More

    ಶಂಕಿತ, ಸೋಂಕಿತರಿಂದ ನಿರಂತರ ಹಲ್ಲೆಗೊಳಗಾಗಿ ಸಿಡಿದೆದ್ದ ವೈದ್ಯ ಸಮೂಹ: ಸೂಕ್ತ ಕಾನೂನು ತರದಿದ್ದರೆ ‘ಬ್ಲ್ಯಾಕ್‌ ಡೇ’ ಆಚರಣೆ

    ನವದೆಹಲಿ: ಕರೊನಾ ವೈರಸ್‌ ಸೋಂಕಿತರ ಸೇವೆಗೆ ಟೊಂಕ ಕಟ್ಟಿ ನಿಂತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಬೆಂಗಳೂರು ಸೇರಿದಂತೆ ದೇಶದ ಕೆಲವು ಕಡೆಗಳಲ್ಲಿ ದಿನನಿತ್ಯವೂ ಹಲ್ಲೆಗಳು ನಡೆಯುತ್ತಲೇ ಇವೆ. ಇಂಥ ಅಮಾನವೀಯ ಕೃತ್ಯಗಳ ಬಗ್ಗೆ ಇಷ್ಟು ದಿನಗಳವರೆಗೆ ತಾಳ್ಮೆಯಿಂದ ವೈದ್ಯ ಸಮೂಹ ಈಗ ಸಿಡಿದೆದ್ದಿದೆ.

    ದೇಶಾದ್ಯಂತದ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ಮೇಲಿನ ದೌರ್ಜನ್ಯ ಮತ್ತು ನಿಂದನೆಯನ್ನು ತಕ್ಷಣವೇ ಕೊನೆಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು. ಇಲ್ಲದೇ ಹೋದರೆ, ದೇಶಾದ್ಯಂತದ ವೈದ್ಯರು ಏಪ್ರಿಲ್ 23ರಂದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹೇಳಿದೆ.

    ತಮ್ಮ ಜವಾಬ್ದಾರಿಯನ್ನು ಅರಿತಿರುವ ವೈದ್ಯರು, ಪ್ರತಿಭಟನೆಯ ರೂಪವಾಗಿ ಕಪ್ಪು ಬ್ಯಾಡ್ಜ್‌ ಧರಿಸಿದರೂ ಕೆಲಸಕ್ಕೆ ಹಾಜರಾಗುತ್ತಾರೆ. ಈ ಮೂಲಕ ‘ಬ್ಲ್ಯಾಕ್‌ ಡೇ’ ಆಚರಿಸಲಾಗುವುದು ಎಂದು ಸಂಘ ಹೇಳಿದೆ. ಹಿಂಸಾಚಾರದ ವಿರುದ್ಧ ಪ್ರತಿಭಟನೆಯ ರೂಪವಾಗಿ ಇದೇ 22ರಂದು ರಾತ್ರಿ 9 ಗಂಟೆಗೆ ದೇಶಾದ್ಯಂತ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರು ಮೇಣದ ಬತ್ತಿಯನ್ನು ಹಚ್ಚುವ ಮೂಲಕ ದೌರ್ಜನ್ಯವನ್ನು ಖಂಡಿಸಲಿದ್ದಾರೆ. ಇದು ದೇಶಕ್ಕೆ ‘ವೈಟ್‌ ಅಲರ್ಟ್‌’ ಎಂದು ಹೇಳಿದೆ.

    ‘ನಮ್ಮ ಮೇಲೆ ಎಷ್ಟೇ ಹಿಂಸಾಚಾರ ನಡೆಯುತ್ತಿದ್ದರೂ ಇಲ್ಲಿಯವರೆಗೆ ತಾಳ್ಮೆಯಿಂದ ವರ್ತಿಸಿದ್ದೇವೆ. ನಮ್ಮನ್ನು ಹೊಡೆದರು, ಬಡಿದರು, ನಮ್ಮ ಮೇಲೆ ಉಗುಳಿದರು, ತೀವ್ರವಾಗಿ ಹಲ್ಲೆ ನಡೆಸಿದರು. ಇದರ ಹೊರತಾಗಿಯೂ ನಾವು ತಾಳ್ಮೆ ಕಳೆದುಕೊಳ್ಳದೇ ಕೆಲಸ ಮಾಡಿದ್ದೇವೆ. ಕಳೆದ ವಾರ ಕರೊನಾ ವೈರಸ್‌ ಡ್ಯೂಟಿಯಲ್ಲಿದ್ದ ವೈದ್ಯರೊಬ್ಬರು ಮೃತಪಟ್ಟಾಗ ಆಂಧ್ರ ಪ್ರದೇಶದಲ್ಲಿ ಅವರ ಅಂತ್ಯಕ್ರಿಯೆಗೆ ಸ್ಥಳೀಯರು ಪ್ರತಿರೋಧ ಒಡ್ಡಿದರು. ನಂತರ ವಾಪಸ್‌ ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಬೇರೆ ಪ್ರದೇಶದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈಗ ಪ್ರತಿಭಟನೆ ಮಾಡುವ ಕಾಲ ಬಂದಿದೆ’ ಎಂದು ಸಂಘ ಹೇಳಿದೆ.

    ಈ ವಾರದ ಆರಂಭದಲ್ಲಿ ಫೆಡರೇಷನ್‌ ಆಫ್‌ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​‌’ ಕೂಡ ​ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದು, ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

    ಈ ನಡುವೆ ಕೇಂದ್ರ ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರ ಪುತ್ರಿ ಸೋನಾಲಿ ಜೇಟ್ಲಿ ಬಕ್ಷಿ ಅವರು ಟ್ವೀಟ್‌ ಮಾಡಿದ್ದು, ‘ಆರೋಗ್ಯ ಕಾರ್ಯಕರ್ತರ ರಕ್ಷಣೆಗೆ ಸೂಕ್ತ ಕಾನೂನಿನ ಅವಶ್ಯಕೆ ಇದೆ ಎಂದು ನಮ್ಮ ತಂದೆಯವರೇ ಹಿಂದೆ ಸೂಚಿಸಿದ್ದರು. ಈಗ ಆ ಕಾಲ ಬಂದಿದೆ’ ಎಂದಿದ್ದಾರೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts