More

    ಯರಬಳ್ಳೀಲಿ ಇಂದಿನಿಂದ ಕಾಳುಹಬ್ಬಕ್ಕೆ ಚಾಲನೆ

    ಐಮಂಗಲ: ಹೋಬಳಿಯ ಯರಬಳ್ಳಿ ಗ್ರಾಮದ ದೊಡ್ಡ ಗೊಲ್ಲರಹಟ್ಟಿಯಲ್ಲಿ ಫೆ.9ರಂದು ಝಂಡೆ ಮರ ಎತ್ತುವ ಮೂಲಕ ಹಾಲು ಕುಡಿದ ಸ್ವಾಮಿಯ ಕಾಳುಹಬ್ಬಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.

    ಕಾಟಲಿಂಗೇಶ್ವರ, ಗಾದ್ರಲಿಂಗೇಶ್ವರ, ಸಿಂಪಣ್ಣ ದೇವರು, ಮದ್ದನಕುಂಟೆ ಯರ‌್ರಪ್ಪ ಸ್ವಾಮಿ ದೇವರುಗಳನ್ನು ಒಂದೆಡೆ ಸೇರಿಸಿ ಯಾದವ ಸಮುದಾಯದ ಗುಡಿಕಟ್ಟಿನ ಅಣ್ಣ ತಮ್ಮಂದಿರು ಆಚರಿಸುವ ಹಬ್ಬ ಇದಾಗಿದ್ದು, ಪ್ರತಿ ವರ್ಷ ಭರತಹುಣ್ಣಿಮೆ ನಂತರ ಬರುವ ಸೋಮವಾರದಂದು ಈ ಆಚರಣೆಗೆ ಚಾಲನೆ ನೀಡಲಾಗುತ್ತದೆ.

    ಫೆ.10ರ ಬೆಳಗ್ಗೆ ಶ್ರೀಸ್ವಾಮಿಗೆ ಸುಣ್ಣದ ಗುಂಡಿಹಳ್ಳದಲ್ಲಿ ಗಂಗಾಪೂಜೆ ನೆರವೇರಿಸಲಾಗುತ್ತದೆ. ಇದು ಎಂತಹ ಬರಗಾಲ ಬಂದರೂ ಬತ್ತಿಲ್ಲವೆಂಬದೇ ಇಲ್ಲಿನ ವಿಶೇಷ. ಈ ನೀರನ್ನೇ ದೇವರ ಪೂಜೆ ನಿತ್ಯ ಬಳಸಲಾಗುತ್ತಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

    ಗಂಗಾಪೂಜೆ ಬಳಿಕ ದೇವರನ್ನು ಪೂಜಾರಿಯ ಹೆಗಲ ಮೇಲೆ ಕೂರಿಸಲಾಗುತ್ತದೆ. ಈ ವೇಳೆ ದೇವರು ಯಾವ ದಿಕ್ಕಿಗೆ ನೋಡುತ್ತದೆಯೋ ಆ ದಿಕ್ಕಿನಲ್ಲಿ ಮಳೆ ಬೆಳೆ ಕಡಿಮೆ ಆಗುತ್ತದೆ. ಕಾಲ ಕೆಳಗೆ ನೋಡಿದಲ್ಲಿ ಸಮೃದ್ಧ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ. ಒಂದು ವೇಳೆ ಏನಾದರು ತಪ್ಪಾಗಿದ್ದರೆ ಕಂಬಿ ಪೂಜಾರಿ ಹೆಗಲ ಮೇಲೆ ಕುಳಿತ ದೇವರು ಆಕಾಶಕ್ಕೆ ಹಾರುತ್ತದೆ ಎಂಬ ಪ್ರತೀತಿ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ಹಾಲು ಕುಡಿದ ಸ್ವಾಮಿಗೆ ಮಡಿಯಿಂದ ತಂದ ಮುದುಕದ ಎಲೆ, ಸಿಂಪಣ್ಣ, ಕಾಟಲಿಂಗೇಶ್ವರ, ಗಾದ್ರಲಿಂಗೇಶ್ವರ ದೇವರುಗಳಿಗೆ ಅಂಚಿ ಕಡ್ಡಿಯಿಂದ ದೇವಸ್ಥಾನ ನಿರ್ಮಿಸಿ ಇದರಲ್ಲಿ ದೇವರುಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.

    ಸುಗ್ಗಿ ಕಾಲದಲ್ಲಿ ಬೆಳೆದ ಹುರುಳಿ, ಕಡಲೆ ಇತ್ಯಾದಿ ಧಾನ್ಯಗಳನ್ನು ಮೊದಲು ದೇವರಿಗೆ ಅರ್ಪಿಸಿ ಬಳಸುವುದು ಕಾಳುಹಬ್ಬದ ವಿಶೇಷತೆಯಾಗಿದೆ.

    ಈ ದೇವರುಗಳ ದೇವಸ್ಥಾನದಲ್ಲಿ ವಿದ್ಯುತ್ ದೀಪ ಅಳವಡಿಸುವಂತಿಲ್ಲ. ಬದಲಾಗಿ ಮಡಿಯಿಂದ ಕರೆದ ಹಸುವಿನ ಹಾಲಿಗೆ ಹೆಪ್ಪಾಕಿ ಅದರಿಂದ ಬರುವ ಬೆಣ್ಣೆಯಿಂದ ತಯಾರಿಸಿದ ತುಪ್ಪವನ್ನು ಪ್ರಣತಿಯಲ್ಲಿ ಹಾಕಿ ಬೆಳಗಿಸುವ ವಾಡಿಕೆ ಇದೆ.

    ಫೆ.11ರಂದು ಕಾಳಿನ ಪೂಜೆ, ಅಕ್ಕಿ ಅಳೆಯುವುದು, ಜಾಡಿ ಹಾಸುವ ಸೇವೆ ನಡೆಯಲಿದೆ. 12ರಂದು ಉಂಡೆ ಮಂಡೆ, ಹರಿಸೇವೆ, 13ಕ್ಕೆ ಕೊಂಡಕ್ಕೆ ಹೋಗುವುದು, ಫೆ.17ರಂದು ಮರುದೀಪದೊಂದಿಗೆ ಕಾಳುಹಬ್ಬಕ್ಕೆ ತೆರೆ ಬೀಳಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts