More

    ಡಿಸಿಎಂ ರೇಸ್‌ನಲ್ಲಿ ಆರ್.ವಿ. ದೇಶಪಾಂಡೆ?

    ಕಾರವಾರ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ, ಸಿಎಂ ಹುದ್ದೆಗಾಗಿ ಕಸರತ್ತು ನಡೆದಿದೆ. ಜಿಲ್ಲೆಯಲ್ಲೂ ನಾಲ್ವರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಈಗ ಸಚಿವರು ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆದಿದೆ.
    ರಾಜ್ಯದಲ್ಲಿ ಸಿಎಂ ಹುದ್ದೆಯ ಜತೆಗೆ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ. ರಾಜ್ಯ ವಿಧಾನಸಭೆಗೆ ಅತೀ ಹೆಚ್ಚು ಬಾರಿ ಆಯ್ಕೆಯಾಗಿರುವ ಹಿರಿಯ ನಾಯಕ ಜಿಲ್ಲೆಯ ಆರ್.ವಿ. ದೇಶಪಾಂಡೆ ಅವರ ಹೆಸರೂ ಡಿಸಿಎಂ ರೇಸ್‌ನಲ್ಲಿರುವ ಮಾಹಿತಿ ಇದೆ.
    ರಾಮಕೃಷ್ಣ ಹೆಗಡೆ ಅವರ ಶಿಷ್ಯರಾಗಿರುವ ಆರ್.ವಿ. ದೇಶಪಾಂಡೆ 1983 ರಿಂದ ಇದುವರೆಗೆ ಒಟ್ಟು 10 ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದರು. 2008 ರಲ್ಲಿ ಒಂದು ಬಾರಿ ಬಿಟ್ಟರೆ ಉಳಿದೆಲ್ಲ ಚುನಾವಣೆಯಲ್ಲಿ ಎಂದರೆ 9 ಬಾರಿ ಗೆದ್ದು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
    ಕೃಷಿ, ಕಂದಾಯ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ ಹೀಗೆ ಹಲವು ಸಚಿವ ಹುದ್ದೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಮಾತ್ರವಲ್ಲ ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಜಾತಿಯ ಲೆಕ್ಕಾಚಾರದಲ್ಲಿ ಹೋದರೆ ದೇಶಪಾಂಡೆ ಅವರಿಗೆ ಈ ಹುದ್ದೆ ದೊರೆಯದು. ಆದರೆ, ಹಿರಿತನ ಹಾಗೂ ಆಡಳಿತದ ವಿಚಾರವಾಗಿ ನೋಡಿದಲ್ಲಿ ಅವರಿಗೆ ಡಿಸಿಎಂ ಹುದ್ದೆ ಖಂಡಿತ ಸಿಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗೊಮ್ಮೆ ಡಿಸಿಎಂ ಹುದ್ದೆ ಕೈ ತಪ್ಪಿದರೂ ಯಾವುದಾದರೂ ಪ್ರಭಾವಿ ಖಾತೆ ದೊರೆಯುವುದಂತೂ ಖಚಿತ ಎಂದು ಆರ್.ವಿ. ದೇಶಪಾಂಡೆ ಅವರ ಆಪ್ತವಲಯದ ಅಭಿಪ್ರಾಯ.
    ಇತರರೂ ಪ್ರಯತ್ನ: ಜಿಲ್ಲೆಯಲ್ಲಿ ಮಂಕಾಳ ವೈದ್ಯ, ಹಾಗೂ ಸತೀಶ ಸೈಲ್ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಂಕಾಳ ವೈದ್ಯ ಅವರಿಗೆ ಮೀನುಗಾರರ ಕೋಟಾದಡಿ ಸಚಿವ ಸ್ಥಾನ ನೀಡಬೇಕು ಎಂದು ಈಗಾಗಲೇ ಮೀನುಗಾರರ ಮುಖಂಡರು ಪಕ್ಷದ ಪ್ರಮುಖರಲ್ಲಿ ಒತ್ತಾಯ ಮಾಡಿದ್ದಾರೆ. ಮೀನುಗಾರರಿಗೆ ಇದುವರೆಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿಲ್ಲ. ಇದರಿಂದ ಮಂಕಾಳ ವೈದ್ಯ ಅವರಿಗೆ ನೀಡಬೇಕು ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಮರಾಠಾ ಕೋಟಾದಡಿ ಸತೀಶ ಸೈಲ್ ಅವರೂ ಬೆಂಗಳೂರಿಗೆ ತೆರಳಿ ಪ್ರಯತ್ನ ನಡೆಸಿದ್ದಾರೆ. ನಾವು ಅವಕಾಶ ಸಿಕ್ಕರೆ ಜವಾಬ್ದಾರಿ ನಿಭಾಯಿಸಲು ಸಿದ್ಧ ಆದರೆ, ಪಕ್ಷ ಅದನ್ನು ನಿರ್ಣಯಿಸಬೇಕು ಎಂದು ಈ ಇಬ್ಬರೂ ಪ್ರತಿಕ್ರಿಯೆ ನೀಡಿದ್ದಾರೆ.

    ನಾಮಧಾರಿ ಕೋಟಾ: ರಾಜ್ಯದ ಕಾಂಗ್ರೆಸ್‌ನಲ್ಲಿ ನಾಮಧಾರಿ ಅಥವಾ ಈಡಿಗ ಕೋಟಾದಲ್ಲಿ ಮೂವರು ಶಾಸಕರು ಆಯ್ಕೆಯಾಗಿದ್ದಾರೆ. ಅದರಲ್ಲಿ ಶಿರಸಿಯ ಭೀಮಣ್ಣ ನಾಯ್ಕ ಕೂಡ ಒಬ್ಬರು. ಅವರು ಮೊದಲ ಬಾರಿ ಶಾಸಕರಾದರೂ 13 ವರ್ಷ ಡಿಸಿಸಿ ಅಧ್ಯಕ್ಷ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಮೂವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದ್ದು. ಪಟ್ಟಿಯಲ್ಲಿ ಮಧು ಬಂಗಾರಪ್ಪ ಅವರ ಹೆಸರು ಮೇಲ್ಪಂಗ್ತಿಯಲ್ಲಿದೆ. ತಪ್ಪಿದಲ್ಲಿ ಅವರ ಸೋದರ ಮಾವ ಭೀಮಣ್ಣ ಕೂಡ ಅವಕಾಶ ಪಡೆದುಕೊಂಡರೆ ಅಚ್ಚರಿಯಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts