More

    ಜೇಬಿಗೆ ಕತ್ತರಿ ಇಟ್ಟ ಟ್ಯಾಂಕರ್​ ಮಾಫಿಯಾ! ವಿವಿಧ ಬಡಾವಣೆಗಳಲ್ಲಿ ನೀರಿಗೆ ಭಾರಿ ಬೇಡಿಕೆ

    ರಾಮ ಕಿಶನ್​ ಕೆ.ವಿ. ಬೆಂಗಳೂರು
    ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದಂತೆ ಬೋರ್​ವೆಲ್​ಗಳು ಬತ್ತುವ ಸ್ಥಿತಿಯಲ್ಲಿವೆ. ಬರದ ಛಾಯೆ ಎದುರಾಗುತ್ತಿದ್ದಂತೆ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಕೊರತೆ ಭುಗಿಲೇಳುತ್ತಿದೆ. ಪರಿಣಾಮ, ನಿವಾಸಿಗಳು ಅನಿವಾರ್ಯವಾಗಿ ಟ್ಯಾಂಕರ್​ ಮೊರೆಹೋಗುವಂತಾಗಿದೆ. ನಿರೀತವೆಂಬಂತೆ, ಟ್ಯಾಂಕರ್​ ನೀರಿನ ಬೆಲೆಯೂ ಏರಿಕೆಯಾಗುತ್ತಿದೆ.

    ಕಳೆದ ನವೆಂಬರ್​ನಿಂದ 6 ಸಾವಿರ ಲೀಟರ್​ ಸಾಮರ್ಥ್ಯದ ಟ್ಯಾಂಕರ್​ಗೆ 550-700 ರೂ. ಬೆಲೆ ಇತ್ತು. ಈಗ 1,000 ರೂ. ಗೂ ಹೆಚ್ಚು ಹಣ ತೆರಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ನಡೆಸಿ, ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವವರಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಟ್ಯಾಂಕರ್​ ಭರ್ತಿಯೇ ಸವಾಲು

    ಬೋರ್​ವೆಲ್​ಗಳನ್ನೇ ನಂಬಿಕೊಂಡು ಟ್ಯಾಂಕರ್​ ನೀರಿನ ವ್ಯವಹಾರ ನಡೆಯುತ್ತಿದೆ. ಹಾಗೆಂದು ಟ್ಯಾಂಕರ್​ ಮಾಲೀಕರಿಗೆ ಅನಾಯಾಸವಾಗಿ ನೀರು ಲಭಿಸುತ್ತಿಲ್ಲ. ದಿನದಿಂದ ದಿನಕ್ಕೆ ನೀರಿನ ಬೇಡಿಕೆ ಹೆಚ್ಚುತ್ತಿದ್ದು, ನಿತ್ಯ 6-8 ಮನೆಗಳಿಗೆ ನೀರು ಪೂರೈಸುತ್ತಿದ್ದೇವೆ. ಆದರೆ ಟ್ಯಾಂಕರ್​ನ್ನು ಭರ್ತಿ ಮಾಡುವುದೇ ಸವಾಲಾಗಿದೆ ಎಂದು ಗಿರಿನಗರ ಮೂಲದ ಟ್ಯಾಂಕರ್​ ಚಾಲಕರೊಬ್ಬರು ಹೇಳಿಕೊಂಡಿದ್ದಾರೆ.

    ಗುಣಮಟ್ಟ ಪರೀಕ್ಷೆಯಾಗಬೇಕು

    ಕೆಲವೆಡೆ ಟ್ಯಾಂಕರ್​ನಲ್ಲಿ ಪೂರೈಕೆಯಾಗುತ್ತಿರುವ ನೀರಿನಲ್ಲಿ ಕ್ಲೋರೈಡ್​ ಹೆಚ್ಚು ಕಂಡುಬರುತ್ತಿದೆ. ಈ ನೀರನ್ನು ಉಪಯೋಗಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲ ಭಾಗಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ ಎಂಬುದು ಗ್ರಾಹಕರ ದೂರು.

    ಅಪಾರ್ಟ್​ಮೆಂಟ್​ಗಳಿಂದ ಹೆಚ್ಚಿದ ಬೇಡಿಕೆ

    ಯಶವಂತಪುರ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಕೆ.ಅರ್​. ಪುರ, ಚನ್ನಸಂದ್ರ, ನಾಗರಬಾವಿ, ವೈಟ್​ಫೀಲ್ಡ್​, ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಗಳಿಂದ ಟ್ಯಾಂಕರ್​ ನೀರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ. ಜತೆಗೆ ವಿವಿಧ ಹೋಟೆಲ್​ ಮಾಲೀಕರು ಟ್ಯಾಂಕರ್​ ನೀರಿನ ಮೊರೆ ಹೋಗುತ್ತಿದ್ದಾರೆ. ವಾರದಲ್ಲಿ ಎರಡ್ಮೂರು ಬಾರಿ ಟ್ಯಾಂಕರ್​ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ.

    ನೀರಿನ ಬಿಲ್​ ಏರಿಕೆ

    ಟ್ಯಾಂಕರ್​ ನೀರಿನ ಬೆಲೆ ಹೆಚ್ಚಳವಾಗಲು ವಿದ್ಯುತ್​ ಬೆಲೆ ಏರಿಕೆ ಮತ್ತೊಂದು ಕಾರಣ. ವಾಣಿಜ್ಯ ಬಳಕೆಯ ವಿದ್ಯುತ್​ ದುಬಾರಿಯಾಗಿದೆ. ಹೀಗಾಗಿ ಬೋರ್​ವೆಲ್​ ಮಾಲೀಕರು 50&100 ರೂ. ಶುಲ್ಕ ಹೆಚ್ಚಿಸಿದ್ದಾರೆ. ಪ್ರಸ್ತುತ ನಾವು 650& 800 ರೂ.ಗೆ ನೀರು ಸರಬರಾಜು ಮಾಡುತ್ತಿದ್ದೇವೆ. ನಿತ್ಯ ನಾಲ್ಕೆ$ದು ಮನೆಗಳಿಂದ ನೀರು ಪೂರೈಸುವಂತೆ ೋನ್​ ಕರೆಗಳು ಬರುತ್ತಿವೆ. ಮಾರ್ಚ್​ನಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಈ ಸಂದರ್ಭ ಟ್ಯಾಂಕರ್​ ನೀರಿನ ಬೆಲೆ 800 ರೂ. ದಾಟುವುದು ಬಹುತೇಕ ಖಚಿತ ಎಂದು ನಾಗರಬಾವಿಯ ಟ್ಯಾಂಕರ್​ ಮಾಲೀಕ ರಾಮಕೃಷ್ಣ ತಿಳಿಸಿದ್ದಾರೆ.

    ಟೆಂಡರ್​ ಇಲ್ಲ

    ನೀರಿನ ಅಭಾವ ಎದುರಾದ ಸಂದರ್ಭದಲ್ಲಿ ಬಿಬಿಎಂಪಿ/ ಜಲಮಂಡಳಿ ಉಚಿತ ಟ್ಯಾಂಕರ್​ ನೀರು ಪೂರೈಕೆಗೆ ಮುತುವರ್ಜಿ ವಹಿಸುತ್ತದೆ. ಖಾಸಗಿ ಕೊಳವೆಬಾವಿಗಳಿಂದ ನೀರು ಖರೀದಿಸಿ ಜನರಿಗೆ ಪೂರೈಸಲಾಗುತ್ತದೆ. ಇದಕ್ಕಾಗಿ ತುರ್ತು ಟೆಂಡರ್​ ಕರೆದು ನೀರು ಪೂರೈಕೆಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಬಿಬಿಎಂಪಿಯಿಂದ ಹೆಚ್ಚಿನ ಕ್ರಮ ಆಗಿಲ್ಲ. ಹಳೇ ಟೆಂಡರ್​ದಾರರಿಗೆ ಬಿಲ್​ ಬಾಕಿ ನೀಡದ ಕಾರಣ ಹೊಸ ಟೆಂಡರ್​ ಕಥೆ ಕೇಳುವಂತೆಯೇ ಇಲ್ಲ.

    ಎರಡು ಮನೆಗಳನ್ನು ಬಾಡಿಗೆಗೆ ನೀಡಿದ್ದು, ಕಾವೇರಿ ನೀರು ಸಾಕಾಗುವುದಿಲ್ಲ. 10 ದಿನಗಳಿಗೆ ಒಂದರಂತೆ ಟ್ಯಾಂಕರ್​ ನೀರು ತರಿಸಿಕೊಳ್ಳುತ್ತಿದ್ದೇನೆ. ಟ್ಯಾಂಕರ್​ ನೀರಿಗೆ ಹಿಂದಿನ ದಿನವೇ ಬುಕ್​ ಮಾಡಬೇಕು. ಕಳೆದ ಎರಡು ತಿಂಗಳ ಅವಧಿಯಲ್ಲಿ 300 ರೂ. ಬೆಲೆ ಏರಿಕೆಯಾಗಿದೆ. ಮಾರ್ಚ್​ ಬಳಿಕ 1,000-1,500 ರೂ. ನೀಡಿ ಟ್ಯಾಂಕರ್​ ನೀರು ತರಿಸಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು.
    -ಮಾರುತೇಶ್​, ಬಾಡಿಗೆ ಮನೆ ಮಾಲೀಕ, ಶ್ರೀನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts