More

    ಹಳ್ಳಿಗಳಲ್ಲಿ ಅಕ್ರಮ ಮದ್ಯ ಕಿಕ್!

    ಬೆಳಗಾವಿ:ಪೊಲೀಸರ ಕ್ರಮದ ಭಯ, ಸ್ತ್ರೀಶಕ್ತಿ ಸಂಘಗಳ ವಿರೋಧ ನಡುವೆಯೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿರುವುದು ಬಹಳಷ್ಟು ಬಡ ಕುಟುಂಬಗಳ ನೆಮ್ಮದಿ ಕದಡಲು ಕಾರಣವಾಗಿದೆ.

    ಅಕ್ರಮ ಮದ್ಯ ಅಷ್ಟೇ ಅಲ್ಲದ ಹಳ್ಳಿ, ಹಳ್ಳಿಗಳಲ್ಲಿ ಕಳ್ಳಬಟ್ಟಿ ನಿಷೇಧವಿದ್ದರೂ ಎಗ್ಗಿಲ್ಲದೆ ಸಾಗಿದ್ದು ಯುವ ಸಮುದಾಯ ದುಶ್ಚಟಕ್ಕೆ ಬಲಿಯಾಗುತ್ತಿದೆ. ಜಿಲ್ಲೆಯ ಬಹಳಷ್ಟು ತಾಲೂಕುಗಳ ಗ್ರಾಮಗಳ ಕಿರಾಣಿ ಅಂಗಡಿ-ಹೋಟೆಲ್‌ಗಳಲ್ಲಿ ದುಪ್ಟಟ್ಟು ಹಣಕ್ಕೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟದಿಂದಾಗಿ ಕೂಲಿ ಕಾರ್ಮಿಕರು ಹೆಚ್ಚ ಕುಡಿತದ ಚಟಕ್ಕೆ ಅಂಟಿಕೊಳ್ಳುತ್ತಿದ್ದು, ಬಹಳಷ್ಟು ಕುಟುಂಬಗಳು ಬೀದಿ ಪಾಲಾಗುತ್ತಿರುವ ಘಟನೆಗಳು ಕಣ್ಣಮುಂದೆ ನಡೆಯುತ್ತಿವೆ. ರಾಜ್ಯ ಸರ್ಕಾರ ಹಳ್ಳಿ, ಪಟ್ಟಣ, ನಗರ, ಮಾಲ್‌ಗಳಲ್ಲಿ ಹೊಸದಾಗಿ ಮದ್ಯದಂಗಡಿಗೆ ಪರವಾನಗಿ ನೀಡಲು ಮುಂದಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಕ್ರಮ ಮದ್ಯ ಮಾರಾಟ ತಡೆಗಟ್ಟುವದಕ್ಕೆ ನೋಂದ ಕುಟುಂಬಗಳ ಮಹಿಳೆಯರು ಬೀದಿಗಿಳಿದು ಆಂದೋಲನ ನಡೆಸುತ್ತಿದ್ದಾರೆ. ಆದರೆ, ಸಂಬಂಧಿತ ಅಧಿಕಾರಿಗಳು ಸಂಪೂರ್ಣವಾಗಿ ಅಕ್ರಮ ಮದ್ಯ ಮಾರಾಟ, ಕಳ್ಳಬಟ್ಟಿ ಸಾರಾಯಿ ಬಂದ್ ಮಾಡಲು ಆಸಕ್ತಿ ತೋರಿಸುತ್ತಿಲ್ಲ.

    ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ: ಒಂದೊಂದು ಗ್ರಾಮಗಳಲ್ಲಿ 2-3 ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಸ್ತ್ರೀಶಕ್ತಿ ಸಂಘಟನೆಗಳು, ಮದ್ಯ ನಿಷೇಧ ಆಂದೋಲನ- ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಗ್ರಾಮಗಳ ಗುಡ್ಡಗಾಡು ಪ್ರದೇಶಗಳಲ್ಲಿ ನಿಷೇಧವಿದ್ದರೂ ಕಳ್ಳಬಟ್ಟಿ ಸರಾಯಿ ತಯಾರಿಸಲಾಗುತ್ತಿದೆ. ಪೊಲೀಸರು ಸಮರ್ಪಕವಾಗಿ ಕ್ರಮ ಜರುಗಿಸುತ್ತಿಲ್ಲ. ಹಬ್ಬ, ಹರಿದಿನಗಳು ಹಾಗೂ ಪರವಾನಗಿ ಪಡೆದ ಮದ್ಯದ ಅಂಗಡಿಗಳು ಬಂದ್ ಇದ್ದಾಗ ಅಕ್ರಮ ಮದ್ಯ ಮಾರಾಟಗಾರರು ಡಬಲ್ ರೇಟ್‌ಗ ಅಂಗಡಿಗಳು, ದಾಬಾ, ಮನೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ರಾಜಕೀಯ ಮರಿ ಪುಡಾರಿಗಳು ಈ ದಂಧೆ ನಡೆಯುವುದಕ್ಕೆ ಸಹಕಾರ ನೀಡುತ್ತಿದ್ದಾರೆ. ಒಂದೂರು ಗ್ರಾಮದಲ್ಲಿ ಪ್ರತಿದಿನ ಸಾವಿರಾರು ಮದ್ಯದ ಟೆಟ್ರಾ ಪ್ಯಾಕೆಟ್‌ಗಳು ಮಾರಾಟ ಆಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಅಕ್ರಮ ಮದ್ಯ ಮಾರಾಟದಿಂದ ಗ್ರಾಮಗಳಲ್ಲಿ ಪ್ರತಿದಿನ ಕುಟುಂಬಗಳಲ್ಲಿ ಜಗಳ ನಡೆಯುತ್ತದೆ. ಬಹಳಷ್ಟು ಕುಟುಂಬಗಳ ಮನೆ ಮುಖ್ಯಸ್ಥರು ಕುಡಿತಕ್ಕೆ ಅಂಟಿಕೊಂಡಿದ್ದರಿಂದ ಪತ್ನಿ-ಮಕ್ಕಳು ಒಂದು ಹೊತ್ತು ತಿಂದರೆ, ಮತ್ತೊಂದು ಹೊತ್ತಿನ ಊಟಕ್ಕೂ ಗತಿ ಇಲ್ಲದಂತಾಗಿದೆ.

    ಜಿಲ್ಲೆಯ ಎಲ್ಲೆಲ್ಲಿ ಮಾರಾಟ?

    ಹುಕ್ಕೇರಿ ತಾಲೂಕಿನ ದಡ್ಡಿ, ಸಲಾಮವಾಡಿ, ಮಣಗುತ್ತಿ, ಹೊಸೂರು, ಸುಲ್ತಾನಪುರ, ಹೊಸಪೇಟೆ ಗ್ರಾಮಗಳ ಕಿರಾಣಿ ಅಂಗಡಿ ಹೋಟೆಲ್‌ಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಬೆಳಗಾವಿ ತಾಲೂಕಿನ ಕಡೋಲಿ, ಕೇದನೂರು, ಅಗಸಗಾ, ಹಂದಿಗನೂರು, ಹೊನಗಾ, ಬಮ್ಮರಗಾ ಸೇರಿ ಹಲವು ಹಳ್ಳಿಗಳು. ಖಾನಾಪುರ ತಾಲೂಕಿನ ಮಂಗ್ಯಾನಕೊಪ್ಪ, ಹಂದೂರು, ಗಸ್ತೋಳಿ, ದಡ್ಡಿ, ಲಿಂಗನಮಠ ಸೇರಿ ಹಲವು ಗ್ರಾಮಗಳು. ಬೈಲಹೊಂಗಲ ತಾಲೂಕಿನ ಬುಡರಕಟ್ಟಿ, ಬಿದರಗಡ್ಡಿ, ಸಿದ್ಧಸಮುದ್ರ, ಅವರಾದಿ, ದೊಡವಾಡ, ಪಟ್ಟಿಹಾಳ, ಚನ್ನಮ್ಮ ಕಿತ್ತೂರು ತಾಲೂಕಿನ ಅಂಬಡಗಟ್ಟಿ, ದೇವರಶೀಗಿಹಳ್ಳಿ, ದೇಗಾಂವ, ಉಗುರಕೋಡ, ಗದ್ದಿಕರವಿನಕೊಪ್ಪ ಇತರ ಗ್ರಾಮಗಳು. ಸವದತ್ತಿ ತಾಲೂಕಿನ ಹಿರೇಕುಂಬಿ, ಚುಳುಕಿ, ಚಿಕ್ಕುಂಬಿ, ಹಂಚಿನಾಳ, ದಡಾರಕೊಪ್ಪ, ಬೆಡಸೂರು, ಉಗುರಗೋಳ ಹಾಗೂ ಇತರ ಗ್ರಾಮಗಳು. ಗೋಕಾಕ ತಾಲೂಕಿನ ಉದಗಟ್ಟಿ, ಹಡಗಿನಾಳ, ಮೆಳವೆಂಕಿ, ಕಲಾರಕೊಪ್ಪ, ವಡ್ಡರಟ್ಟಿ, ಗೋಡೆಗೇರ, ಶಿವಾಪುರ, ಕೊಣ್ಣೂರು, ಶಿವಾಪುರ, ಮೇಲಮಟ್ಟಿ, ಮರಡಿಮಠ, ಚೌಕಿ, ಸಾವಳಗಿ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಲ್ಲಿ ಅಕ್ರಮವಾಗಿ ಡಬಲ್ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ.

    ಅಕ್ರಮ ಮದ್ಯ ಮಾರಾಟ ಪ್ರಕರಣಗಳ ಮೇಲೆ ನಿಗಾ ವಹಿಸಿದ್ದೇವೆ. ಮೂರು ತಿಂಗಳಲ್ಲಿ ಗ್ರಾಮೀಣ ಭಾಗದ ಬಹಳಷ್ಟು ಕಡೆಗಳಲ್ಲಿ ದಾಳಿ ನಡೆಸಿದ್ದೇವೆ. ಮೇಲಿಂದ ಹೋಟೆಲ್, ದಾಬಾಗಳಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳುತ್ತಿದ್ದೇವೆ. ಅಕ್ರಮ ಮಾರಾಟ ತಡೆಯುತ್ತಿದ್ದೇವೆ.
    | ರವಿ ನಾಯಕ ಡಿವೈಎಸ್‌ಪಿ, ಬೈಲಹೊಂಗಲ

    ಸರ್ಕಾರ ಅಕ್ರಮ ಮದ್ಯ ಮಾರಾಟ ತಡೆಯಬೇಕು. ಹೊಸ ಮದ್ಯದಂಗಡಿಗಳಿಗೆ ಪರವಾನಗಿ ಕೊಡಬಾರದು. ಒಂದು ವೇಳೆ ಪರವಾನಗಿ ಕೊಟ್ಟರೆ ದೊಡ್ಡ ಪ್ರಮಾಣದ ಆಂದೋಲನ ನಡೆಸಲಾಗುವುದು.
    | ರಾಜು ಗಾಣಗೇರ, ಎಐಡಿವೈಒ ಜಿಲ್ಲಾ ಸಂಚಾಲಕ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts