More

    ಎಂ-ಸ್ಯಾಂಡ್‌ಗೆ ಅಕ್ರಮ ಅಡ್ಡಗಾಲು

    ಬೆಳಗಾವಿ: ಅಕ್ರಮ ಮರಳುದಂಧೆ ಮತ್ತು ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಜಿಲ್ಲೆಯಲ್ಲಿ ಎಂ-ಸ್ಯಾಂಡ್(ಉತ್ಪಾದಿತ ಮರಳು)ಕ್ಷೇತ್ರ ಸಂಪೂರ್ಣ ಕುಸಿದಿದ್ದು, ಸಾವಿರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

    ರಾಜ್ಯಾದಂತ್ಯ ನೈಸರ್ಗಿಕವಾಗಿ ಲಭ್ಯವಾಗುತ್ತಿದ್ದ ನದಿ, ಹಳ್ಳಗಳ ಮರಳಿನ ಅಭಾವ ತಪ್ಪಿಸುವ ಉದ್ದೇಶದಿಂದ ಸರ್ಕಾರವು ಎಂ-ಸ್ಯಾಂಡ್ ಘಟಕ ಆರಂಭಿಸಲು ಪರವಾನಗಿ ನೀಡಿದೆ. ಕಾಮಗಾರಿ ವೆಚ್ಚ ನಿಯಂತ್ರಣ, ಎಂ.ಸ್ಯಾಂಡ್ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರವು ತನ್ನ ಎಲ್ಲ ಕಾಮಗಾರಿಗಳಿಗೆ ಎಂ.ಸ್ಯಾಂಡ್ ಬಳಕೆ ಕಡ್ಡಾಯಗೊಳಿಸಿದೆ.
    ಆದರೆ, ಇದೀಗ ಸರ್ಕಾರವು ನದಿ ಮರಳು ತೆಗೆಯಲು ಗ್ರಾಪಂ ಮಟ್ಟದಲ್ಲಿ ಅವಕಾಶ ನೀಡಿರುವುದು, ಅಕ್ರಮ ಮರಳು ದಂಧೆ ನಿಯಂತ್ರಿಸದಿರುವುದು ಮತ್ತು ಕೋವಿಡ್-19
    ಎಫೆಕ್ಟ್‌ನಿಂದ ಎಂ-ಸ್ಯಾಂಡ್ ಬೇಡಿಕೆ ಶೇ.65 ಕುಸಿದಿದೆ. ಪರಿಣಾಮ ಜಿಲ್ಲೆಯ 48 ಎಂ-ಸ್ಯಾಂಡ್ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,200ಕ್ಕೂ ಅಧಿಕ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಘಟಕಗಳು ವಾರದಲ್ಲಿ ಎರಡು ದಿನ ಮಾತ್ರ ಕಾರ್ಯನಿರ್ವಹಿಸುತ್ತಿವೆ.

    ಕುಸಿತವಾದ ಬೇಡಿಕೆ ಜಿಲ್ಲೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ 48 ಎಂ.ಸ್ಯಾಂಡ್ ಘಟಕಗಳಿಂದ ವಾರ್ಷಿಕ 28- 35 ಲಕ್ಷ ಟನ್ ಎಂ-ಸ್ಯಾಂಡ್ ಉತ್ಪಾದನೆಯಾಗಿ, 800-1,500 ಟನ್‌ವರೆಗೆ ಮಾರಾಟವಾಗುತ್ತಿದೆ. 4-5 ತಿಂಗಳಿಂದ ಗುತ್ತಿಗೆ ದಾರರು, ಸಾರ್ವಜನಿಕರು ನದಿ ಮರಳು ಬಳಸುತ್ತಿರುವುದರಿಂದ ಎಂ-ಸ್ಯಾಂಡ್‌ಗೆ ಬೇಡಿಕೆ ಕುಸಿತಗೊಂಡಿದೆ. ಇದರಿಂದ ಘಟಕಗಳ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ರಾಮದುರ್ಗ, ಖಾನಾಪುರ ಮತ್ತು ಬೈಲಹೊಂಗಲ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರದ 10 ನದಿ ಮರಳು ಬ್ಲಾಕ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಖರೀದಿಗೆ ಹಿಂದೇಟು: ಸರ್ಕಾರದ ಕಾಮಗಾರಿಗಳಿಗೆ ಎಂ-ಸ್ಯಾಂಡ್ ಬಳಕೆ ಮಾಡಬೇಕು ಎಂದು ಸರ್ಕಾರವೇ ಸೂಚಿಸಿದೆ. ಅಲ್ಲದೇ, ಟೆಂಡರ್‌ಗೆ ಗುತ್ತಿಗೆದಾರರು ಅರ್ಜಿ ಸಲ್ಲಿಸುವಾಗ ಎಂ.ಸ್ಯಾಂಡ್ ಬಳಕೆಗೆ ಒಪ್ಪಿಗೆ ಸೂಚಿಸುವುದು ನಿಯಮ. ಆದರೆ, ಗುತ್ತಿಗೆದಾರರು ಎಂ-ಸ್ಯಾಂಡ್ ಖರೀದಿಸುತ್ತಿಲ್ಲವೆಂದು ಎಂ-
    ಸ್ಯಾಂಡ್ ಘಟಕಗಳ ಮಾಲೀಕರು ದೂರಿದ್ದಾರೆ.

    ಸರ್ಕಾರದ ಎಲ್ಲ ಕಾಮಗಾರಿಗಳಿಗೆ ಎಂ.ಸ್ಯಾಂಡ್ ಬಳಕೆ ಕಡ್ಡಾಯಗೊಳಿಸಿದೆ. ಜಿಲ್ಲೆಯಲ್ಲಿ ಸರ್ಕಾರದ ಕಾಮಗಾರಿಗಳಿಗೆ ಎಂ-ಸ್ಯಾಂಡ್ ಬಳಕೆ ಮಾಡದಿರುವ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು.
    | ಡಾ.ಎಸ್.ಬಿ.ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

    ಸರ್ಕಾರ ಗ್ರಾಪಂ ಮಟ್ಟದ ಪಟ್ಟಾ ಭೂಮಿಯಲ್ಲಿ ಮರಳು ತೆಗೆಯಲು ಅವಕಾಶ ನೀಡಿರುವುದು ಹಾಗೂ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಿರುವ ಹಿನ್ನೆಲೆಯಲ್ಲಿ ಎಂ-ಸ್ಯಾಂಡ್‌ಗೆ ಬೇಡಿಕೆ ಕುಸಿದಿದೆ. ಕಾರ್ಮಿಕರ ಸಂಬಳ, ವಿದ್ಯುತ್ ಬಿಲ್ ಸೇರಿ ಇನ್ನಿತರ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ.
    | ಪಾಂಡುರಂಗ ರೆಡ್ಡಿ ಎಂ-ಸ್ಯಾಂಡ್ ಘಟಕಗಳ ಸಂಘದ ಅಧ್ಯಕ್ಷ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts