More

    ಐಎಎಸ್ vs ಐಪಿಎಸ್: ರಾಜ್ಯದಲ್ಲಿ ಅಧಿಕಾರಿಗಳ ನಡುವೆ ‘ಬಡ್ತಿ’ ಕಿಡಿ

    ಬೆಂಗಳೂರು: ರಾಜ್ಯದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ನಡುವೆ ಒಂದಿಲ್ಲೊಂದು ವಿಚಾರಕ್ಕೆ ಶೀತಲ ಸಮರ ನಡೆಯುತ್ತಲೇ ಇದೆ. ಆದರೀಗ ಈ ಸಮರಕ್ಕೆ ‘ಬಡ್ತಿ’ ಕಿಡಿ ಸೇರಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

    ಐಎಎಸ್​ನಲ್ಲಿ ಅಗತ್ಯಕ್ಕಿಂತ ಹೆಚ್ಚು ಎಸಿಎಸ್ ಹುದ್ದೆಗೆ ಬಡ್ತಿ ನೀಡಲಾಗುತ್ತಿದ್ದು, ಐಪಿಎಸ್​ನಲ್ಲಿ ಹಿರಿತನ, ಹುದ್ದೆ ಇದ್ದರೂ ಬಡ್ತಿ ಸಿಗುತ್ತಿಲ್ಲ ಎಂಬ ಅಸಮಾಧಾನ ರಾಜ್ಯ ಸರ್ಕಾರದ ವಿರುದ್ಧ ಸ್ಪೋಟಗೊಂಡಿದೆ.

    ಕೇಂದ್ರ ಸರ್ಕಾರ ಮಾರ್ಗಸೂಚಿಯಂತೆ ರಾಜ್ಯದಲ್ಲಿ 1 ಹುದ್ದೆ ಮುಖ್ಯಕಾರ್ಯದರ್ಶಿ (ಸಿಎಸ್) ಮತ್ತು 8 ಹುದ್ದೆ ಅಪರ ಮುಖ್ಯಕಾರ್ಯದರ್ಶಿ(ಎಸಿಎಸ್) ಸೃಷ್ಟಿಸಿ ಸೇವಾ ಹಿರಿತನದ ಮೇಲೆ ಹಿರಿಯ ಐಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಬೇಕು. ಇದೇ ರೀತಿ ಐಪಿಎಸ್​ನಲ್ಲಿ 1 ಡಿಜಿ-ಐಜಿಪಿ ಮತ್ತು 3 ಡಿಜಿಪಿ ಹುದ್ದೆಗೆ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಬೇಕು. ಆದರೆ, ಈ ನಿಯಮ ಐಎಎಸ್ ಹುದ್ದೆಗೆ ಮಾತ್ರ ಸೀಮಿತಗೊಳಿಸಿ ಐಎಎಸ್ ಅಧಿಕಾರಿಗಳಿಗೆ ಎಸಿಎಸ್ ಹುದ್ದೆಗೆ ಬಡ್ತಿ ನೀಡುತ್ತಿರುವುದು ಐಪಿಎಸ್ ಶ್ರೇಣಿಯಲ್ಲಿ ಇರá-ವವರಿಗೆ ಅಸಮಾಧಾನ ಮೂಡಿಸಿದೆ.

    ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಐಎಎಸ್ ಅಧಿಕಾರಿಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಪ್ರಸ್ತುತ 21 ಎಸಿಎಸ್ ಅಧಿಕಾರಿಗಳಿದ್ದಾರೆ. ಇವರಿಗಿಂತ ಸೇವಾ ಹಿರಿತನದಲ್ಲಿ ಇರುವ 6 ಹಿರಿಯ ಐಎಎಸ್ ಅಧಿಕಾರಿಗಳು ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರಾಜ್ಯ ಸರ್ಕಾರದ ಸೇವೆಗೆ ಬಂದರೆ ಅವರಿಗೂ ಎಸಿಎಸ್ ಹುದ್ದೆಗೆ ಬಡ್ತಿ ನೀಡಬೇಕಾಗುತ್ತದೆ. ಅಲ್ಲಿಗೆ 27 ಎಸಿಎಸ್ ಹುದ್ದೆ ಸೃಷ್ಟಿಸಬೇಕಾಗಿದೆ.

    ಐಪಿಎಸ್​ನಲ್ಲಿ ಡಿಜಿ-ಐಜಿಪಿ ಸೇರಿ 6 ಅಧಿಕಾರಿಗಳಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. 2019ರ ಮೇನಲ್ಲಿ ಡಿಜಿಪಿ ಎಚ್.ಸಿ. ಕಿಶೋರ್​ಚಂದ್ರ ನಿವೃತ್ತಿ ಬಳಿಕ 1987 ಬ್ಯಾಚ್​ನ ಐಪಿಎಸ್ ಅಧಿಕಾರಿ ರಾಘವೇಂದ್ರ ಎಚ್. ಔರಾದ್ಕರ್ ಅವರಿಗೆ ಡಿಜಿಪಿಯಾಗಿ ಬಡ್ತಿ ನೀಡಲಾಗಿದೆ. ಇದಕ್ಕೂ ಮೊದಲು 1986ನೇ ಬ್ಯಾಚ್​ನ ಪ್ರವೀಣ್ ಸೂದ್, ಪದಮ್ ಕುಮಾರ್ ಗರ್ಗ್ ಅವರಿಗೆ ಬಡ್ತಿ ಲಭಿಸಿತ್ತು. ಐಎಎಸ್​ನಲ್ಲಿ 1989 ಬ್ಯಾಚ್ ಐಎಎಸ್ ಅಧಿಕಾರಿಗಳಾದ ರಾಕೇಶ್ ಸಿಂಗ್, ಡಾ. ಶಾಲಿನಿ ರಜನೀಶ್ ಮತ್ತು ಜಾವೇದ್ ಅಖ್ತರ್​ಗೆ ಎಸಿಎಸ್ ಆಗಿ ಬಡ್ತಿ ನೀಡಿ ಜ.8ರಂದು ಸರ್ಕಾರ ಆದೇಶಿಸಿದೆ. ಇವರಿಗೆ ಹೋಲಿಸಿದರೆ ಐಪಿಎಸ್​ನಲ್ಲಿ 1987ನೇ ಬ್ಯಾಚ್​ನ ಮೂವರು, 1989 ಬ್ಯಾಚ್​ನ ಐವರು ಎಡಿಜಿಪಿ ಆಗಿಯೇ ಉಳಿದಿದ್ದಾರೆ.

    ಐಎಎಸ್ ಅಧಿಕಾರಿಗಳ ಲಾಬಿ: ಮುಖ್ಯಮಂತ್ರಿ ಮತ್ತು ಸಚಿವರಿಗೆ ಸದಾಕಾಲ ಹತ್ತಿರದಲ್ಲಿರುವುದು ಐಎಎಸ್ ಅಧಿಕಾರಿಗಳು. ಪ್ರತಿ ಯೋಜನೆ ಮತ್ತು ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವಾಗ ಅವರ ಪಾತ್ರ ಪ್ರಮುಖ. ಐಪಿಎಸ್ ಅಧಿಕಾರಿಗಳದ್ದು ಸಿಎಂ ಮತ್ತು ಸಚಿವರಿಗೆ ವರದಿ ಒಪ್ಪಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ. ಹಾಗಾಗಿ ಐಪಿಎಸ್ ಅಧಿಕಾರಿಗಳು ಬಡ್ತಿಗಾಗಿ ಲಾಬಿ ನಡೆಸಲು ಕಷ್ಟಸಾಧ್ಯ. ಇನ್ನೂ ಉನ್ನತ ಹುದ್ದೆಯಲ್ಲಿರುವ ಐಪಿಎಸ್ ಅಧಿಕಾರಿಗಳು ಬಡ್ತಿ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುವುದಿಲ್ಲ ಎಂದು ಮತ್ತೊಬ್ಬ ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ.

    ವೇತನ ಮುಖ್ಯವಲ್ಲ ಬಡ್ತಿ ಮುಖ್ಯ

    ಐಎಎಸ್ ಮತ್ತು ಐಪಿಎಸ್ ಎರಡೂ ಹುದ್ದೆಗೆ ವೇತನ ಸರಿಸಮಾನವಾಗಿರುತ್ತೆ. ಇಲ್ಲಿ ವೇತನ ಮುಖ್ಯವಲ್ಲ, ಬಡ್ತಿ ವಿಚಾರ ಮುಖ್ಯ. ಉನ್ನತ ಹುದ್ದೆಯಲ್ಲಿ ಹೆಚ್ಚುಕಾಲ ಸೇವೆ ಸಲ್ಲಿಸಿ ನಿವೃತ್ತಿ ಆಗಬೇಕೆಂಬುದು ಪ್ರತಿಯೊಬ್ಬ ಐಪಿಎಸ್ ಆಸೆ. ನಿಯಮ ಉಲ್ಲಂಘಿಸಿ ಐಎಎಸ್​ಗೆ ಬಡ್ತಿ ಕೊಡುವುದಾದರೆ ಐಪಿಎಸ್​ಗೂ ನೀಡುವುದರಲ್ಲಿ ತಪ್ಪೇನಿಲ್ಲ. ರಾಜ್ಯ ಸರ್ಕಾರಕ್ಕೆ ಅಧಿಕಾರ ಇರುತ್ತದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ‘ವಿಜಯವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹುದ್ದೆ ಇದ್ದರೂ ಬಡ್ತಿ ಸಿಗಲಿಲ್ಲ

    ಸೇವಾ ಹಿರಿತನದ ಮೇಲೆ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡುವ ಪರಿಸ್ಥಿತಿ ಎದುರಾದಾಗ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ), ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯನ್ನು ಡಿಜಿಪಿಗೆ ಬಡ್ತಿ ನೀಡಿ ಡಿಜಿಪಿಗಳಾದ ಎಂ.ಎನ್.ರೆಡ್ಡಿ ಮತ್ತು ಎಚ್.ಎನ್. ಸತ್ಯನಾರಾಯಣ ರಾವ್(ನಿವೃತ್ತ) ಅವರನ್ನು ನೇಮಿಸಲಾಗಿತ್ತು. ಇವರ ನಂತರ ಡಿಜಿಪಿ ಹುದ್ದೆ ಖಾಲಿ ಇದ್ದರೂ ಬಡ್ತಿ ಕೆಲಸ ನಡೆದಿಲ್ಲ. 2017ರಲ್ಲೇ ಎಡಿಜಿಪಿಗಳಾದ ಅಲೋಕ್ ಮೋಹನ್, ಎನ್.ಎಸ್. ಮೇಘರಿಖ್ ಮತ್ತು ಡಾ.ಆರ್.ಪಿ. ಶರ್ವಗೆ ಬಡ್ತಿ ಲಭಿಸಿಲ್ಲ. 3 ವರ್ಷ ಕಾದರೂ ಜನವರಿಯಲ್ಲಿ ನೀಡಬೇಕಿದ್ದ ಬಡ್ತಿಯನ್ನು ಮತ್ತೆ 1 ತಿಂಗಳು ಮಂದೂಡಿದ್ದಾರೆ.

    | ಗೋವಿಂದರಾಜು ಚಿನ್ನಕುರ್ಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts