More

    ರಾಜ್ಯದಲ್ಲಿ ಬೆಳಗಾವಿಯೇ ಸ್ಮಾರ್ಟ್

    ಬೆಳಗಾವಿ: ಅತಿವೃಷ್ಟಿ ಮತ್ತು ಕೋವಿಡ್-19 ಸಂಕಷ್ಟದ ಸಮಯದಲ್ಲಿಯೂ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳ ಅನುಷ್ಠಾನದಲ್ಲಿ ರಾಜ್ಯದಲ್ಲಿ ಬೆಳಗಾವಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ರಾಷ್ಟ್ರಮಟ್ಟದ ಟಾಪ್ ಟೆನ್ ರ‌್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ನಗರದ ಅಭಿವೃದ್ಧಿ ಕುರಿತು ಭರವಸೆ ಮೂಡಿದಂತಾಗಿದೆ.

    ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕದ ಬೆಂಗಳೂರು, ಬೆಳಗಾವಿ, ತುಮಕೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಆಯ್ಕೆಯಾಗಿತ್ತು. ರಾಜ್ಯಕ್ಕೆ ತಲಾ ಒಂದು ಸಾವಿರ ಕೋಟಿ ರೂ. ಅನುದಾನ ಮೀಸಲು ಎಂದಿದ್ದರೂ ಆಡಳಿತಾತ್ಮಕ ವೆಚ್ಚ ಕಳೆದು ಒಟ್ಟಾರೆ 6117.57 ಕೋಟಿ ರೂ. ಮಂಜೂರಾಗಿದೆ. ಅವುಗಳಲ್ಲಿ 2,340 ಕೋಟಿ ರೂ. ಬಿಡುಗಡೆಯಾಗಿದ್ದು, 1,154.46 ಕೋಟಿ ರೂ. ವೆಚ್ಚವಾಗಿದೆ. 310.9 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಂಡಿದೆ. ರಾಜ್ಯದಲ್ಲಿ ಒಟ್ಟಾರೆ ಬೆಳವಣಿಗೆ ಶೇ. 18.87 ಆಗಿದೆ.

    ಬೆಳಗಾವಿಗೆ 909.41ಕೋಟಿ ರೂ. ಮಂಜೂರಾಗಿದ್ದು, ಅದರಲ್ಲಿ 396 ಕೋಟಿ ರೂ. ಬಿಡುಗಡೆಯಾಗಿದೆ. ಈವರೆಗೆ 290.67 ಕೋಟಿ ರೂ. ಖರ್ಚಾಗಿದೆ. 66.48 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದ್ದು, ಶೇ.35.91ರಷ್ಟು ಬೆಳವಣಿಗೆಯಾಗಿದೆ. ಇದು ರಾಜ್ಯದಲ್ಲಿಯೇ ಅತ್ಯಧಿಕ ಪ್ರಮಾಣವಾಗಿದ್ದು, ಬೆಳಗಾವಿಗೆ ಹೆಸರು ತಂದಿದೆ.

    ತುಮಕೂರು ದ್ವಿತೀಯ: ತುಮಕೂರಿನಲ್ಲಿ ಶೇ. 28.05 ರಷ್ಟು ಕಾಮಗಾರಿ ನಡೆದಿದೆ. ಈ ಜಿಲ್ಲೆಗೆ 909.34 ಕೋಟಿ ರೂ. ಮಂಜೂರಾಗಿದ್ದು, 307 ಕೋಟಿ ರೂ. ಬಿಡುಗಡೆಯಾಗಿದೆ. ಇವುಗಳಲ್ಲಿ 255.03 ಕೋಟಿ ರೂ. ಖರ್ಚಾಗಿದೆ. 170.74 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದ್ದು, ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ.

    ದಾವಣಗೆರೆ ತೃತೀಯ: ದಾವಣಗೆರೆಗೆ 841.35 ಕೋಟಿ ರೂ. ಮಂಜೂರಾಗಿದ್ದು, 396 ಕೋಟಿ ರೂ. ಬಿಡುಗಡೆಯಾಗಿದೆ. 207.01 ಕೋಟಿ ರೂ. ಈವರೆಗೆ ಖರ್ಚಾಗಿದೆ. 34.96 ಕೋಟಿ ರೂ. ಕಾಮಗಾರಿ ಪೂರ್ಣಗೊಂಡು ಶೇ.24.60ರಷ್ಟು ಕಾಮಗಾರಿ ನಡೆದಿದ್ದು, ತೃತೀಯ ಸ್ಥಾನದಲ್ಲಿದೆ.

    ಶಿವಮೊಗ್ಗ ಶೇ.16.86: ಶಿವಮೊಗ್ಗಕ್ಕೆ 846.25 ಕೋಟಿ ರೂ. ಮಂಜೂರಾಗಿದ್ದು, 307 ಕೋಟಿ ರೂ. ಬಿಡುಗಡೆಯಾಗಿದೆ. ಇವುಗಳಲ್ಲಿ 142.72 ಕೋಟಿ ರೂ. ಖರ್ಚಾಗಿದ್ದು, 10.71 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. ಒಟ್ಟಾರೆ ಶೇ. 16.86ರಷ್ಟು ಕಾಮಗಾರಿ ಅನುಷ್ಠಾನವಾಗಿದೆ. ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ 920.36 ಕೋಟಿ ರೂ. ಮಂಜೂರಾಗಿದ್ದು, 386 ಕೋಟಿ ರೂ. ಬಿಡುಗಡೆಯಾಗಿದೆ. 125.20 ಕೋಟಿ ರೂ. ಖರ್ಚಾಗಿದ್ದು, 15.91 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. ಶೇ. 13.60ರಷ್ಟು ಅನುಷ್ಠಾನವಾಗಿದೆ.

    ಮಂಗಳೂರು ಶೇ.10.67: ಮಂಗಳೂರಿನ 871.96 ಕೋಟಿ ರೂ. ಮಂಜೂರಾಗಿದ್ದು, 338 ಕೋಟಿ ರೂ. ಬಿಡುಗಡೆಯಾಗಿದೆ. ಈವರೆಗೆ 93 ಕೋಟಿ ರೂ. ಖರ್ಚಾಗಿದೆ. 12.82 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. ಶೇ.10.67ರಷ್ಟು ಅನುಷ್ಠಾನವಾಗಿದೆ.

    ರಾಜಧಾನಿಯಲ್ಲಿ ಶೇ.4.44ರಷ್ಟು ಅನುಷ್ಠಾನ

    ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಅನುಷ್ಠಾನದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ತೀವ್ರ ಹಿಂದುಳಿದಿದೆ. ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ 3ನೇ ಹಂತದಲ್ಲಿ ಅನುಮತಿ ದೊರೆತಿದ್ದು, 919.17 ಕೋಟಿ ರೂ. ಮಂಜೂರಾಗಿದೆ. ಅದರಲ್ಲಿ 210 ಕೋಟಿ ರೂ. ಬಿಡುಗಡೆಯಾಗಿದೆ. ಕೇವಲ 40.83 ಕೋಟಿ ರೂ ಖರ್ಚಾಗಿದ್ದು, ಶೇ.4.44ರಷ್ಟು ಅನುಷ್ಠಾನವಾಗಿದೆ. ಯಾವುದೇ ಕಾಮಗಾರಿಯೂ ಈವರೆಗೆ ಪೂರ್ಣಗೊಂಡಿಲ್ಲ.

    ಅತಿವೃಷ್ಟಿ ಮತ್ತು ಕೋವಿಡ್-19ದಿಂದಾಗಿ ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಇದೀಗ ಸೆಪ್ಟೆಂಬರ್‌ನಿಂದ ಕಾಮಗಾರಿಗಳು ಆರಂಭವಾಗಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲ ರಸ್ತೆ ಕಾಮಗಾರಿಗಳೂ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿವೆ.
    | ಶಶಿಧರ ಕುರೇರ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts