More

    ಸಾಲ ತೀರಿಸುವಂತೆ ರೈತರನ್ನು ಬಲವಂತ ಮಾಡಬೇಡಿ: ಕೊಮ್ಮೇರಹಳ್ಳಿ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿಕೆ

    ಮಂಡ್ಯ: ಈ ಬಾರಿ ಮಳೆ ಇಲ್ಲದ ಕಾರಣ ರೈತ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಸಹಕಾರ ಸಂಘಗಳು ರೈತರಿಗೆ ಕೊಟ್ಟಿರುವ ಸಾಲವನ್ನು ವಾಪಸ್ ಕೊಡುವಂತೆ ಬಲವಂತ ಮಾಡಬೇಡಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿದರು.
    ತಾಲೂಕಿನ ಹೊನಗಾನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಗ್ರಾಣ ಕಟ್ಟಡದ ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಲ್ಲಿ ಪ್ರಾಮಾಣಿಕತೆ ಇದ್ದರೆ ಸಂಘಗಳು ಯಶಸ್ವಿಯಾಗಿ ನಡೆಯುತ್ತವೆ. ಸಾಲ ತೆಗೆದುಕೊಂಡವರು ಸರಿಯಾಗಿ ತೀರಿಸಿದರೆ ಸಂಘಗಳು ಯಶಸ್ವಿಯಾಗುತ್ತವೆ ಎಂದು ತಿಳಿಸಿದರು.
    ಸಹಕಾರ ಸಂಘಗಳನ್ನು ಕಟ್ಟಿ ಉತ್ತಮ ರೀತಿಯಲ್ಲಿ ವ್ಯವಹಾರ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಸೊಸೈಟಿಯಲ್ಲಿ ಸಾಲ ಕೊಡುವ ವ್ಯವಸ್ಥೆಯಿದ್ದು, ಬರುವ ಲಾಭದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
    ಸಮಾರಂಭದ ಅಧ್ಯಕ್ಷತೆ ವಹಿಸಿದ ಕೊಮ್ಮೇರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಕೃಷ್ಣಮೂರ್ತಿ ಮಾತನಾಡಿ, ಹೊನಗಾನಹಳ್ಳಿ ಗ್ರಾಮದಲ್ಲಿ ಉಗ್ರಾಣ ನಿರ್ಮಿಸಬೇಕೆಂದು ಗ್ರಾಮದ ಹಿರಿಯರು ಹಾಗೂ ಸಂಘದ ನಿರ್ದೇಶಕರು ಚರ್ಚೆ ಮಾಡಿದೆವು. ಅನೇಕ ವರ್ಷಗಳಿಂದಲೂ ಇಲ್ಲಿಯ ಜನರು ಕೊಮ್ಮೇರಹಳ್ಳಿಗೆ ಹೋಗಿ ಸರ್ಕಾರ ನೀಡುವ ಪಡಿತರವನ್ನು ತರಬೇಕಾಗಿತ್ತು ಎಂದರು.
    ಸಮಾರಂಭ ಉದ್ಘಾಟಿಸಿ ಮಾತನಾಡಿದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಅಮರಾವತಿ ಸಿ.ಅಶ್ವಥ್, ಪ್ರತಿ ಗ್ರಾಮಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗೋದಾಮು ನಿರ್ಮಾಣವಾದರೆ ರೈತರಿಗೆ ಅನುಕೂಲವಾಗುತ್ತದೆ. ಉಗ್ರಾಣಗಳಲ್ಲಿ ದಾಸ್ತಾನು ಇದ್ದರೆ ಬಳಸಿಕೊಂಡು ರೈತರು ವ್ಯವಸಾಯ ಮಾಡಲು ಅನುಕೂಲವಾಗುತ್ತದೆ. ಸಹಕಾರ ಸಂಘಗಳಲ್ಲಿ ಎಲ್ಲ ಸದಸ್ಯರಿಗೆ ಅಲ್ಪಾವಧಿ ಹಾಗೂ ಬೆಳೆ ಸಾಲ ಸಿಗಬೇಕು. ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಗುಂಪು ಸಾಲ ಸಿಗುತ್ತವೆ. ಇವೆಲ್ಲವುಗಳನ್ನು ಬಳಸಿಕೊಂಡು ರೈತಾಪಿ ವರ್ಗ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
    ಸಂಘದ ಉಪಾಧ್ಯಕ್ಷ ಕೆ.ಶಿವಲಿಂಗಯ್ಯ, ನಿರ್ದೇಶಕರಾದ ಎಚ್.ಪುಟ್ಟಸ್ವಾಮಿ, ಮಲ್ಲೇಶ್, ದೊಡ್ಡಲಿಂಗಮ್ಮ, ಲಲಿತಮ್ಮ, ಚಿಕ್ಕಗವಿಯ, ಬಸವರಾಜ್, ಗಿರಿಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts