More

    ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರಳು ದಂಧೆ

    ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕೆಲವು ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರಳು ದಂಧೆ ಹಾಗೂ ಸಾಗರ ತಾಲೂಕಿನ ಕೆಲವು ಅರಣ್ಯ ಭಾಗದಲ್ಲಿ ಜಂಬಿಟ್ಟಿಗೆ ಕ್ವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡಿಸಿಎಫ್ ಶಿವಶಂಕರ್ ಅವರಿಗೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೂಚಿಸಿದರು.

    ಬುಧವಾರ ಮರಳು ಉಸ್ತುವಾರಿ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿ, ತೀರ್ಥಹಳ್ಳಿ ತಾಲೂಕಿನ ಮಹಿಷಿ ಮತ್ತು ಮಂಡಗದ್ದೆ ಸೇರಿದಂತೆ ಹಲವು ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿದೆ. ಹೀಗಾಗಿ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದರು.
    ಸಾಗರ ತಾಲೂಕಿನ ಅಕ್ರಮವಾಗಿ ಜಂಬಿಟ್ಟಿಗೆ ಕ್ವಾರಿಗಳನ್ನು ನಡೆಸುತ್ತಿರುವ ಬಗ್ಗೆ ದೂರುಗಳಿವೆ. ಇಂತಹ ಕ್ವಾರಿಗಳನ್ನು ನಡೆಸುವವರ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಹೊಸನಗರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಸರ್ಕಾರಿ, ಕಂದಾಯ, ಅರಣ್ಯ, ಗ್ರಾಪಂ ಹಾಗೂ ಕೆಪಿಸಿಎಲ್ ಪ್ರದೇಶಗಳಲ್ಲಿ ಅನಧಿಕೃತ ಮರಳು ಗಣಿಗಾರಿಕೆ, ಸಾಗಣೆ ಹಾಗೂ ದಾಸ್ತಾನು ಮಾಡಿರುವ ಬಗ್ಗೆ ದೂರುಗಳಿವೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಇಷ್ಟೆಲ್ಲ ಬೆಳವಣಿಗೆ ಬಳಿಕವೂ ಅಕ್ರಮ ಸಂಪೂರ್ಣ ನಿಯಂತ್ರಣಕ್ಕೆ ಬಂದಂತಿಲ್ಲ ಎಂದರು.
    ಮತ್ತೂರು ಗ್ರಾಮದ ಸರ್ವೇ ನಂ.6ರಲ್ಲಿ ಕಲ್ಲು ಗಣಿ ಗುತ್ತಿಗೆ ನೀಡುವಂತೆ ಸಾರ್ವಜನಿಕರ ಅರ್ಜಿಗೆ ಸಂಬಂಧಿಸಿದಂತೆ ಗ್ರಾಪಂನಿಂದ ವರದಿ ಪಡೆಯಲಾಗುವುದು. ನಿಯಮ ಉಲ್ಲಂಘನೆಯಾಗಿದ್ದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕ್ರಮ ಜರುಗಿಸಬೇಕೆಂದು ಹಿರಿಯ ವಿಜ್ಞಾನಿ ವಿಂಧ್ಯಾ ಅವರಿಗೆ ಸೂಚಿಸಿದರು. ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯ ನಾಲ್ಕು ಕಲ್ಲು ಗಣಿಗಾರಿಕೆ ಕ್ವಾರಿಗಳ ಪೈಕಿ ಮೂರಕ್ಕೆ ಅನುಮತಿ ನೀಡಲಾಗಿದೆ. ಉಳಿದ ಒಂದು ಘಟಕಕ್ಕೆ ಷರತ್ತಿಗೆ ಒಳಪಟ್ಟಂತೆ ಡಿಸಿ ನೇತೃತ್ವದ ಸಭೆಯಲ್ಲಿ ಅನುಮತಿ ನೀಡಲಾಯಿತು. ಸಂಘ ಸಂಸ್ಥೆಗಳಿಗೆ ನೀಡಲು ಕಾಯ್ದಿರಿಸಿರುವ ಒಂದು ಘಟಕದ ಬಗ್ಗೆ ಸರ್ಕಾರದ ಆದೇಶ ಕೈ ಸೇರಿದ ಬಳಿಕ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
    ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಆರ್‌ಟಿಒ ಶಂಕರಪ್ಪ, ಶಿವಮೊಗ್ಗ ಉಪವಿಭಾಗಾಧಿಕಾರಿ ರವಿಚಂದ್ರನಾಯ್ಕ, ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಮುಂತಾದವರು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts