ಐಮಂಗಲ: ಮೇಡಂ ನಮ್ಮ ಸಮಸ್ಯೆನೂ ಸ್ವಲ್ಪ ಆಲಿಸಿ. ನಮ್ಮೂರಲ್ಲಿ ನೀರಿಗೆ ಬಹಳ ತೊಂದರೆ ಐತೆ. ತಳ್ಳೋ ಗಾಡಿ, ಬೈಕ್ ತಗೊಂಡು ದೂರದಿಂದ ನೀರು ತರಬೇಕು. ನಮ್ಮೂರಲ್ಲೇ ಶುದ್ಧ ನೀರಿನ ವ್ಯವಸ್ಥೆ ಮಾಡಿ ಪುಣ್ಯ ಕಟ್ಗೊಳ್ಳಿ…
ಇದು ಸೊಂಡೆಕೆರೆಯಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಗ್ರಾಮದ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ವಿನೋತ್‌ಪ್ರಿಯಾ ಅವರಲ್ಲಿ ವಿನಂತಿಸಿದ ಪರಿ.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ನಿಮ್ಮ ಅಹವಾಲು ಆಲಿಸಿ ಪರಿಹಾರ ಕ್ರಮ ಕೈಗೊಳ್ಳಲೆಂದು ಜನಸ್ಪಂದನ ಸಭೆ ಹಮ್ಮಿಕೊಳ್ಳಲಾಗಿದೆ. ಏನೇ ತೊಂದರೆ ಇದ್ದರೂ ಪೂರಕ ದಾಖಲೆ ನೀಡಿ ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು.
ಸಮಾಜ ಕಲ್ಯಾಣ, ಪಶುಸಂಗೋಪನೆ, ಕಂದಾಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವಿಧ ಸೌಲಭ್ಯಗಳ ಮಾಹಿತಿ ನೀಡಿದರು.
ಗರ್ಭಿಣಿ ಹಾಗೂ ಬಾಣಂತಿಯರನ್ನುದ್ದೇಶಿಸಿ ಮಾತನಾಡಿದ ಜಿಪಂ ಸಿಇಒ ಸತ್ಯಭಾಮಾ, ಅಂಗನವಾಡಿ ಕೇಂದ್ರಗಳಲ್ಲಿ ಮಾತೃಶ್ರೀ ಹಾಗೂ ಮಾತೃವಂದನ ಯೋಜನೆಯಡಿ ಪೌಷ್ಟಿಕ ಆಹಾರ ಇನ್ನಿತರ ಸೌಲಭ್ಯ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ನಾವು ಪ್ರತಿ ತಿಂಗಳ ಪಡಿತರ ಪಡೆಯಲು ದೂರದ ವದ್ದಿಕೆರೆಗೆ ಹೋಗಬೇಕು. ಗ್ರಾಮದಲ್ಲೇ 350 ಪಡಿತರ ಚೀಟಿಗಳಿದ್ದು, ಇಲ್ಲಿಯೇ ನ್ಯಾಯಬೆಲೆ ಅಂಗಡಿ ತೆರೆಯಬೇಕು ಎಂದು ಮನವಿ ಮಾಡಿದರು.
ವದ್ದಿಕೆರೆ ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಶುದ್ಧ ಕುಡಿವ ನೀರು, ಶೌಚಗೃಹ, ಸೂಕ್ತ ಭದ್ರತೆ ಹಾಗೂ ಗ್ರಾಮದಲ್ಲಿ ರುದ್ರಭೂಮಿ ವ್ಯವಸ್ಥೆ ಮಾಡಿಕೊಡಿ ಎಂದು ಕೋರಿದರು.
ಸೊಳ್ಳೆ ನಿಯಂತ್ರಣಕ್ಕೆ ಸೂಕ್ತ ಚರಂಡಿ, ಜಮೀನುಗಳಿಗೆ ಹೋಗಲು ದಾರಿ, ಸಣ್ಣ ರೈತರಿಗೆ ಬರ ಪರಿಹಾರ ಯೋಜನೆಯಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಜೋಡಿಪುರ ಶಾಲೆ ಅಡುಗೆ ಕೊಠಡಿ ದುರಸ್ತಿಗೊಳಿಸಬೇಕು. ಸೊಂಡೆಕೆರೆಯಲ್ಲಿ ಆಸ್ಪತ್ರೆ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಎಡಿಸಿ ಸಂಗಪ್ಪ, ಎಸಿ ಪ್ರಸನ್ನ, ಎಎಸ್‌ಪಿ ಮಹಾಲಿಂಗ ನಂದಗಾವಿ, ತಹಸೀಲ್ದಾರ್ ಜಿ.ಬಿ. ಸತ್ಯನಾರಾಯಣ, ಎಂ.ಡಿ. ಕೋಟೆ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಮಾಜಿ ಅಧ್ಯಕ್ಷ ಚಂದ್ರಪ್ಪ, ಜಿಪಂ ಸದಸ್ಯರಾದ ಟಿ.ಆರ್. ರಾಜೇಶ್ವರಿ, ಶಶಿಕಲಾ, ಗ್ರಾಪಂ ಸದಸ್ಯರು, ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.