More

    ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವಂತೆ ಆಗ್ರಹ

    ಚಿತ್ರದುರ್ಗ: ಕಾಡುಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ ತಾಲೂಕು ಕಾಡುಗೊಲ್ಲ ಸಮಾಜದ ಪದಾಧಿಕಾರಿಗಳು, ಸಮುದಾಯದವರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ನಡೆಸಿದರು. ಎಸ್ಟಿಗೆ ಸೇರಿಸುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಈಗಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದಡಿ ನೀಡಬೇಕು ಎಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

    2008 ರಲ್ಲಿಯೇ ಅನ್ನಪೂರ್ಣಮ್ಮ ನೇತೃತ್ವದಲ್ಲಿ ಕುಲಶಾಸ್ತ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಂದಿನಿಂದ ಈವರೆಗೂ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವಂತೆ ಹಕ್ಕೊತ್ತಾಯ ಮಾಡುತ್ತ ಬಂದಿದ್ದೇವೆ. ರಾಜ್ಯದಿಂದ ಈ ಹಿಂದೆಯೇ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರೂ ಬೇಡಿಕೆ ಈಡೇರಿಲ್ಲ. ಹೀಗೆ ಮುಂದುವರೆದರೆ ರಾಜ್ಯಾದ್ಯಂತ ಸಮುದಾಯದ ಹೋರಾಟ ಸ್ವರೂಪ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

    ಸರ್ಕಾರ ಸುಳ್ಳು ಆಶ್ವಾಸನೆ ನೀಡಿ ಕಾಲ ದೂಡಬಾರದು. ಈಗಾಗಲೇ ಕಾಡುಗೊಲ್ಲರ ಅಭಿವೃದ್ದಿ ನಿಗಮ ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಿದ ನಂತರ ಪುನಾ ರದ್ದುಪಡಿಸಿ ಸಮುದಾಯಕ್ಕೆ ಅನ್ಯಾಯವೆಸಗಿದೆ. ಎಸ್ಟಿಗೆ ಸೇರಿಸುವ ವಿಚಾರದಲ್ಲಿ ಈ ರೀತಿಯಾದರೆ, ಸಮುದಾಯದ ಮಠಾಧೀಶರು, ಚುನಾಯಿತ ಪ್ರತಿನಿಧಿಗಳ ಮೂಲಕ ರಾಜ್ಯ, ರಾಷ್ಟ್ರ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು. ಇದಕ್ಕೆ ಆಸ್ಪದ ನೀಡದೆಯೇ ಸ್ಪಂದಿಸಬೇಕು ಎಂದು ಕೋರಿದರು.

    ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ರಾಜ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ಶಿವಣ್ಣ ಗಂಜಿಗಟ್ಟೆ, ಪ್ರಕಾಶ್ ಬೆನ್ನೂರು, ರೇವಣಸಿದ್ದಪ್ಪ, ಜಗದೀಶ್ ಜಾಲಿಕಟ್ಟೆ, ವೀರಮಂಜಪ್ಪ, ಜೆ.ಸಿ.ಹಳ್ಳಿ ಜಗದೀಶ್, ಜಿ.ವಿ.ಮಧುಗೌಡ, ಸಿ.ಟಿ.ಕೃಷ್ಣಮೂರ್ತಿ, ಗರಡಿ ತಿಮ್ಮಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts