More

    ಮೈಸೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರ ಪದಗ್ರಹಣ

    ಮೈಸೂರು: ದೇಶವನ್ನು ಧರ್ಮ, ಜಾತಿ ಆಧಾರದಲ್ಲಿ ಬಿಜೆಪಿ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ದೂರಿದರು.
    ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅಲ್ಪಸಂಖ್ಯಾತರ ಘಟಕದಿಂದ ಬುಧವಾರ ಆಯೋಜಿಸಿದ್ದ ನೂತನ ಜಿಲ್ಲಾಧ್ಯಕ್ಷ ಮೋಸಿನ್ ಖಾನ್ ಹಾಗೂ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
    ದೇಶದಲ್ಲಿ ಒಡೆದಾಳುವ ನೀತಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ಅನುಸರಿಸುತ್ತಿದೆ. ಇದರೊಂದಿಗೆ ಜೆಡಿಎಸ್ ಕೂಡಿ ಸೇರಿಕೊಂಡಿದೆ. ಆದರೆ, ಕಾಂಗ್ರೆಸ್ ಮಾತ್ರ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಪೂರ್ಣ ರಕ್ಷಣೆ ನೀಡಲಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಉದಾಸೀನ ಮಾಡುತ್ತಿಲ್ಲ. ಬೇರೆಯವರ ರೀತಿ ನೀವು ಕೂಡಿ ನಮಗೆ ಒಂದೇ ಎನ್ನುವ ಭಾವನೆ ಇದೆ. ಹಾಗಾಗಿ ಅಲ್ಪ ಸಂಖ್ಯಾತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
    ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ಕೇಂದ್ರದ ಬಿಜೆಪಿ ಸಂವಿಧಾನ ಬದಲಾವಣೆಗೆ ಮುಂದಾಗಿದೆ. 10 ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯ ಸೇರಿ ಎಲ್ಲ ದುಡಿಯುವ ವರ್ಗಗಳು ಸಂಕಷ್ಟಕ್ಕೆ ಸಿಲುಕಿವೆ. ಸಂವಿಧಾನ ಪ್ರತಿ ಧರ್ಮದ ಆಚರಣೆಗಳಿಗೆ ಸಮಾನ ಅವಕಾಶವನ್ನು ಕಲ್ಪಿಸಿದೆ. ಯಾವ ಧರ್ಮದ ಆಚರಣೆಗೂ ಅಡ್ಡಿಯುಂಟು ಮಾಡಿಲ್ಲ. ಸಮಾನತೆಗೆ ಒತ್ತು ನೀಡಿದೆ. ಹೀಗಾಗಿ ಸಂವಿಧಾನ ಬದಲಾವಣೆಗೆ ಬಿಜೆಪಿ ಮುಂದಾಗಿದೆ. ಇದನ್ನು ತಡೆಯಬೇಕಾದರೆ ನಾವು ಈಗ ಸಂವಿಧಾನದ ಪರವಾಗಿ ನಿಲ್ಲಬೇಕು ಎಂದರು.
    ಈ ಬಾರಿ ಲೋಕಸಭಾ ಚುನಾವಣೆ ಸತ್ಯ ವರ್ಸಸ್ ಸುಳ್ಳಿನ ನಡುವೆ ನಡೆಯುತ್ತಿದೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ., ವರ್ಷಕ್ಕೆ 2 ಕೋಟಿ ಉದ್ಯೋಗ ಇತರ ವಾಗ್ದಾನಗಳನ್ನು ಬಿಜೆಪಿ ಜನತೆಗೆ ನೀಡಿತ್ತು. ಆದರೆ, ಯಾವುದನ್ನೂ ಈಡೇರಿಸಿಲ್ಲ. ಕಾಂಗ್ರೆಸ್ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದೆ. ನಾವು ಕೆಲಸ ಮಾಡಿದ್ದೇವೆ, ಜನತೆ ನಮ್ಮ ಕೆಲಸಕ್ಕೆ ಕೂಲಿ ಕೊಡಬೇಕು ಎಂದು ಕೋರಿದರು.
    ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ, ಬಿಜೆಪಿಯವರು ಮುಸ್ಲಿಂ-ಪಾಕಿಸ್ತಾನ ಎಂದು ಭಾಷಣ ಮಾಡಿದರೆ ಯಾವ ಹಿಂದುಗಳದ್ದು ಹೊಟ್ಟೆ ತುಂಬುವುದಿಲ್ಲ. ಸ್ವಾಭಿಮಾನದಿಂದ ಬದುಕಬೇಕೆಂದರೆ ವಿವೇಚನೆಯಿಂದ ಮತದಾನ ಮಾಡಬೇಕು ಎಂದು ಕೋರಿದರು.
    ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಿಸಿ ಶುಭ ಕೋರಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿದರು. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಮಾಜಿ ಮೇಯರ್‌ಗಳಾದ ಆರೀಫ್ ಹುಸೇನ್, ನಗರಪಾಲಿಕೆ ಮಾಜಿ ಸದಸ್ಯ ಸೌಕತ್ ಪಾಷ, ಹಜರತ್ ಪಾಷ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts