More

    ಕ್ರಿಕೆಟ್‌ನಿಂದ ದೂರವುಳಿದರು ಟೆಸ್ಟ್ ರ‍್ಯಾಂಕಿಂಗ್ ನಂ.1 ಸ್ಥಾನ

    ದುಬೈ: ಟೀಮ್ ಇಂಡಿಯಾ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶ್ವ ಟೆಸ್ಟ್ ಬೌಲರ್‌ಗಳ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಬ್ಯಾಟರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಅವರನ್ನು ಹಿಂದಿಕ್ಕುವ ಮೂಲಕ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅಗ್ರಸ್ಥಾನಕ್ಕೇರಿದ್ದಾರೆ.

    ಐಸಿಸಿ ಬುಧವಾರ ಬಿಡುಗಡೆ ಮಾಡಿದ ನೂತನ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಶ್ವಿನ್ 860 ರೇಟಿಂಗ್ ಪಾಯಿಂಟ್ ಹೊಂದಿದ್ದು, ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ (826) ಒಂದು ಸ್ಥಾನ ಬಡ್ತಿ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಆಲ್ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ (434) ಅಗ್ರಸ್ಥಾನ ಹಾಗೂ ಅಶ್ವಿನ್ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.

    ಕಳೆದ ವಾರ ಐಸಿಸಿ ಬಿಡುಗಡೆ ಮಾಡಿದ್ದ ಟೆಸ್ಟ್ ಬ್ಯಾಟರ್‌ಗಳ ರ‌್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಹಿಂದಿಕ್ಕಿ, ಮೊದಲ ಸ್ಥಾನ ಅಲಂಕರಿಸಿದ್ದ ಜೋ ರೂಟ್ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ ಅಚ್ಚರಿ ಎಂಬಂತೆ ಗಾಯದ ಸಮಸ್ಯೆಯಿಂದ ಕಳೆದ ಮೂರು ತಿಂಗಳಿನಿಂದ ಸ್ಫರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿರುವ ಕಿವೀಸ್‌ನ ಕೇನ್ ವಿಲಿಯಮ್ಸನ್ (883) ಮೊದಲ ಸ್ಥಾನಕ್ಕೇರಿದ್ದಾರೆ. ಆಸೀಸ್‌ನ ಸ್ಟೀವನ್ ಸ್ಮಿತ್ ಒಂದು ಅಂಕದಿಂದ ಅಗ್ರ ಸ್ಥಾನದಿಂದ ವಂಚಿತರಾಗಿದ್ದಾರೆ.

    ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸ್ಮಿತ್‌ಗೆ ಅಗ್ರಸ್ಥಾನಕ್ಕೇರಲು ಗುರುವಾರ ಆರಂಭವಾಗಲಿರುವ ಮೂರನೇ ಟೆಸ್ಟ್ ಉತ್ತಮ ಅವಕಾಶ ಎನಿಸಿದೆ. ಮಾರ್ನಸ್ ಲಬುಶೇನ್ (873) ಮೂರನೇ ಸ್ಥಾನದಲ್ಲಿದ್ದಾರೆ. 2021ರಲ್ಲಿ ಸ್ಮಿತ್ ಅವರನ್ನು ಹಿಂದಿಕ್ಕಿದ ವಿಲಿಯಮ್ಸನ್ ಕೊನೆಯದಾಗಿ ಟೆಸ್ಟ್ ನಂ.1 ಬ್ಯಾಟರ್ ಎನಿಸಿದ್ದರು. ಇನ್ನೂ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅಗ್ರ-10ರಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಬ್ಯಾಟರ್ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts