More

    ಐಸಿಸಿ ಸಭೆ ಆಲಮಟ್ಟಿಯಲ್ಲಿ ನಡೆಸುವಂತೆ ಒತ್ತಾಯ

    ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯನ್ನು ನ.18ರಂದು ಆಲಮಟ್ಟಿಯಲ್ಲಿ ನಡೆಸಲು ಉದ್ದೇಶಿಸಿದ ಸಭೆಯನ್ನು ಮುಂದೂಡಿ ಬೆಂಗಳೂರಿನ ವಿಕಾಸ ಸೌಧದಲ್ಲಿ ನ.23ರಂದು ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ಇದು ಸಂಪೂರ್ಣ ರೈತ ವಿರೋಧಿ ಆಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಖಂಡಿಸಿದರು.

    ಈ ಕುರಿತು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ನ.18 ರಂದು ಆಲಮಟ್ಟಿಯಲ್ಲಿ ಐಸಿಸಿ ಸಭೆ ನಡೆಸಲು ತೀರ್ಮಾನ ಕೈಕೊಂಡು ಆಲಮಟ್ಟಿ ಸಭೆಯನ್ನು ರದ್ದು ಪಡಿಸಿ ಬೆಂಗಳೂರಿಗೆ ಸ್ಥಳಾಂತರಿಸಿರುವ ಉದ್ದೇಶವಾದರೂ ಏನೆಂದು ಸರ್ಕಾರ ತಿಳಿಸಬೇಕು. ರೈತರನ್ನು ಹಾಗೂ ಹೋರಾಟಗಾರರನ್ನು ಹೊರಗಿಟ್ಟು, ಯಾವ ಪುರುಷಾರ್ಥಕ್ಕೆ ಬೆಂಗಳೂರಿನಲ್ಲಿ ಸಭೆ ಕೈಕೊಳ್ಳಲು ತೀರ್ಮಾನಿಸಲಾಗಿದೆ. ಆಲಮಟ್ಟಿಯಲ್ಲಿ ಸಭೆ ನಡೆಸುವುದರಿಂದ ರೈತ ಸಂಘಟನೆಗಾರರು ಹೋರಾಟ ಮಾಡುತ್ತಾರೆ ಎನ್ನುವ ಭಯ ಸರ್ಕಾರಕ್ಕೆ ಕಾಡುತ್ತಿದೆಯೇ? ಈ ಹಿಂದೆಯೂ ನಾಲ್ಕೈದು ಬಾರಿ ಬೆಂಗಳೂರಿನಲ್ಲಿ ಐಸಿಸಿ ಸಭೆ ನಡೆಸಲಾಗಿದೆ. ಲಾಲ್‌ಬಹಾದುರ್ ಶಾಸಿ ಆಣೆಕಟ್ಟು ಇರುವುದು ಆಲಮಟ್ಟಿಯಲ್ಲಿ, ಅದಕ್ಕೆ ಸಂಬಂಧಿಸಿದ ಕಚೇರಿಗಳು ಇರುವುದು ಆಲಮಟ್ಟಿಯಲ್ಲಿ, ಆದರೆ ಸಭೆ ಮಾತ್ರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳುತ್ತಿರುವುದು ರೈತರನ್ನು ದಾರಿ ತಪ್ಪಿಸುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ನಡೆಯಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು, ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ ಐಸಿಸಿ ಸಭೆಯನ್ನು ತಕ್ಷಣ ರದ್ದುಪಡಿಸಿ ಆಲಮಟ್ಟಿಯಲ್ಲಿಯೇ ಹಮ್ಮಿಕೊಳ್ಳಬೇಕೆಂದು ಒತ್ತಾಯಿಸಿದರು.

    ರೈತ ಮುಖಂಡರಾದ ಸಂಗಮೇಶ ಸಗರ, ಕಲ್ಲಪ್ಪಣ್ಣ ಪಾರಶೆಟ್ಟಿ, ರಾಮನಗೌಡ ಪಾಟೀಲ, ಬಾಲಪ್ಪಗೌಡ ಲಿಂಗದಳ್ಳಿ, ಶರಣಗೌಡ ಬಿರಾದಾರ, ಸಂಗಪ್ಪ ಮುಂಡಗನೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts