More

    ತೀವ್ರ ಬರಗಾಲ! ಶೇ.93 ರಷ್ಟು ಬೆಳೆ ಸಮೀಕ್ಷೆ ಪೂರ್ಣ! ಜಿಲ್ಲೆಗೆ. ಅ.6 ರಂದು ಕೇಂದ್ರ ಅಧ್ಯಯನ ತಂಡ

    ಶಿವಾನಂದ ಹಿರೇಮಠ ಗದಗ
    ರಾಜ್ಯದ 191 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ ಹಿನ್ನೆಲೆ ಬರಗಾಲ ಪರಿಸ್ಥಿತಿ ಅರಿಯಲು ಕೇಂದ್ರ ಅಧ್ಯಯನ ತಂಡ(ಐಎಂಸಿಟಿ) ಅ.6 ರಂದು ರಾಜ್ಯಕ್ಕೆ ಬರಲಿದೆ. ಅದರಂತೆ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಗದಗ ತಾಲೂಕಿನ ಕೆಲ ಹಳ್ಳಿಗಳಿಗೆ ಅ.6 ರಂದೇ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ವಸ್ತುಸ್ಥಿತಿ ಅರಿಯಲಿದೆ. ಎನ್ ಡಿ ಆರ್ ಎಫ್​ ಮಾನದಂಡ ಅನ್ವಯ ರಾಜ್ಯ ಸರ್ಕಾರಕ್ಕೆ ಪ್ಯಾಕೇಜ್​ ಪಡೆಯಲು ಕೇಂದ್ರ ಅಧ್ಯಯನ ಸಮಿತಿಯ ವರದಿ ಮಹತ್ವದ್ದಾಗಿದ್ದು, ಬರಪೀಡಿತ ತಾಲೂಕುಗಳಿಗೆ ಸಮಿತಿಯ ವರದಿ ವರದಾನ ಆಗಲಿದೆಯೇ ಎಂಬುದು ಕುತೂಹಲದ ವಿಷಯ.
    ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸಾಧಾರಣ ಮಳೆ ಆಗಿದ್ದು ಹೊರತುಪಡಿಸಿ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಆರಂಭಿಕ ಹಂತದಲ್ಲಿ ಶೇ.10ರಷ್ಟು ಬೆಳೆ ಸಮೀಕ್ಷೆ ನಡೆಸಿದ್ದ ಜಿಲ್ಲಾಡಳಿತ ರಾಜ್ಯ ಸರ್ಕಾಕ್ಕೆ ವರದಿ ಸಲ್ಲಿಸಿತ್ತು. ವರಧಿ ಆಧರಿಸಿ ಮುಂಡರಗಿ ತಾಲೂಕು ಹೊರತುಪಡಿಸಿ ಜಿಲ್ಲೆಯ 6 ತಾಲೂಕುಗಳನ್ನು ತೀವ್ರ ಬರಗಾಲದ ತಾಲೂಕುಗಳು ಎಂದು ಸರ್ಕಾರ ಘೋಷಣೆ ಮಾಡಿದೆ. ಸರ್ಕಾರದ ಘೋಷಣೆ ನಂತರ ಜಿಲ್ಲೆಯಲ್ಲಿ ಸಂಪೂರ್ಣ ಬೆಳೆ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಸೂಚಿಸಿತ್ತು. ಅದರಂತೆ ಈ ವರೆಗೆ ಶೇ.93 ರಷ್ಟು ಬೆಳೆ ಸಮೀಕ್ಷೆ ನಡೆದಿದೆ.
    ಜಿಲ್ಲೆಯಲ್ಲಿ ಮಳೆಕೊರತೆ:
    ಜಿಲ್ಲೆಯಲ್ಲಿ ಈ ವರೆಗೂ ಸರಾಸರಿ ಶೇ.62 ಮಳೆ ಕೊರತೆ ಆಗಿದೆ. ಗದಗ ತಾಲೂಕಿನಲ್ಲಿ ಶೇ. 39, ಮುಂಡರಗಿ ತಾಲೂಕಿನಲ್ಲಿ ಶೇ. 37, ನರಗುಂದ ತಾಲೂಕಿನಲ್ಲಿ ಶೇ.65, ರೋಣದಲ್ಲಿ ಶೇ.76, ಶಿರಹಟ್ಟಿಯಲ್ಲಿ ಶೇ.86, ಗಜೇಂದ್ರಗಡ ಶೇ.77, ಹಾಗೂ ಲಕ್ಷ್ಮೇಶ್ವರದಲ್ಲಿ ಶೇ.81 ರಷ್ಟು ಪ್ರಸಕ್ತ ಸಾಲಿನಲ್ಲಿ ಮಳೆ ಅಭಾವ ಎದುರಾಗಿದೆ. ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲೆಯ ಸಿಂಗಟಾಲೂರು ಮತ್ತು ನವಿಲು ತೀರ್ಥದಲ್ಲಿ ಅಗತ್ಯ ನೀರು ಸಂಗ್ರಹಣೆ ಮಾಡಲಾಗಿದೆ. ಈ ನೀರನ್ನು ಕುಡಿಯಲು ಮಾತ್ರವೇ ಬಳಕೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಕೃಷಿಗೆ ನೀರು ಬಳಸುವಂತಿಲ್ಲ.
    ಬೆಳೆ ನಾಶ:
    ಜಿಲ್ಲೆಯಲ್ಲಿ ಹೆಸರು ಉತ್ಪನ್ನ ಸಂಪೂರ್ಣ ಕೈಕೊಟ್ಟಿದೆ. ಮಳೆ ಕೊರತೆಯಿಂದಾಗಿ ಮೆಕ್ಕೆಜೋಳ ಬಿತ್ತನೆ ನಡೆದಿದ್ದರೂ ನಿರೀತ ಮಟ್ಟದ ಇಳುವರಿ ಬರುವುದಿಲ್ಲ. ಶೇಂಗಾ, ಸೂರ್ಯಕಾಂತಿ, ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗೆ ನೀರಿನ ಕೊರತೆ ಎದುರಾಗಿದೆ. ಮಳೆ ಅಭಾವ ಹಿನ್ನೆಲೆ ಹೆಸರು ಬೆಳೆ ಶೇ.79ರಷ್ಟು ಬಿತ್ತನೆ ನಡೆದಿಲ್ಲ. ಜೋಳ ಶೇ.61, ಅವರೆ ಶೇ. 60 ರಷ್ಟು , ಹುರಳಿ ಶೇ. 45, ಉದ್ದು ಶೇ.86, ಶೇಂಗಾ ಶೇ. 45 ರಷ್ಟು, ಸೋಯಾಬೀನ್​ ಶೇ. 58 ರಷ್ಟು, ಹತ್ತಿ ಶೇ.75 ರಷ್ಟು ಬಿತ್ತನೆ ಜರುಗಿಲ್ಲ.

    ಜಿಲ್ಲೆಯಲ್ಲಿ 2,13,941 ಹೆಕ್ಟೇರ್​ ಪ್ರದೇಶ ಹಾನಿ:
    ಗದಗ: ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ 2,13,941 ಹೆಕ್ಟೇರ್​ ಪ್ರದೇಶ ಹಾನಿಗೊಳಗಾಗಿದೆ. 1,38,898 ರೈತರಿಗೆ ತೊಂದರೆ ಆಗಿದೆ. ಜಿಲ್ಲೆಯಲ್ಲಿ 1,515.25 ಕೋಟಿ ರೂ. ನೈಜ ಹಾನಿಯಾಗಿದೆ. ನೈಜ ಹಾನಿ ಹೊರತುಪಡಿಸಿ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಒಟ್ಟು 215.53 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಸ್ಥಳ ವೀಕ್ಷಣೆ: ಜಿಲ್ಲೆಯ ಎಲ್ಲ ಕ್ಷೇತ್ರವನ್ನು ಸಮೀಕ್ಷಗೆ ನಡೆಸಲು ಜಿಲ್ಲಾಡಳಿತ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ನೂಡಲ್​ ಅಧಿಕಾರಿಗಳನ್ನು ನೇಮಿಸಿದೆ. ಬೆಳೆ ಸಮೀಕ್ಷೆ ನಡೆಸಲು ರೈತರಲ್ಲೂ ಜಾಗೃತಿ ಮೂಡಿಸಲು ಸೂಚಿಸಿದೆ. ಪರಿಣಾಮ ಶೇ.93 ರಷ್ಟು ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ಅ.6 ರಂದು ಕೇಂದ್ರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಹಾಗೂ ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಲಕ್ಷ್ಮೇಶ್ವರ ಮತ್ತು ಇತರೆ ತಾಲೂಕಿಗೆ ಭೇಟಿ ನೀಡಿ ಪ್ರಾಥಮಿಕ ಮಾಹಿ ಕಲೆ ಹಾಕಿದ್ದಾರೆ. ಭಾಗಶಃ ಅಕ್ಟೋಬರ್​ ಕೊನೆ ವಾರದಲ್ಲಿ ಎನ್ ಡಿ ಆರ್ ಎಫ್ ಮಾನದಂಡ ಪ್ರಕಾರ ರೈತರಿಗೆ ಪರಿಹಾರ ಲಭಿಸಬಹದು ಎಂದು ಮೂಲಗಳು ತಿಳಿಸಿವೆ.

    ತಾಲೂಕುವಾರು ಬೆಳೆ ಸಮೀಕ್ಷೆ
    ತಾಲೂಕು – ಶೇ.ಸಮೀಕ್ಷೆ

    ಗದಗ – ಶೇ.91.75
    ಗಜೇಂದ್ರಗಡ – ಶೇ.90.84
    ಶಿರಹಟ್ಟಿ – ಶೇ. 100

    ಲಕ್ಷ್ಮೇಶ್ವರ – ಶೇ.98.88
    ಮುಂಡರಗಿ – ಶೇ.90
    ನರಗುಂದ – ಶೇ. 90.13
    ರೋಣ – ಶೇ. 91.16

    ಅತೀವೃಷ್ಟಿಯಿಂದಲೂ ಹಾನಿ: ಬರಗಾಲದ ಜತೆಗೆ ಜಿಲ್ಲೆಯಲ್ಲಿ ಅತೀವೃಷ್ಟಿಯಿಂದಲೂ ರೈತರಿಗೆ ಹಾನಿಯಾಗಿದೆ. ಜುಲೈ ತಿಂಗಳಲ್ಲಿ ಅಕಾಲಿಕ ಮಳೆ ಸುರಿದು 121ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿ ಉಂಟಾಗಿತ್ತು. ಮಲಪ್ರಭಾ ಮತ್ತು ತುಂಗಭದ್ರ ಪ್ರವಾಹದಿಂದ ಆಪತ್ತು ಎದುರಿಸಬಹುದಾದ ನದಿ ಪಾತ್ರದ ಹಳ್ಳಿ ಜನರಿಗೆ ಜಿಲ್ಲಾ ಆಡಳಿತ ಎಚ್ಚರಿಕೆ ನೀಡಿತ್ತು. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿನ 3 ಕೋಟಿ ಅನುದಾನದಲ್ಲಿ 1.70 ಕೋಟಿ ಪರಿಹಾರ ಈಗಾಗಲೇ ವಿತರಿಸಲಾಗಿದೆ.

    ಕೋಟ್​:
    ಜಿಲ್ಲೆಯಲ್ಲಿ ಬೆಳೆ ಹಾನಿ ಕುರಿತು ಈಗಾಗಲೇ ಸವರದಿ ಸಲ್ಲಿಸಲಾಗಿದೆ. ವರದಿ ಅನ್ವಯ ಕೇಂದ್ರ ಅಧ್ಯಯನ ತಂಡವು ಲಕ್ಷ್ಮೇಶ್ವರ, ಶಿರಹಟ್ಟಿ ಮತ್ತು ಗದಗ ತಾಲೂಕಿಗೆ ಭೇಟಿ ನೀಡುತ್ತಿದೆ. ಜಿಲ್ಲೆಯಲ್ಲಿ ಬರ ಆವರಿಸಿದ ಕುರಿತು ಈಗಾಗಲೇ ವರದಿ ಮೂಲಕ ಮನವರಿಕೆ ಮಾಡಿಕೊಡಲಾಗಿದ್ದು, ರೈತರಿಗೆ ಆದಷ್ಟು ಬೇಗ ಪರಿಹಾರ ಲಭಿಸುವ ಭರವಸೆ ಇದೆ.
    ವೈಶಾಲಿ ಎಂ.ಎಲ್​, ಜಿಲ್ಲಾಧಿಕಾರಿ – ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts