More

    ಅಕ್ರಮ ಕಟ್ಟಡ ಮಾಲೀಕರಿಗೆ ನೋಟಿಸ್

    ಬೈಂದೂರು: ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಬೈಂದೂರಿನ ಅಭಿವೃದ್ಧಿ ಬಗ್ಗೆ ಕಳೆದ ವಾರ ಕೊಲ್ಲೂರಿನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ವಿಜಯವಾಣಿ ವರದಿ ಗಮನಿಸಿದ ಸಂಸದ ಬಿ.ವೈ.ರಾಘವೇಂದ್ರ, ಕೆಲವು ಇಲಾಖೆಗಳ ಅಧಿಕಾರಿಗಳನ್ನು ನಿದ್ರೆಯಿಂದ ಎಚ್ಚರಿಸಿ ಕೆಲವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಭೆಯಲ್ಲಿದ್ದ ಹೆದ್ದಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕ್ಷೇತ್ರದ ಕುಂದುಕೊರತೆಗಳ ಶೀಘ್ರ ವಿಲೇವಾರಿಗೆ ಸಲಹೆ, ಸೂಚನೆ ಜತೆಗೆ ಕಾಲಾವಕಾಶವನ್ನೂ ನೀಡಿದ್ದಾರೆ. ಇದರ ಹಿನ್ನೆಲೆಯಲ್ಲಿ ಬೈಂದೂರಿನ ಹೃದಯ ಭಾಗ ಹಾಗೂ ಹೆದ್ದಾರಿಯ ಎರಡೂ ಕಡೆ ನಿಯಮ ಬಾಹಿರವಾಗಿ ನಿರ್ಮಿಸುತ್ತಿರುವ ಕಟ್ಟಡ ಮಾಲೀಕರಿಗೆ ಪಟ್ಟಣ ಪಂಚಾಯಿತಿ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಕಾನೂನು ಬಾಹಿರ ಬಹುಮಹಡಿ ಕಟ್ಟಡದ ಅನುಮತಿ ತಾತ್ಕಾಲಿಕವಾಗಿ ಹಿಂಪಡೆಯುವ ಮೂಲಕ ಬಿಸಿ ಮುಟ್ಟಿಸಿದೆ.

    ಬೈಂದೂರು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೂಲಂಕಶ ತನಿಖೆ ನಡೆಸಿದಾಗ ಒಂದು ವಾಣಿಜ್ಯ ಉದ್ದೇಶದ ಕಟ್ಟಡ ಇಂತಿಷ್ಟು ವಿಸ್ತಿರ್ಣ ರಚನೆಗೆ ಅನುಮತಿ ಪಡೆದಿತ್ತು. ಆದರೆ ಪ್ರಸ್ತುತ ಅದೇ ಜಾಗದಲ್ಲಿ ಅನುಮತಿ ಪಡೆದುದಕ್ಕಿಂತ ಮೂರು ಪಟ್ಟು ಹೆಚ್ಚು ವಿಸ್ತಿರ್ಣದ ಕಟ್ಟಡ ನಿರ್ಮಾಣವಾಗುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು ಹೆದ್ದಾರಿಯಿಂದ ಕೇವಲ 30 ಮೀ. ಅಂತರ ಹೊಂದಿರುವ, ಸೆಟ್‌ಬ್ಯಾಕ್ ಹಾಗೂ ಇತರ ನಿಯಮ ಪಾಲಿಸದ ವಾಣಿಜ್ಯ ಸಂಕೀರ್ಣದ ಪರವಾನಗಿ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಈ ಕುರಿತು ಓರ್ವ ಕಟ್ಟಡ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಏಪ್ರಿಲ್ 14ರಂದು ವಿಚಾರಣೆ ನಿಗದಿಯಾಗಿದೆ. ಆದರೆ ಜನರ ಅನುಕೂಲ ದೃಷ್ಟಿಯಿಂದ ಶೀಘ್ರ ವಿಚಾರಣೆ ನಡೆಸಬೇಕೆಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

    ಈಗಾಗಲೇ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನಧಿಕೃತ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಶೀಘ್ರ ಇದರ ಇತ್ಯರ್ಥವಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    ನವೀನ್, ಮುಖ್ಯಾಧಿಕಾರಿ ಬೈಂದೂರು ಪಟ್ಟಣ ಪಂಚಾಯಿತಿ

    ಗ್ರಾಮೀಣ ಭಾಗದಲ್ಲಿ ಸಣ್ಣ ಬೀಡಾ ಅಂಗಡಿ ಮಾಡಲೂ ನೂರಾರು ಕಾನೂನು ಹೇಳುವ ಇಲಾಖೆಗಳು ಬೈಂದೂರಿನಲ್ಲಿ ಹಾಗೂ ಉಪ್ಪುಂದದಲ್ಲಿ ನಿಯಮ ಬಾಹಿರವಾಗಿ ಹತ್ತಾರು ಕಟ್ಟಡ ನಿರ್ಮಾಣವಾದರೂ ಮೌನವಾಗಿವೆ. ಸಂಬಂಧಿಸಿದ ಇಲಾಖೆಗಳೂ ಕೈಕಟ್ಟಿ ಕುಳಿತಿವೆ.
    ಕೃಷ್ಣ ಉಪ್ಪುಂದ ನಿವಾಸಿ

    ನಗರ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಕಟ್ಟಡ ನಿರ್ಮಾಣಕ್ಕೆ 6 ಮೀಟರ್ ಸೆಟ್‌ಬ್ಯಾಕ್ ಕಡ್ಡಾಯ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಯಮ ಮೀರಿ ಕಟ್ಟಡ ನಿರ್ಮಾಣ ಮಾಡಿದಲ್ಲಿ ಹೆದ್ದಾರಿ ಪ್ರಾಧಿಕಾರ ಮೂಲಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
    ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts