More

    ಹೂಡಿಕೆದಾರರಿಗೆ ಸದ್ಯ ಸಿಗಲ್ಲ ಹಣ!: ತನಿಖಾ ಹಂತದಲ್ಲೇ ಸಾಗುತ್ತಿದೆ ಪ್ರಕರಣ, ಆಸ್ತಿ ಜಪ್ತಿ, ಹರಾಜು ಪ್ರಕ್ರಿಯೆ ವಿಳಂಬ

    ಬೆಂಗಳೂರು: ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡು ನೊಂದಿರುವ ಹೂಡಿಕೆದಾರರಿಗೆ ಸದ್ಯದ ಮಟ್ಟಿಗೆ ಪರಿಹಾರ ಸಿಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಪ್ರಕರಣ ದಾಖಲಾಗಿ ವರ್ಷ ಕಳೆದರೂ ಸಿಬಿಐ ತನಿಖಾ ಹಂತದಲ್ಲೇ ಇನ್ನೂ ಪ್ರಕರಣ ಕುಂಟುತ್ತಾ ಸಾಗಿದೆ. ಹೀಗಾಗಿ ತನಿಖೆ ಪೂರ್ಣಗೊಂಡು ಹೂಡಿಕೆದಾರರಿಗೆ ಹಣ ಹಿಂದಿರುಗಿಸುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವುದು ನಿಶ್ಚಿತವಾಗಿದೆ.

    ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಐಎಂಎ ಕಂಪನಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್, 1 ಲಕ್ಷ ಜನರಿಂದ 4 ಸಾವಿರ ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ತನಿಖೆ ಆರಂಭಿಸಿರುವ ಸಿಬಿಐ ಐಎಂಎ ಮಾಲೀಕ, ನಿರ್ದೇಶಕರು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಪೂರ್ಣಗೊಳಿಸಿ ಕೋರ್ಟ್​ಗೆ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದೆ.

    ಇತ್ತೀಚೆಗೆ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ, ಡಿವೈಎಸ್​ಪಿ ಇ.ಬಿ. ಶ್ರೀಧರ್, ಇನ್​ಸ್ಪೆಕ್ಟರ್ ಎಂ.ರಮೇಶ್, ಪಿಎಸ್​ಐ ಗೌರಿಶಂಕರ್ ಮತ್ತು ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜು ವಿರುದ್ಧ ಪ್ರತ್ಯೇಕ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ. ಜಾರಿ ನಿರ್ದೇಶನಾಲಯ ಸಹ ಪ್ರತ್ಯೇಕ ತನಿಖೆ ಕೈಗೊಂಡು ಆಸ್ತಿಜಪ್ತಿ ಮಾಡಿದೆ. ಅಕ್ರಮ ವಹಿವಾಟು ಆರೋಪದ ಮೇಲೆ ಕಂಪನಿ ಆಸ್ತಿ ವಶಕ್ಕೆ ಪಡೆಯಲು ಮುಂದಾಗಿದೆ.

    ಸವಲತ್ತು ಕೊಡದ ಸರ್ಕಾರ: ಐಎಂಎ ಮತ್ತು ಅಂಗ ಸಂಸ್ಥೆಗಳಿಗೆ ಸೇರಿದ 3 ಸಾವಿರ ಕೋಟಿ ರೂ. ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಇರಬೇಕೆಂದು ಅಂದಾಜಿಸಲಾಗಿದೆ. ಇದನ್ನು ಮುಟ್ಟುಗೋಲು ಹಾಕಿಕೊಳ್ಳಲು ರಚಿಸಿರುವ ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ ಸಿಬ್ಬಂದಿಗೆ ಸರ್ಕಾರ ವೇತನ ಪಾವತಿಸಿಲ್ಲ. ವಾಹನ ಸೇರಿ ಯಾವುದೇ ಮೂಲಸೌಕರ್ಯ ಒದಗಿಸಿಲ್ಲ. ಇದು ತನಿಖೆಗೆ ಹಿನ್ನಡೆ ತಂದಿದೆ. ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ ಅಡಿ ಸಂಸ್ಥೆಯ ಸ್ಥಿರ ಮತ್ತು ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಕ್ಷಮ ಪ್ರಾಧಿಕಾರ ರಚನೆಗೊಂಡಿತ್ತು. ಪ್ರಾಧಿಕಾರ 2019ರ ಸೆಪ್ಟಂಬರ್​ನಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಸಿಬ್ಬಂದಿ ನಿಯೋಜನೆಗೊಂಡಿದ್ದರು. ಸೂಕ್ತ ಸೌಲಭ್ಯಗಳನ್ನು ಕೊಡದ ಹಿನ್ನೆಲೆ ಜನವರಿ ಅಂತ್ಯಕ್ಕೆ 300 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಳ್ಳಲಷ್ಟೇ ಸಾಧ್ಯವಾಗಿದೆ.

    ಅಧಿಕಾರಿಗಳ ಕೃಪಾಕಟಾಕ್ಷ?: ಈ ಪ್ರಕರಣದಲ್ಲಿ ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ಪಾತ್ರ ಪ್ರಮುಖವಾಗಿದೆ. ಸಿಐಡಿಯ ಅಂದಿನ ಆರ್ಥಿಕ ಅಪರಾಧ ವಿಭಾಗದ ಐಜಿಪಿ ಆಗಿದ್ದ ಹೇಮಂತ್ ನಿಂಬಾಳ್ಕರ್ ಮತ್ತು ಡಿವೈಎಸ್​ಪಿ ಇ.ಬಿ.ಶ್ರೀಧರ್ ಸೇರಿಕೊಂಡು ಕಂಪನಿಗೆ ಕ್ಲೀನ್​ಚಿಟ್ ನೀಡಿದ್ದರು. ಬೆಂಗಳೂರು ನಗರ ಉತ್ತರ ವಿಭಾಗ ಉಪವಿಭಾಗಾಧಿಕಾರಿ ಆಗಿದ್ದ ಎಲ್.ಸಿ.ನಾಗರಾಜ ಕೂಡ ಸೂಕ್ತ ವಿಚಾರಣೆ ನಡೆಸದೆ ಕ್ಲೀನ್​ಚಿಟ್ ಕೊಟ್ಟಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್ಸ್​ಪೆಕ್ಟರ್ ರಮೇಶ್, ಎಸ್​ಐ ಗೌರಿಶಂಕರ್, ಮೇಲಾಧಿಕಾರಿಯಾಗಿದ್ದ ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿಗೆ ನೊಂದವರು, ಸಾಮಾಜಿಕ ಹೋರಾಟಗಾರರು, ತಹಸೀಲ್ದಾರ್, ಉಪ ತಹಸೀಲ್ದಾರ್ ಸೇರಿ ಹಲವರು ದೂರು ನೀಡಿದ್ದರೂ ಎಫ್​ಐಆರ್ ದಾಖಲಿಸಿಲ್ಲ. ಸ್ಥಳ, ದಾಖಲೆ ಪರಿಶೀಲಿಸದೆಯೇ ಐಎಂಎ ಸಂಬಂಧಿಸಿದ ಎಲ್ಲ ದೂರುಗಳನ್ನು ಮುಕ್ತಾಯಗೊಳಿಸಿದ್ದರು. ಈ ಎಲ್ಲ ಆರೋಪಗಳು ಸಿಬಿಐ ತನಿಖೆಯಲ್ಲಿ ಸಾಬೀತಾಗಿದೆ. ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇವರ ಆಸ್ತಿ ಜಪ್ತಿ ಮಾಡುವ ಸಾಧ್ಯತೆಗಳಿದೆ.

    ಗೋವಿಂದರಾಜು ಚಿನ್ನಕುರ್ಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts