More

    ಅಕ್ರಮ ಮಣ್ಣು ಗಣಿಗಾರಿಕೆ

    ಆರ್.ಬಿ.ಹಳ್ಳಿ ದಿವಾಕರ್ ಮಳವಳ್ಳಿ
    ತಾಲೂಕು ವ್ಯಾಪ್ತಿಯಲ್ಲಿ ‘ಗಣಿ ಮಾಫಿಯಾ’ ತಂಡ ಬರದಿಂದ ಕಂಗಾಲಾಗಿರುವ ರೈತರಿಗೆ ಹಣದ ಆಮಿಷವೊಡ್ಡಿ, ಬೆಳೆಗೆ ಯೋಗ್ಯವಾದ ಕಂದಾಯ ಭೂಮಿ ಸೇರಿದಂತೆ ಸರ್ಕಾರಿ ಜಾಗಗಳಲ್ಲೂ ಎಗ್ಗಿಲ್ಲದೆ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದರೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ.

    ತಾಲೂಕಿನಲ್ಲಿ 24 ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಭೂ ಕಬಳಿಕೆದಾರರಿಗೆ ಖಾತೆಯಾಗಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ, ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕನ ತಲೆಗೆ ಆರೋಪಗಳೆಲ್ಲವನ್ನು ಕಟ್ಟಿ ಆತನನ್ನು ಅಮಾನತು ಮಾಡುವುದರ ಜತೆಗೆ, ತನಿಖೆ ಹೆಸರಿನಲ್ಲಿ ತಾಲೂಕು ಆಡಳಿತ ಕೈ ತೊಳೆದುಕೊಂಡಿರುವುದು ಒಂದೆಡೆಯಾದರೆ, ನಿರಂತರವಾಗಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದರೂ ಕಂಡೂಕಾಣದಂತೆ ಜಾಣಕುರುಡುತನ ಪ್ರದರ್ಶಿಸುವ ಮೂಲಕ ಮಾಫಿಯಾವನ್ನು ಬೆಂಬಲಿಸುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪಗಳು ಕೇಳಿಬರುತ್ತಿವೆ.

    ನಿಯಮ ಬಾಹಿರವಾಗಿ ಗಣಿಗಾರಿಕೆ: ತಾಲೂಕಿನ ಬಿ.ಜಿ.ಪುರ ಹೋಬಳಿಯ ಹೊಸಹಳ್ಳಿ, ಕಗ್ಗಲೀಪುರ, ಹಳದಾಸನಹಳ್ಳಿ, ವಾಸುಹಳ್ಳಿ ಹಾಗೂ ಹಲಗೂರು ಹೋಬಳಿಯ ಮುತ್ತತ್ತಿ ರಸ್ತೆಯ ಭೂ ಪ್ರದೇಶದಲ್ಲಿ ಎರಡು ತಿಂಗಳಿನಿಂದಲೂ ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ಅನುಮತಿ ಪಡೆಯದೆ ಮಾಫಿಯಾ ಜಾಲವೊಂದು ನಿರಂತರವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿದೆ. ರಾತ್ರಿ ವೇಳೆ ಹತ್ತಾರು ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಮಣ್ಣು ತೆಗೆದು ನೂರಾರು ಲಾರಿಗಳ ಮೂಲಕ ಹೊರ ಜಿಲ್ಲೆಗಳಿಗೆ ಸಾಗಣೆ ಮಾಡಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ತಹಸೀಲ್ದಾರ್ ಗಮನಕ್ಕೆ ತಂದಾಗ, ಹಗಲಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಣ್ಣು ಸಾಗಣೆ ಮಾಡುತ್ತಿರುವವರ ವಿರುದ್ಧ ಕ್ರಮ ವಹಿಸುವುದಾಗಿ ಹೇಳಿ ಬಂದಿದ್ದಾರೆೆ. ಆದರೆ ಇದಕ್ಕೆ ಕ್ಯಾರೆ ಎನ್ನದ ಮಣ್ಣು ಮಾಫಿಯಾ ತಂಡ ರಾತ್ರಿಯಾಗುತ್ತಿದ್ದಂತೆ ಅಕ್ರಮವಾಗಿ ಮಣ್ಣು ಸಾಗಣೆ ಮಾಡುತ್ತಿದೆ.

    ಬರವನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು: ಕೃಷಿ ಭೂಮಿಯ ಮಣ್ಣು ಮಾರಾಟ ಮಾಡುವಂತಿಲ್ಲವೆಂಬ ನಿಯಮವಿದೆ. ಆದರೆ ಪ್ರಸ್ತುತ ವರ್ಷ ಎದುರಾಗಿರುವ ಬರಗಾಲದಿಂದ ಬೆಳೆಗೆ ನೀರಿಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ‘ಮಣ್ಣು ಮಾಫಿಯಾ’ಗಾರರು ರೈತರ ಮನವೊಲಿಸಿ ಎಕರೆಗೆ 20 ರಿಂದ 30 ಸಾವಿರ ರೂ. ನೀಡಿ ಜಮೀನುಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆದುಕೊಳ್ಳುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಹಾಗೂ ಕೃಷಿ ಮತ್ತು ಕಂದಾಯ ಇಲಾಖೆಗಳಿಂದ ಯಾವುದೇ ಅನುಮತಿ ಪಡೆಯದೆ ರಾತ್ರಿ ವೇಳೆ ನೂರಾರು ಲಾರಿಗಳಲ್ಲಿ ಮಣ್ಣು ಸಾಗಿಸುತ್ತಿದ್ದಾರೆ. ರೈತರಿಗೆ ಬಿಡಿಗಾಸು ನೀಡಿ ಕೊಳ್ಳೇಗಾಲ ಸೇರಿದಂತೆ ಇತರೆಡೆಗಳಲ್ಲಿ ನಡೆಯುವ ರಸ್ತೆ ಕಾಮಗಾರಿಗಳಿಗೆ ಒಂದು ಟಿಪ್ಪರ್ ಮಣ್ಣಿಗೆ 3 ರಿಂದ 4 ಸಾವಿರ ರೂ. ನಿಗದಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ದಿನವಹಿ ಹತ್ತಾರು ಇಟಾಚಿ, ಜೆಸಿಬಿಗಳಿಂದ ಮಣ್ಣು ತೆಗೆಸಿ ನೂರಾರು ಟಿಪ್ಪರ್‌ಗಳ ಮೂಲಕ ಮಣ್ಣು ಸಾಗಿಸುತ್ತಿದ್ದು, ಈ ಅಕ್ರಮ ವಹಿವಾಟಿನಿಂದ ಮಧ್ಯವರ್ತಿಗಳು ಲಕ್ಷಾಂತರ ರೂ. ಗಳಿಸುತ್ತಿದ್ದಾರೆ.

    ಸರ್ಕಾರಕ್ಕೆ ರಾಜಧನ ಖೋತಾ: ನಿಯಮದ ಪ್ರಕಾರ ಕೃಷಿಗೆ ಯೋಗ್ಯವಲ್ಲದ ಗುಡ್ಡ ಪ್ರದೇಶ ಹಾಗೂ ಸರ್ಕಾರಿ ಭೂಮಿಯಲ್ಲಿ ಮಣ್ಣು ತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಇಲಾಖೆ ನಿಗದಿಪಡಿಸುವ ರಾಯಲ್ಟಿ ಪಾವತಿಸಿ ಗಣಿಗಾರಿಕೆ ನಡೆಸಬೇಕು. ಆದರೆ ಇಲ್ಲಿ ಗಣಿಗಾರಿಕೆ ನಡೆಸುತ್ತಿರುವ ವ್ಯಕ್ತಿಗಳು ಪ್ರಭಾವಿಗಳ ಬೆಂಬಲದಿಂದ ರೈತರ ಕೃಷಿ ಭೂಮಿ ಜತೆಗೆ, ಇವುಗಳಿಗೆ ಹೊಂದಿಕೊಂಡಂತಿರುವ ಸರ್ಕಾರಿ ಭೂಮಿಗಳಲ್ಲೂ ಹತ್ತಾರು ಅಡಿ ಆಳದವರೆಗೂ ಮಣ್ಣು ಗಣಿಗಾರಿಕೆ ನಡೆಸುತ್ತಾ ಸರ್ಕಾರಕ್ಕೆ ಹೋಗಬೇಕಿದ್ದ ರಾಜಧನಕ್ಕೂ ಕತ್ತರಿ ಹಾಕುತ್ತಿದ್ದಾರೆ.

    ಹೊಸಹಳ್ಳಿ, ವಾಸುಹಳ್ಳಿ ಬೋರೆ, ಕಗ್ಗಲೀಪುರ, ಹಳದಾಸಹಳ್ಳಿ ಗ್ರಾಮಗಳ ರೈತರ ನೂರಾರು ಎಕರೆ ಜಮೀನುಗಳು ಹಾಗೂ ಸರ್ಕಾರಿ ಭೂಮಿಯಲ್ಲಿ ಸುಮಾರು 10 ಅಡಿಗಳವರೆಗೂ ಆಳಕ್ಕೆ ಮಣ್ಣು ಎತ್ತಿಸಲಾಗಿದೆ. ಹಣದಾಸೆಗೆ ತಮ್ಮ ಜಮೀನುಗಳಲ್ಲಿ ಮಣ್ಣು ಮಾರಾಟ ಮಾಡಿಕೊಂಡಿರುವ ರೈತರು ಮತ್ತೆ ಕೃಷಿಗೆ ಯೋಗ್ಯವಾಗುವಂತೆ ಜಮೀನನನ್ನು ಹದಗೊಳಿಸಿಕೊಳ್ಳಲು ಪಡೆದ ಹಣಕ್ಕಿಂತ ದುಪ್ಪಟ್ಟು ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
    ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಸರ್ಕಾರಕ್ಕೆ ವಂಚನೆ ಮಾಡುತ್ತಿರುವ ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮ ವಹಿಸುವರೇ ಎಂದು ಕಾದು ನೋಡಬೇಕಿದೆ.

    ಸೂಕ್ತ ಕಾನೂನು ಕ್ರಮ
    ಕಗ್ಗಲೀಪುರ ಸಮೀಪ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಮಣ್ಣು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ ಬಂದಿದ್ದೇನೆ. ಹೊಸಹಳ್ಳಿ ಮತ್ತು ಇತರೆಡೆಗಳಲ್ಲಿ ರಾತ್ರಿ ವೇಳೆ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಕೂಡಲೇ ಈ ಬಗ್ಗೆ ಒಂದು ತಂಡ ರಚನೆ ಮಾಡಿ, ಗಸ್ತು ನಡೆಸಿ ಅಕ್ರಮ ನಡೆಯುತ್ತಿದ್ದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
    ಲೋಕೇಶ್, ತಹಸೀಲ್ದಾರ್

    ಜಾಗೃತಿ ಮೂಡಿಸಲು ಕ್ರಮ
    ಕಂದಾಯ ಭೂಮಿಯಲ್ಲಿ ಕಾನೂನು ಬಾಹಿರವಾಗಿ ರೈತರು ಮಣ್ಣು ಮಾರಾಟ ಮಾಡುವಂತಿಲ್ಲ. ಬದಲಿಗೆ ಕೃಷಿ ಚಟುವಟಿಕೆಗೆ ಯೋಗ್ಯವಾಗುವಂತೆ ಸಮತಟ್ಟು ಮಾಡಿಸಿಕೊಳ್ಳಲು ಅವಕಾಶವಿದೆ. ಭೂಮಿಯ ಮೇಲ್ಪದರದ ಒಂದು ಅಡಿ ವರೆಗಿನ ಮಣ್ಣಿನಲ್ಲಿ ಫಲವತ್ತತೆ ಇರುತ್ತದೆ. ಆಳದವರೆಗೆ ಮಣ್ಣನ್ನು ತೆಗೆದು ಸ್ಥಳಾಂತರಿಸಿದ ಭೂಮಿಯಲ್ಲಿ ಯಾವುದೇ ಬೆಳೆಯೊಡ್ಡಿದ್ದರೂ ಫಸಲು ಫಲವತ್ತತೆ ಸಿಗುವುದಿಲ್ಲ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುವುದು.
    ದೀಪಕ್, ಸಹಾಯಕ ಕೃಷಿ ಅಧಿಕಾರಿ, ಮಳವಳ್ಳಿ

    ಕಡಿವಾಣ ಹಾಕದಿದ್ದರೆ ಹೋರಾಟ
    ಬರದಿಂದ ತತ್ತರಿಸಿರುವ ರೈತರಿಗೆ ಹಣದ ಆಮಿಷವೊಡ್ಡಿ ಜಮೀನುಗಳು ಹಾಗೂ ಸರ್ಕಾರಿ ಭೂಮಿಗಳಲ್ಲಿ ಹತ್ತಾರು ಅಡಿ ಆಳದವರೆಗೆ ಮಣ್ಣು ತೆಗೆದು ಅಕ್ರಮವಾಗಿ ರಾತ್ರಿ ವೇಳೆ ಹೊರ ಜಿಲ್ಲೆಗಳಿಗೆ ಸಾಗಣೆ ಮಾಡಲಾಗುತ್ತಿದೆ. ಈ ಮಣ್ಣು ಗಣಿಗಾರಿಕೆ ಮಾಫಿಯಾ ತಂಡದ ಹಿಂದೆ ಪ್ರಭಾವಿಗಳ ಕೈವಾಡವಿದೆ. ಬೆಳಕವಾಡಿ ಭಾಗದಲ್ಲಿ ನಿರಂತವಾಗಿ ಕಳೆದ ಎರಡು ತಿಂಗಳಿನಿಂದ ಮಣ್ಣು ಸಾಗಣೆ ನಡೆಯುತ್ತಿದ್ದರೂ ಪೊಲೀಸರಾಗಲಿ ಅಥವಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಕೂಡಲೇ ಈ ಅಕ್ರಮಕ್ಕೆ ಕಡಿವಾಣ ಹಾಕದಿದ್ದರೆ ಹೋರಾಟ ಮಾಡಲಾಗುವುದು.
    ಕಾಂತರಾಜು, ಅಂಬೇಡ್ಕರ್ ವಿಚಾರ ವೇದಿಕೆ ಕಾರ್ಯದರ್ಶಿ, ಬೆಳಕವಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts