More

    ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ

    ಮಂಗಳೂರು: ಕರಾವಳಿ ನಿಯಂತ್ರಣ ವಲಯ (ಸಿಆರ್‌ಜಡ್) ಪ್ರದೇಶದಲ್ಲಿ ಮರಳು ದಿಬ್ಬಗಳ ತೆರವು ಹಾಗೂ ಲೋಡಿಂಗ್ ಮಾನವ ಶ್ರಮದಿಂದಲೇ ನಿರ್ವಹಿಸಬೇಕು. ಯಂತ್ರೋಪಕರಣ ಬಳಸಿದರೆ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಎಚ್ಚರಿಸಿದರು.

    ಶುಕ್ರವಾರ ಗಣಿಗಾರಿಕೆ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿದ ಅವರು, ದಕ್ಕೆಯನ್ನು ಹೊರತುಪಡಿಸಿ ಬೇರೆ ಕಡೆ ಮರಳು ಶೇಖರಣೆ ಮಾಡಬಾರದು. ಇರುವೈಲು ಹಾಗೂ ಅತಿಕಾರಿಬೆಟ್ಟು ಪ್ರದೇಶದಲ್ಲಿ ಅತಿ ಹೆಚ್ಚು ಅಕ್ರಮ ಮರಳು ಸಾಗಾಟದ ದೂರುಗಳು ಬರುತ್ತಿದ್ದು, ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾಗುವುದು ಎಂದರು.

    ಮರಳನ್ನು ಜಿಲ್ಲೆಯ ಜನರಿಗೆ ಹಾಗೂ ಸರ್ಕಾರಿ ಮತ್ತು ಇತರೆ ಕಾಮಗಾರಿಗಳಿಗೆ ನಿರ್ದಿಷ್ಟ ಬೆಲೆಯಲ್ಲಿ ಪೂರೈಸುವ ಸಲುವಾಗಿ ಮರಳು ದಕ್ಕೆ ಪ್ರದೇಶದಲ್ಲಿ 1 ಲೋಡ್ ಮರಳಿಗೆ 5,000 ರೂ, ದಕ್ಕೆ ಪ್ರದೇಶದಿಂದ 20 ಕಿ.ಮೀ. ವ್ಯಾಪ್ತಿಯೊಳಗೆ 1 ಲೋಡ್ ಮರಳು ಸಾಗಾಟಕ್ಕೆ 2,000 ರೂ, ಹಾಗೂ ಮರಳು ದಕ್ಕೆ ಪ್ರದೇಶದಿಂದ 20 ಕಿ.ಮೀ. ವ್ಯಾಪ್ತಿಯ ನಂತರ 1 ಲೋಡ್ ಮರಳು ಸಾಗಾಟಕ್ಕೆ ಪ್ರತಿ ಕಿ.ಮೀ.ಗೆ 50 ರೂ.ನಂತೆ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಮರಳು ಪಡೆಯಬಹುದು ಎಂದರು.

    ಮರಳು ದಕ್ಕೆಯಲ್ಲಿ ಸಿಸಿಟಿವಿ ಕಡ್ಡಾಯ: ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಳೀಯ ಬಳಕೆಗೆ ಮಾತ್ರ ಮರಳು ಮಾರಾಟ ಮಾಡಬಹುದಾಗಿದ್ದು, ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ. ಸರ್ಕಾರಿ ಕಾಮಗಾರಿಗಳಿಗೆ ಶೇ.20ರಷ್ಟು ಮರಳನ್ನು ಸರ್ಕಾರದ ದರದಲ್ಲಿ ನೀಡಬೇಕು. ದಕ್ಕೆಯಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿ ಸಂಪರ್ಕವನ್ನು ಜಿಲ್ಲಾಡಳಿತಕ್ಕೆ ನೀಡಬೇಕೆಂದು ಪರವಾನಗಿದಾರರಿಗೆ ಸೂಚಿಸಿದರು.

    ಪರವಾನಗಿದಾರರು ಅನಧಿಕೃತವಾಗಿ ಮರಳು ತೆಗೆಯುವುದು ಮತ್ತು ಸಾಗಾಟಕ್ಕೆ ಅವಕಾಶ ನೀಡಿದಲ್ಲಿ ಅವರ ಪರವಾನಗಿ ತಾತ್ಕಾಲಿಕವಾಗಿ ರದ್ದುಪಡಿಸಲಾಗುವುದು. ಮರಳು ಬುಕಿಂಗ್ ಮಾಡಿದ 48 ಗಂಟೆಗಳೊಳಗೆ ಮರಳನ್ನು ಗ್ರಾಹಕರಿಗೆ ತಲುಪಿಸಬೇಕು. 48 ಗಂಟೆಗಳಲ್ಲಿ ಗ್ರಾಹಕರಿಗೆ ತಲುಪದೆ ಇದ್ದರೆ ಹಾಗೂ ಮೂರು ಬಾರಿ ಜಿಪಿಎಸ್ ನಿಯಮ ಉಲ್ಲಂಘಿಸಿದರೆ ಒಂದನೇ ಬಾರಿ 25 ಸಾವಿರ ರೂ. ದಂಡ, ಎರಡನೇ ಬಾರಿ 50 ಸಾವಿರ ರೂ. ಹಾಗೂ ಮೂರನೇ ಬಾರಿ ನಿಯಮ ಉಲ್ಲಂಘನೆಯಾದರೆ ತಾತ್ಕಾಲಿಕ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.

    ಸಾಗಾಟ ವಾಹನಗಳಿಗೆ ಜಿಪಿಎಸ್: ಮರಳು ತೆಗೆಯಲು ಮತ್ತು ಸಾಗಾಟ ಮಾಡಲು ಬೆಳಗ್ಗೆ 6ರಿಂದ ಸಾಯಂಕಾಲ 6ರವರೆಗೆ ಮಾತ್ರ ಅವಕಾಶವಿರುತ್ತದೆ. ಈ ಅವಧಿ ಮೀರಿ ಮರಳು ಸಾಗಾಟ ಮಾಡಿದ್ದಲ್ಲಿ ಅಕ್ರಮ ಮರಳು ಸಾಗಾಟವೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಡಿಸಿ ಹೇಳಿದರು. ಮರಳು ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿ, ವಾಹನದ ಮುಂಭಾಗ ಮತ್ತು ಹಿಂಬದಿಯಲ್ಲಿ ಮರಳು ಸಾಗಾಣಿಕೆ ವಾಹನ ಎಂದು ಆರ್‌ಟಿಒ ಇಲಾಖೆಯಿಂದ ನೋಂದಾಯಿಸಿ ನಮೂದಿಸಬೇಕು. ಮರಳು ದಿಬ್ಬಗಳನ್ನು ತೆರವುಗೊಳಿಸಲು ಗರಿಷ್ಠ ಮೂರು ದೋಣಿಗಳನ್ನು ಬಳಸಲು ಅವಕಾಶವಿದೆ. ಇವುಗಳ ನೋಂದಣಿಯನ್ನು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಅಥವಾ ಮೀನುಗಾರಿಕಾ ಇಲಾಖೆಯಲ್ಲಿ 7 ದಿನಗಳ ಒಳಗಾಗಿ ನೋಂದಣಿ ಮಾಡಿಸಿ ಜಿಪಿಎಸ್ ಅಳವಡಿಸಬೇಕು ಎಂದರು.

    ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಡಿಸಿಪಿ ವಿನಯ ಗಾಂವ್‌ಕರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ನಿರಂಜನ್ ಎ.ಎಂ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts