More

    ಕಿವಿಗಳ ಮಹತ್ತು: ಮನೋಲ್ಲಾಸ..

    ಕಿವಿಗಳ ಮಹತ್ತು: ಮನೋಲ್ಲಾಸ..| ಡಾ. ಕೆ.ಪಿ. ಪುತ್ತೂರಾಯ

    ಒಮ್ಮೆ ಕಿವಿಗಳು ಸೃಷ್ಟಿಕರ್ತನಾದ ಬ್ರಹ್ಮನ ಬಳಿ ಹೋಗಿ ತಮ್ಮ ಕಥೆ ವ್ಯಥೆಗಳನ್ನು ಹೀಗೆ ಹೇಳಿಕೊಂಡವು. ‘ಹೇ ಬ್ರಹ್ಮಾ, ನಾವು ಕಿವಿಗಳು, ಇಬ್ಬರಿದ್ದೇವೆ. ಅವಳಿ ಜವಳಿ. ಆದರೆ, ನಮ್ಮ ದುರದೃಷ್ಟವೆಂದರೆ ಈತನಕ ನಾವು ಒಬ್ಬರು ಇನ್ನೊಬ್ಬರನ್ನು ನೋಡಲಿಲ್ಲ. ನಮ್ಮ ಕೆಲಸ ಬರೀ ಕೇಳಿಸಿಕೊಳ್ಳೋದು ಮಾತ್ರ; ಮಾತನಾಡುವ ಅವಕಾಶವಿಲ್ಲ. ಹೊಗಳಿಕೆಯೋ, ತೆಗಳಿಕೆಯೋ. ಬೈಗಳೋ, ನಿಂದನೆಗಳೋ, ಇತರರು ಏನು ಹೇಳಿದರೂ ಕೇಳಿಕೊಂಡು ಸುಮ್ಮನಾಗಿರಬೇಕು. ಕಣ್ಣಿಗೆ ಬರುವ ದೃಷ್ಟಿದೋಷದ ತಪ್ಪಿಗೆ ನಮಗೆ ಶಿಕ್ಷೆ. ಕನ್ನಡಕದ ಭಾರವನ್ನು ನಾವೇ ಹೊರಬೇಕು. ಶರೀರದ ಯಾವುದೇ ಅಂಗ ತಪ್ಪು ಮಾಡಿದರೂ ಶಿಕ್ಷೆ ನಮಗೆ. ಶಾಲೆಯಲ್ಲಾಗಲೀ, ಮನೆಯಲ್ಲಾಗಲೀ ಕಿವಿ ಹಿಂಡುತ್ತಾರೆ. ಹೆಂಗಸರು ಅಲಂಕಾರ ಮಾಡಿಕೊಳ್ಳುವಾಗ ಅವರ ಕಣ್ಣಿಗೆ ಕಾಡಿಗೆ, ಮುಖಕ್ಕೆ ಪೌಡರ್, ತುಟಿಗೆ ಲಿಪ್​ಸ್ಟಿಕ್ ಹಾಕುತ್ತಾರೆ. ಆದರೆ, ನಮಗೇನೂ ಇಲ್ಲ! ಬದಲಿಗೆ ಆಭರಣಗಳನ್ನು ಧರಿಸಲು ನಮ್ಮನ್ನು ಚುಚ್ಚಿ ತೂತು ಮಾಡಿಕೊಳ್ಳುತ್ತಾರೆ. ನಮ್ಮನ್ನು ಆಭರಣಗಳಿಂದ ಸಿಂಗರಿಸಿಕೊಂಡಾಗ ಸಿಗುವ ಹೊಗಳಿಕೆ ಅವರ ಮುಖಕ್ಕೆ. ಆದರೆ, ನೋವು ಮಾತ್ರ ನಮಗೆ.

    ಚೆಲುವೆಯ ಎಲ್ಲಾ ಅಂಗಾಂಗಗಳನ್ನು ಕವಿಗಳು ವರ್ಣಿಸುತ್ತಾರೆ. ಕಣ್ಣುಗಳು ಕಮಲವಂತೆ, ಮೂಗು ಸಂಪಿಗೆಯಂತೆ, ಹಲ್ಲುಗಳು ದಾಳಿಂಬೆಯ ಬೀಜಗಳಂತೆ ಇತ್ಯಾದಿ. ಆದರೆ, ನಮ್ಮನ್ನು ವಿವರಿಸುವಾಗ ಯಾವ ಹೋಲಿಕೆಯೂ ಇಲ್ಲ. ಕ್ಷೌರಿಕ ಕೂದಲು ಕತ್ತರಿಸುವಾಗ ಅಪ್ಪಿತಪ್ಪಿ ನಮಗೂ ಕೆಲವೊಮ್ಮೆ ಕತ್ತರಿಯ ರುಚಿ ತೋರಿಸುತ್ತಾನೆ. ಗಮನವಿಟ್ಟು ಕೇಳದಿದ್ದರೆ ಈ ಕಿವಿಯಿಂದ ಕೇಳಿ ಆ ಕಿವಿಯಲ್ಲಿ ಬಿಡುವವನೆಂಬ ಅಪವಾದ. ಯಾರಾದರೂ ಹೇಳಿದ್ದನ್ನು ತಕ್ಷಣ ನಂಬಿದರೆ ಹಿತ್ತಾಳೆ ಕಿವಿಯವನೆಂಬ ಟೀಕೆ. ಗುಟ್ಟನ್ನು ಹೇಳುವಾಗ ಹುಷಾರಾಗಿರಿ, ಗೋಡೆಗಳಿಗೂ ಕಿವಿಗಳಿವೆ ಎಂಬ ಸೂಚನೆ. ಈಗಲಾದರೂ ಅರ್ಥವಾಯಿತೇ ದೇವ ನಮ್ಮಗಳ ಕಥೆ ವ್ಯಥೆ’.

    ಎಲ್ಲವನ್ನೂ ಕೇಳಿಸಿಕೊಂಡ ಬ್ರಹ್ಮದೇವನೆಂದ. ‘ಕಿವಿಗಳೇ ನಿಮಗೊಂದು ಕಿವಿಮಾತು ಹೇಳುವೆ. ನೀವು ನಿಮ್ಮ ಬಗ್ಗೆ ಇಷ್ಟೊಂದು ನಿಕೃಷ್ಟವಾಗಿ ಭಾವಿಸದಿರಿ. ದೇಹದ ಪಂಚೇಂದ್ರಿಯಗಳಲ್ಲಿ ನೀವು ಕೂಡಾ ಒಂದು. ನೀವಿಲ್ಲದೆ ಮನುಷ್ಯ ಕಿವುಡನಾಗುವ; ಕಿವುಡನಾದರೆ ಈ ಜಗತ್ತಿನ ಸ್ವರ ಮಾಧುರ್ಯಗಳಿಂದ ವಂಚಿತನಾಗುವ. ನೀವು ಸುಶ್ರಾವ್ಯ ಸಂಗೀತವನ್ನು ಕೇಳಿಸಿಕೊಳ್ಳಬಲ್ಲಿರಿ. ಬಡವರ ಕೂಗಿಗೂ ಕಿವಿಯಾಗಬಲ್ಲಿರಿ. ಜಾಣರು ಹೆಚ್ಚು ಕೇಳಿಸಿಕೊಳ್ಳುತ್ತಾರೆ, ಕಡಿಮೆ ಮಾತನಾಡುತ್ತಾರೆ. ಇದಕ್ಕಾಗಿಯೇ ನಾನು ಮನುಷ್ಯನಿಗೆ ಒಂದೇ ನಾಲಿಗೆಯನ್ನು, ಎರಡು ಕಿವಿಗಳನ್ನು ಕೊಟ್ಟಿರೋದು. ಮಹಿಳೆಯ ಶೋಭೆ ಹೆಚ್ಚಾಗುವುದು ನೀವು ಧರಿಸುವ ಬೆಂಡೋಲೆಯಿಂದಲ್ಲವೇ? ನಿಮ್ಮ ರಚನೆಯನ್ನು ಎಷ್ಟು ಅದ್ಭುತವಾಗಿ ನಿರ್ವಿುಸಿದ್ದೇನೆ ಎಂದರೆ, ಒಂದು ನೇರವಾದ ಸಲಾಕೆಯಿಂದ ಕಿವಿಯೊಳಗೆ ಚುಚ್ಚಿದರೂ, ನಾಜೂಕಾದ ಈ ಅಂಗಗಳನ್ನು ನಾಶಪಡಿಸಲು ಸಾಧ್ಯವಿಲ್ಲ. ನೀವು ಹೇಳಿದ್ದನ್ನ ನಾನು ಕೇಳಿಸಿಕೊಳ್ಳಲು, ನಾನು ಹೇಳಿದ್ದನ್ನ ನೀವು ಕೇಳಿಸಿಕೊಳ್ಳಲು ನಿಮ್ಮ ಕಿವಿಗಳಿಂದ ಮಾತ್ರವೇ ಸಾಧ್ಯವಾಯಿತಲ್ಲವೇ! ಆದುದರಿಂದ ಯಾವ ರೀತಿಯ ಕೀಳರಿಮೆಯೂ ಬೇಡ; ಹೆಮ್ಮೆಪಟ್ಟುಕೊಂಡಿರಿ.’

    (ಲೇಖಕರು ಹವ್ಯಾಸಿ ಬರಹಗಾರರು)

    ‘ಹೆಂಡ್ತಿಯನ್ನು ಚೆನ್ನಾಗಿ ನೋಡಿಕೊ’ ಎಂದ ಸಂಬಂಧಿಕರಿಬ್ಬರಿಗೂ ಇರಿದ; ಒಬ್ಬನ ಸಾವು, ಇನ್ನೊಬ್ಬನ ಪರಿಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts