ಡಿಸಿ ಸೂಚನೆ

    ಉಡುಪಿ: ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮುಂಜಾಗ್ರತೆಯಾಗಿ ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳ ಸಂಖ್ಯೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

    ಶುಕ್ರವಾರ ಜಿಲ್ಲಾ ಮಟ್ಟದ ವೈದ್ಯಕೀಯ ತಜ್ಞರ ಸಮಿತಿ ಸಭೆ ನಡೆಸಿದ ಅವರು, ಬೆಡ್ ಮ್ಯಾನೇಜ್‌ಮೆಂಟ್ ಸಿಸ್ಟಂನಲ್ಲಿ ಪ್ರತಿದಿನ ಆಸ್ಪತ್ರೆಗೆ ದಾಖಲಾಗುವ ಮತ್ತು ಬಿಡುಗಡೆಯಾಗುವ ರೋಗಿಗಳ ವಿವರಗಳನ್ನು ದಾಖಲಿಸಬೇಕು. ಲಭ್ಯ ಬೆಡ್‌ಗಳ ಸಂಖ್ಯೆಯನ್ನು ಪ್ರತಿದಿನ ಖಾಸಗಿ ಆಸ್ಪತ್ರೆಗಳು ತಿಳಿಸಬೇಕು ಎಂದರು.
    ಸೋಂಕಿತರನ್ನು ಸೂಕ್ತ ರೀತಿ ಪರೀಕ್ಷಿಸಿ ಅಗತ್ಯವಿದ್ದವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಿ, ಸೋಂಕು ತೀವ್ರವಾಗಿಲ್ಲದವರನ್ನು ಅನಗತ್ಯವಾಗಿ ಆಸ್ಪತ್ರೆಗೆ ದಾಖಲಿಸಬೇಡಿ. ಆಸ್ಪತ್ರೆಯಿಂದ ಆಸ್ಪತ್ರೆಗೆ ಸೋಂಕಿತರನ್ನು ವರ್ಗಾಯಿಸುವಾಗ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ, ರೋಗಿಯ ಸಂಪೂರ್ಣ ವಿವರ ದಾಖಲಿಸಿ ಎಂದು ಹೇಳಿದರು. ಪ್ರಸ್ತುತ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಅವಶ್ಯವಿದ್ದ ರೋಗಿಗಳಿಗೆ ಮಾತ್ರ ರೆಮ್‌ಡಿಸಿವಿರ್ ನೀಡಿ ಎಂದು ಸೂಚಿಸಿದರು.
    ಜಿಪಂ ಸಿಇಒ ಡಾ.ನವೀನ್ ಭಟ್, ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್ ಇದ್ದರು.

    ಪರೀಕ್ಷೆಯಲ್ಲಿ ಉಡುಪಿ ಮುಂದೆ: ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 6 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಬೆಂಗಳೂರು ನಂತರ ಪ್ರತಿ ಮಿಲಿಯನ್‌ಗೆ ಅತಿ ಹೆಚ್ಚು ಕೋವಿಡ್ ಪರೀಕ್ಷೆ ನಡೆಸುತ್ತಿರುವ ಜಿಲ್ಲೆ ಉಡುಪಿಯಾಗಿದೆ. ಸಾರ್ವಜನಿಕರು ಕೋವಿಡ್ ನಿಯಂತ್ರಣ ಕುರಿತಂತೆ ಸರ್ಕಾರ ಸೂಚಿಸಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜಿಲ್ಲೆಯಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಡಿಸಿ ಹೇಳಿದರು.

    ಮಂಗಳೂರಿನಲ್ಲಿ ಐಸಿಯು ಬೆಡ್ ಕೊರತೆ: ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗಾಗಿ ಮೀಸಲಿಸಿದ ಐಸಿಯು ಬೆಡ್‌ಗಳ ಕೊರತೆ ಎದುರಾಗಿರುವ ಲಕ್ಷಣ ಗೋಚರಿಸಿದೆ. ಜಿಲ್ಲೆಯ ಒಂಭತ್ತು ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಹುಡುಕಿ ಕೋವಿಡ್ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಕಾಸರಗೋಡು ಜಿಲ್ಲೆಗೆ ವಾಪಸ್ ಕೊಂಡುಹೋಗಿರುವ ಆಂಬುಲೆನ್ಸ್ ಚಾಲಕರೋರ್ವರ ಧ್ವನಿ ಸಂದೇಶವೊಂದು ವೈರಲ್ ಆಗಿದೆ.

    ‘ಇದು ನನ್ನ ವೃತ್ತಿ ಜೀವನದಲ್ಲೇ ಪ್ರಥಮ ಅನುಭವ. ಇಲ್ಲಿವರೆಗೆ ಐಸಿಯು ಬೆಡ್ ಇಲ್ಲ ಎಂದು ಯಾವ ರೋಗಿಯನ್ನೂ ನಾನು ವಾಪಸ್ ಕೊಂಡು ಹೋಗಿಲ್ಲ’ ಎಂದು ಕಾಸರಗೋಡು ಆಂಬುಲೆನ್ಸ್ ಚಾಲಕ ಹೇಳಿಕೊಂಡಿದ್ದಾರೆ.

    ಈ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ‘ವಿಜಯವಾಣಿ’ ಕೆಲವು ಆಸ್ಪತ್ರೆಗಳನ್ನು ಸಂಪರ್ಕಿಸಿದಾಗ, ಕೋವಿಡ್ ಸೋಂಕಿತರಿಗಾಗಿ ಮೀಸಲಿರಿಸಿದ ಬೆಡ್‌ಗಳು ಖಾಲಿ ಇಲ್ಲದಿರುವುದು ತಿಳಿದುಬಂದಿದೆ.

    ‘ಐಸಿಯು ಬೆಡ್ ಇಲ್ಲ ಎನ್ನುವ ಕಾರಣದಿಂದ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ರೋಗಿ ತೊಂದರೆಗೆ ಒಳಗಾಗಿಲ್ಲ. ಆದರೆ ಅನಗತ್ಯ ಭಯದಿಂದ ಹೆಚ್ಚಿನವರು ಐಸಿಯು ಬೆಡ್‌ಗೆ ಬೇಡಿಕೆ ಇಡುತ್ತಾರೆ. ದೂರದಿಂದ ಬರುವವರು ದೂರವಾಣಿ ಮೂಲಕ ಸಂಬಂದಫಟ್ಟ ಆಸ್ಪತ್ರೆಗಳನ್ನು ಸಂಪರ್ಕಿಸಿ ಬೆಡ್‌ಗಳ ಲಭ್ಯತೆ ಬಗ್ಗೆ ತಿಳಿದು ರೋಗಿಯನ್ನು ಕರೆತರುವುದು ಒಳ್ಳೆಯದು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ತಿಳಿಸಿದ್ದಾರೆ.

    ಮತ್ತೆ ಸಾವಿರ ದಾಟಿದ ಸೋಂಕಿತರು
    ದ.ಕ. ಜಿಲ್ಲೆಯಲ್ಲಿ 1205 ಮಂದಿಗೆ ಪಾಸಿಟಿವ್ಓ, ರ್ವ ಸಾವು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಶುಕ್ರವಾರ ದೈನಂದಿನ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು, 1205 ಜನರಿಗೆ ಸೋಂಕು ದೃಢಪಟ್ಟಿದೆ. ಇದು ಜಿಲ್ಲೆಯ ದೈನಂದಿನ ಗರಿಷ್ಠ ದಾಖಲಾತಿ. ಗುರುವಾರ ದಾಖಲಾದ 1175 ಮಂದಿಯ ಸೋಂಕು ಒಂದು ದಿನದ ಹಿಂದಿನ ತನಕ ಜಿಲ್ಲೆಯ ಗರಿಷ್ಠ ದಾಖಲಾತಿ ಆಗಿತ್ತು.

    ಖಾಸಗಿ ಆಸ್ಪತ್ರೆಯಲ್ಲಿ ಓರ್ವ ಪುರುಷ ರೋಗಿ ಮೃತಪಟ್ಟಿದ್ದಾರೆ. 72 ವರ್ಷ ವಯಸ್ಸಿನ ಅವರು ಜ್ವರ, ಉಸಿರಾಟ ಮತ್ತಿತರ ಸಮಸ್ಯೆ ಹೊಂದಿದ್ದು, ಏ.15ರಂದು ಆಸ್ಪತ್ರೆಗೆ ದಾಖಲಾಗಿ 23ರಂದು ಮೃತಪಟ್ಟಿದ್ದರು.

    ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆಗೆ ಸವಾಲಾಗುತ್ತಿದೆ. ಪ್ರಸಕ್ತ 6486 ಮಂದಿ ಸೋಂಕಿತರು ಆಸ್ಪತ್ರೆ ಮತ್ತು ಹೋಂ ಐಸೋಲೇಶನ್‌ಗಳಲ್ಲಿದ್ದಾರೆ. ಇದುವರೆಗಿನ ಒಟ್ಟು ಪಾಸಿಟಿವ್ ಸಂಖ್ಯೆ 45,109ಕ್ಕೆ ತಲುಪಿದೆ. ಶುಕ್ರವಾರ 380 ಮಂದಿ ಸೋಂಕು ಮುಕ್ತರಾಗಿದ್ದಾರೆ.

    ಐದು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡ ಜಪ್ಪಿನಮೊಗರು ಬಳಿಯ ಒಂದು ಮನೆಯನ್ನು ಕಂಟೇನ್ಮೆಂಟ್ ವಲಯ ಎಂದು ಆರೋಗ್ಯ ಇಲಾಖೆ ಗುರುತಿಸಿದೆ.

    ಉಡುಪಿಯಲ್ಲಿ 660 ಮಂದಿಗೆ ಕೋವಿಡ್, ಇಬ್ಬರ ಸಾವು

    ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 660 ಮಂದಿಗೆ ಕರೊನಾ ದೃಢಪಟ್ಟಿದ್ದು, ಉಡುಪಿಯಲ್ಲಿ 73 ವರ್ಷದ ಪುರುಷ ಹಾಗೂ 50 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ 346 ಉಡುಪಿ, 217 ಕುಂದಾಪುರ, 93 ಮಂದಿ ಕಾರ್ಕಳ ತಾಲೂಕಿನವರು. ನಾಲ್ವರು ಹೊರ ಜಿಲ್ಲೆಯವರು. 57 ಮಂದಿ ಕೋವಿಡ್ ಅಸ್ಪತ್ರೆಯಲ್ಲಿ ಹಾಗೂ 603 ಮಂದಿ ಹೋಂ ಐಸೋಲೇಶನ್‌ನಲ್ಲಿದ್ದಾರೆ. 419 ಮಂದಿ ಗುಣವಾಗಿದ್ದು, ಸಕ್ರಿಯ ಪ್ರಕರಣ ಸಂಖ್ಯೆ 2596ಕ್ಕೆ ಹಾಗೂ ಮೃತರ ಸಂಖ್ಯೆ 198ಕ್ಕೆ ಏರಿಕೆಯಾಗಿದೆ.

    8330 ಮಂದಿಗೆ ಲಸಿಕೆ: ಶುಕ್ರವಾರ 10 ಸಾವಿರ ಡೋಸ್ ಲಸಿಕೆ ಜಿಲ್ಲೆಯ ವಿವಿಧ ಅಸ್ಪತ್ರೆಗಳಿಗೆ ಸರಬರಾಜಾಗಿದ್ದು, ಇದರಲ್ಲಿ 4303 ಮಂದಿಗೆ ಮೊದಲ ಡೋಸ್ ಹಾಗೂ 4027 ಮಂದಿಗೆ 2ನೇ ಡೋಸ್ ವಿತರಿಸಲಾಗಿದೆ. ಜಿಲ್ಲಾಸ್ಪತ್ರೆಗೆ 200 ಡೋಸ್ ನೀಡಲಾಗಿದ್ದು, ಬೆಳಗ್ಗೆ 9.30ಕ್ಕೆ ಎಲ್ಲ ಖಾಲಿಯಾಗಿದೆ. ಮತ್ತೆ ಅಗಮಿಸಿದ 100ಕ್ಕೂ ಅಧಿಕ ಮಂದಿ ವಾಪಸ್ ತೆರಳಿದ್ದಾರೆ.

    ಕಾಸರಗೋಡಲ್ಲಿ 813 ಕೇಸ್: ಕಾಸರಗೋಡು ಜಿಲ್ಲೆಯ 813 ಮಂದಿ ಸೇರಿ ಕೇರಳದಲ್ಲಿ ಶುಕ್ರವಾರ 37,199 ಮಂದಿಗೆ ಕೋವಿಡ್-19 ಬಾಧಿಸಿದೆ. 49 ಮಂದಿ ಸಾವಿಗೀಡಾಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 5,308ಕ್ಕೇರಿದೆ. 17,500 ಮಂದಿ ಗುಣಮುಖರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts