More

    ರೈತರಿಗೆ ಸಂಕಷ್ಟದ ದಸರಾ; ಆಹಾರ ಭದ್ರತೆಗೂ ಅಪಾಯ..

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಕರೊನಾ ಸಂಕಷ್ಟದ ಕಾಲದಲ್ಲಿ ಕೃಷಿಯನ್ನು ನಂಬಿಕೊಂಡಿದ್ದ ರೈತ ಸಮೂಹಕ್ಕೆ ಭಾರಿ ಮಳೆಯ ಆಘಾತ ದಸರಾ ಸಂಭ್ರಮವನ್ನೇ ಕಸಿದಿದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಮಾಣ ಹೆಚ್ಚಾಗಿದ್ದರಿಂದ ಉತ್ತಮ ಇಳುವರಿ ಬರಬಹುದೆಂದು ಅಂದಾಜಿಸಲಾಗಿತ್ತಾದರೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗುರಿ ಸಾಧನೆ ಸಾಧ್ಯವಿಲ್ಲದಂತಾಗಿದೆ.

    ಮಳೆಯಿಂದ ಬೆಳೆ ನಷ್ಟವಾಗಿರುವುದು, ಕೊಯ್ಲಿನಿಂದ ಕಣದಲ್ಲಿರುವ ಬೆಳೆ ರಕ್ಷಿಸಿಕೊಳ್ಳುವ ಜತೆಗೆ ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಂಗಾರು ಬೆಳೆ ಹಾಳಾಗಿದ್ದು, ಹಿಂಗಾರಿನ ಬಿತ್ತನೆಗೂ ಅಡ್ಡಿಯಾಗಿದೆ. ಇದರಿಂದ ಆಹಾರ, ಆರ್ಥಿಕ ಪರಿಣಾಮಗಳ ಆಘಾತ ಕಾಡಲಿದೆ.

    ಎಷ್ಟಾಗಿದೆ ನಷ್ಟ?: ರಾಜ್ಯದಲ್ಲಿ ಸೆಪ್ಟಂಬರ್ ಅಂತ್ಯದ ತನಕ ಸುರಿದ ಮಳೆಯಿಂದ ಸುಮಾರು 10.07 ಲಕ್ಷ ಹೆಕ್ಟೇರ್​ನಲ್ಲಿ ಬೆಳೆ ನಷ್ಟವಾಗಿತ್ತು. ಅಕ್ಟೋಬರ್​ನಲ್ಲಿ ಈವರೆಗಿನ ಮಾಹಿತಿ ಪ್ರಕಾರ ಸುಮಾರು 7 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದು 10 ಲಕ್ಷ ಹೆಕ್ಟೇರ್ ತನಕ ತಲುಪಿ, ಒಟ್ಟಾರೆ 20 ಲಕ್ಷ ಹೆಕ್ಟೇರ್​ನಷ್ಟು ಬೆಳೆ ಹಾಳಾಗುವ ಸಾಧ್ಯತೆ ಇದೆ. ಕರೊನಾ ಕಾರಣಕ್ಕೆ ಬಹಳಷ್ಟು ಯುವಕರು ನಗರದಿಂದ ಹಳ್ಳಿಗೆ ಧಾವಿಸಿ ಕೃಷಿ ಕಾಯಕಕ್ಕೆ ಇಳಿದಿದ್ದರು.

    ನಷ್ಟದ ಪ್ರಮಾಣ

    ಮಳೆಯಿಂದ ಜಮೀನಿನಲ್ಲಿರುವ ಬೆಳೆ, ಕಣದಲ್ಲಿರುವ ಬೆಳೆ ಹಾಳಾಗಿರುವುದರಿಂದ ಕೃಷಿ ಉತ್ಪಾದನೆಯ ಗುರಿಯಲ್ಲಿ ಶೇ. 30ರ ತನಕ ನಷ್ಟವಾಗಬಹುದೆಂದು ಅಂದಾಜಿಸಲಾಗುತ್ತಿದೆ. 133.05 ಲಕ್ಷ ಟನ್ ಆಹಾರ ಧಾನ್ಯದ ಉತ್ಪಾದನೆಯ ಗುರಿಯನ್ನು ಸರ್ಕಾರ ಹೊಂದಿತ್ತು.

    ಸೆಪ್ಟಂಬರ್ ತನಕ ಕೃಷಿ ಉತ್ಪಾದನೆ ನಷ್ಟ ಸುಮಾರು 9000 ಕೋಟಿ ರೂ.ಗಳಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಈ ಪ್ರಮಾಣ 20 ಸಾವಿರ ಕೋಟಿ ರೂ. ತಲುಪಬಹುದೆಂದು ಹೇಳಲಾಗುತ್ತಿದೆ.

    ಪರಿಹಾರ ಹೆಚ್ಚಳಕ್ಕೆ ಮನವಿ

    ರಾಜ್ಯ ಸರ್ಕಾರ ಕಳೆದ ವರ್ಷ ಕೇಂದ್ರದ ನಿಯಮಗಳಿಗಿಂತ ಹೆಕ್ಟೇರ್​ಗೆ ಹತ್ತು ಸಾವಿರ ರೂ. ಹೆಚ್ಚು ಮಾಡಿ ಪರಿಹಾರ ನೀಡಿತ್ತು. ಆದ್ದರಿಂದ ಒಣ ಭೂಮಿಯವರಿಗೆ ಹೆಕ್ಟೇರ್​ಗೆ 16,800 ರೂ., ನೀರಾವರಿ ಪ್ರದೇಶದವರಿಗೆ ಹೆಕ್ಟೇರ್​ಗೆ 23,500 ಹಾಗೂ ತೋಟಗಾರಿಕೆ ಬೆಳೆಗಳಿಗೆ ಹೆಕ್ಟೇರ್​ಗೆ 28,000 ರೂ. ಸಿಕ್ಕಿತ್ತು. ಈ ವರ್ಷ ಪರಿಹಾರ ಎಷ್ಟು ಎಂಬುದು ನಿರ್ಧಾರವಾಗಿಲ್ಲ. ಎನ್​ಡಿಆರ್​ಎಫ್ ನಿಯಮಗಳಲ್ಲಿರುವ ಪರಿಹಾರದ ಮೊತ್ತ ಹೆಚ್ಚಳಕ್ಕೆ ಕೇಂದ್ರಕ್ಕೆ ಪತ್ರ ಬರೆಯಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆಂದು ಮೂಲಗಳು ಸ್ಪಷ್ಟಪಡಿಸಿವೆ.

    ಸಾಲದ ಸುಳಿ: ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ ರೈತರೀಗ ಸಾಲದ ಸುಳಿಗೆ ಸಿಲುಕುವ ಅಪಾಯ ಎದುರಾಗಿದೆ. ಸಹಕಾರ ಮತ್ತು ಬ್ಯಾಂಕ್​ಗಳಲ್ಲದೇ ಕೈಗಡ ಮಾಡಿರುವ ಸಾಲದ ಪ್ರಮಾಣ ಹೆಚ್ಚಾಗಿದೆ.

    ಆಹಾರ ಭದ್ರತೆಗೂ ಅಪಾಯ

    ಕಬ್ಬು, ಭತ್ತ, ರಾಗಿ, ಮೆಕ್ಕೆಜೋಳ, ತೊಗರಿ, ಉದ್ದು, ಶೇಂಗಾ, ಸೂರ್ಯಕಾಂತಿ, ಹತ್ತಿ ಮೊದಲಾದ ಬೆಳೆಗಳು ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದವು. ಕೇಂದ್ರ ಸರ್ಕಾರದ ಕೃಷಿ ವಿಧೇಯಕ ಗಳನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ಪಂಜಾಬ್, ಹರಿಯಾಣ ಭಾಗದ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡದಿರುವ ನಿರ್ಧಾರಕ್ಕೆ ಬಂದಿದ್ದಾರೆಂಬ ಸುದ್ದಿ ಇದೆ. ರಾಜ್ಯದಲ್ಲಿ ಮಳೆಯಿಂದಾಗಿರುವ ಹಾನಿ ಜತೆಗೆ ಈ ಅಂಶವೂ ಸೇರಿದರೆ ಮುಂದಿನ ದಿನಗಳಲ್ಲಿ ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರುವ ಅಪಾಯವಿದೆ.

    ಉತ್ಪಾದನೆ ಗುರಿ ಎಷ್ಟಿತ್ತು?

    ಬೆಳೆ ಬಿತ್ತನೆ (ಲಕ್ಷ ಹೆಕ್ಟೇರ್) ಉತ್ಪಾದನೆಯ ಗುರಿ (ಲಕ್ಷ ಟನ್​ಗಳಲ್ಲಿ)

    • ಏಕದಳ 47.19 110.02
    • ದ್ವಿದಳ 33.26 23.02
    • ಒಟ್ಟು ಆಹಾರ 80.45 133.05
    • ಎಣ್ಣೆಕಾಳು 16.47 13.5
    • ಹತ್ತಿ 0.75 13.89 ಲಕ್ಷ ಬೇಲ್
    • ಕಬ್ಬು 5.51 400
    • ತಂಬಾಕು 0.82 0.73

    ತಜ್ಞರ ಸಲಹೆಗಳೇನು?

    * ಆಹಾರ ಭದ್ರತೆಯ ಮೇಲೆ ಅಪಾಯ ಎದುರಾಗದಂತೆ ಎಚ್ಚರವಹಿಸಬೇಕು

    * ಪಾಳುಭೂಮಿಯಲ್ಲಿ ಬೆಳೆಗಳನ್ನು ಬೆಳೆಯಲು ಸರ್ಕಾರದಿಂದ ನೆರವಾಗಬೇಕು

    * ಎನ್​ಡಿಆರ್​ಎಫ್ ನಿಯಮದಲ್ಲಿ ಪರಿಹಾರದ ಮೊತ್ತ ಹೆಚ್ಚಿಸಬೇಕು

    * ಎಲ್ಲ ಬೆಳೆಗಳನ್ನು ಕಡ್ಡಾಯವಾಗಿ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು

    * ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ಸಿಗುವಂತಾಗಬೇಕು

    * ಪದೇಪದೆ ಸಂಕಷ್ಟಕ್ಕೆ ಒಳಗಾಗುವ ಪ್ರದೇಶದಲ್ಲಿ ಶಾಶ್ವತ ಸ್ಥಳಾಂತರ ಮಾಡಬೇಕು

    ಹಿಂಗಾರು ಹಂಗಾಮಿನಲ್ಲಿ ಎಷ್ಟು ಬಿತ್ತನೆ ಆಗುತ್ತದೆ ಎಂಬುದನ್ನು ಮಳೆ ನಿಂತ ಮೇಲಷ್ಟೇ ಅಂದಾಜಿಸಲು ಸಾಧ್ಯ. ಪರಿಹಾರ ಮೊತ್ತ ಹೆಚ್ಚಳಕ್ಕೆ ಕೇಂದ್ರದ ಮೇಲೆ ಮುಖ್ಯಮಂತ್ರಿ ಒತ್ತಡ ತರಲಿದ್ದಾರೆ.
    | ಬಿ.ಸಿ. ಪಾಟೀಲ್ ಕೃಷಿ ಸಚಿವ.

    ಈರುಳ್ಳಿ ಶೆ. 80, ಕಬ್ಬು ಶೇ. 50, ತೊಗರಿ, ಮೆಕ್ಕೆಜೋಳ, ರಾಗಿ ಹೀಗೆ ಪ್ರತಿಯೊಂದು ಬೆಳೆಯೂ ಹಾಳಾಗಿದೆ. ವೈಜ್ಞಾನಿಕವಾಗಿ ನಷ್ಟದ ಪರಿಹಾರ ಕೊಟ್ಟಾಗ ಮಾತ್ರ ರೈತರು ಉಳಿಯಲು ಸಾಧ್ಯವಾಗುತ್ತದೆ. ಸರ್ಕಾರ ಆ ನಿಟ್ಟಿನಲ್ಲಿ ನೋಡಬೇಕು.

    | ಕುರುಬೂರು ಶಾಂತಕುಮಾರ್ ಅಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ

    ಮಳೆಯಿಂದ ಹಾನಿ ಜಾಸ್ತಿಯಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬರಬೇಕು. ಆಹಾರ ಭದ್ರತೆಗೆ ಆಪಾಯ ಆಗದಂತೆ ಎಚ್ಚರಿಕೆ ವಹಿಸಬೇಕು.

    | ಸಚ್ಚಿನ್ ಮಿಗಾ ಅಧ್ಯಕ್ಷ, ಕಿಸಾನ್ ಸೆಲ್, ಕೆಪಿಸಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts