More

    ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದಲ್ಲಿ ಕ್ರಾಂತಿ

    ಶ್ರೀಕಾಂತ ಅಕ್ಕಿ ಬಳ್ಳಾರಿ

    ಕೇಂದ್ರ ಸರ್ಕಾರ ೋಷಿಸಿದ ಜಲಶಕ್ತಿ ಅಭಿಯಾನವನ್ನು ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸುವ ಕಾಮಗಾರಿಗಳು ಭರದಿಂದ ಸಾಗಿವೆ.

    ರಾಜ್ಯದ ಬರ ಪೀಡಿತ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ಜಲಶಕ್ತಿ ಅಭಿಯಾನ ಕೈಗೊಳ್ಳುವಂತೆ ಕೇಂದ್ರ ಸರ್ಕಾರ 6 ತಿಂಗಳ ಹಿಂದೆ ಸೂಚಿಸಿತ್ತು. ಅವಳಿ ಜಿಲ್ಲೆಯ ಅನೇಕ ಹಳ್ಳಿಗಳು ಸಮರ್ಪಕ ಮಳೆಯಿಲ್ಲದೆ ಬರಡಾಗಿದ್ದವು. ಮಳೆ ಬಂದರೂ ನೀರು ಭೂಮಿಯೊಳಗೆ ಇಂಗದೆ ಹಳ್ಳ-ಕೊಳ್ಳಗಳ ಮೂಲಕ ಸಮುದ್ರ ಸೇರುತ್ತಿದ್ದರಿಂದ ಹಲವು ವರ್ಷಗಳಿಂದ ಜನರ ಬವಣೆ ನೀಗಿರಲಿಲ್ಲ. ಹಳ್ಳಿ ಜನ ಕೆಲಸ ಅರಸಿ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಸದ್ಯ ಜಿಲ್ಲೆಯ ವಿವಿಧೆಡೆ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯಕ್ಕೆ ಜಿಪಂ ಚಾಲನೆ ನೀಡಿದೆ. ಗ್ರಾಮೀಣ ಭಾಗದಲ್ಲಿ ತ್ವರಿತಗತಿಯಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜಲಶಕ್ತಿ ಅಭಿಯಾನದ ಕ್ರಾಂತಿಯೇ ಆರಂಭವಾಗಿದೆ.

    ಏನೆಲ್ಲ ಕಾಮಗಾರಿ ಮಾಡಲಾಗಿದೆ?: ಅವಳಿ ಜಿಲ್ಲೆ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ 11.46 ಕೋಟಿ ರೂ.ಯಲ್ಲಿ 40 ಸಮಗ್ರ ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. 13.13 ಕೋಟಿ ರೂ.ನಲ್ಲಿ 326 ಕೃಷಿ ಹೊಂಡ ನಿರ್ಮಾಣ, 17.04 ಕೋಟಿ ರೂ.ನಲ್ಲಿ 1044 ನಾಲಾ ಪುನಶ್ಚೇತನಕ್ಕೆ ರೂಪುರೇಷೆ ಸಿದ್ಧಪಡಿಸಿದ್ದು, 335 ಪೂರ್ಣಗೊಂಡಿವೆ. 6.89 ಕೋಟಿ ರೂ.ವೆಚ್ಚದಲ್ಲಿ 125 ಗೋಕಟ್ಟೆ ಕಟ್ಟಲಾಗುತ್ತಿದ್ದು, 74 ಪೂರ್ಣಗೊಂಡಿವೆ. 5.79 ಕೋಟಿ ರೂ.ನಿಂದ 5 ಸಾವಿರ ಸೋಕ್ ಪಿಟ್ ಕಟ್ಟಿಸಲಾಗುತಿದ್ದು, 4416 ನಿರ್ಮಿಸಲಾಗಿದೆ. 21.48 ಕೋಟಿ ರೂ.ವೆಚ್ಚದಲ್ಲಿ 3478 ಚೆಕ್ ಡ್ಯಾಮ್ ಪೈಕಿ 2259 ಮುಗಿದಿವೆ. 61 ಹಳೆಯ ಬಾವಿಗಳ ಪುನಶ್ಚೇತನ ಕಾರ್ಯಕ್ಕೆ 2.93 ಕೋಟಿ ರೂ.ಗಳಲ್ಲಿ ಚಾಲನೆ ನೀಡಿದ್ದು, 38 ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲದೆ, ಕಡಿಮೆ ಹೊಲ ಹೊಂದಿರುವ ರೈತರ ಅನುಕೂಲಕ್ಕಾಗಿ ಮೂರ‌್ನಾಲ್ಕು ರೈತರನ್ನು ಒಗ್ಗೂಡಿಸಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಾಮೂಹಿಕ ಕೃಷಿ ಹೊಂಡಕ್ಕೂ ಚಾಲನೆ ನೀಡಲಾಗಿದೆ. ಈವರೆಗೆ 8 ನಿರ್ಮಿಸಿದ್ದು, 21 ಹೊಂಡಗಳ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಹೊರತಾಗಿಯೂ ಅಂತರ್ಜಲ ಮಟ್ಟ ಹೆಚ್ಚಿಸುವಂತ ವಿವಿಧ ಕಾಮಗಾರಿ ನಿರಂತರವಾಗಿ ಮಾಡಲಾಗುತ್ತಿದೆ.

    ಮಾನವ ದಿನಗಳ ಸೃಜನೆಯಲ್ಲಿ ಏರಿಕೆ
    ವಿವಿಧ ಕಾಮಗಾರಿ ನಿರಂತರವಾಗಿ ಕೈಗೊಳ್ಳುತ್ತಿ ರುವುದರಿಂದ ಸಹಜವಾಗಿಯೇ ಮಾನವ ದಿನಗಳ ಸೃಜನೆಯಲ್ಲಿಯೂ ಗಣಿನಾಡು ಮುಂದಿದೆ. ಅಂತರ್ಜಲ ಮಟ್ಟ ಹೆಚ್ಚಿಸುವ ಕಾಮಗಾರಿಯಲ್ಲಿ ಈವರೆಗೆ 5 ಲಕ್ಷ ಮಾನವ ದಿನ ಸೃಜನೆಯಾಗಿದೆ. ವಿವಿಧ ಕಾಮಗಾರಿಗಳ ಮೂಲಕ ಶೇ.100 ಗುರಿ ದಾಟಿದ್ದು, ರಾಜ್ಯದ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆ ಸದಾ ಮೊದಲನೇ ಸ್ಥಾನ ಪಡೆಯುತ್ತಿದೆ.

    ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರ ಸೂಚನೆ ಮೇರೆಗೆ ಜಿಲ್ಲಾದ್ಯಂತ ಜಲಶಕ್ತಿ ಅಭಿಯಾನದನ್ವಯ ಅಂತರ್ಜಲ ಮಟ್ಟ ಹೆಚ್ಚಿಸುವಂತ ಕಾಮಗಾರಿಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ಹೀಗಾಗಿಯೇ ಬರ ಪೀಡಿತ ಹಳ್ಳಿಗಳಲ್ಲಿಯೂ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ಸಾಮೂಹಿಕ ಕೃಷಿ ಹೊಂಡಕ್ಕೂ ಪ್ರಮುಖ ಆದ್ಯತೆ ನೀಡಲಾಗಿದೆ.
    | ಬಸವರಾಜ್ ಅಡವಿಮಠ ಉಪ ಕಾರ್ಯದರ್ಶಿ, ಜಿಪಂ, ಬಳ್ಳಾರಿ

    ನನಗೆ ಒಂದೇ ಎಕರೆ ಜಮೀನಿದ್ದು, ಕೃಷಿ ಹೊಂಡ ಕಟ್ಟಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ನನ್ನ ಹೊಲದ ಪಕ್ಕದ ನಾಲ್ವರು ರೈತರನ್ನು ಒಗ್ಗೂಡಿಸಿಕೊಂಡು ಕೃಷಿ ಹೊಂಡ ನಿರ್ಮಿಸಿದ್ದರಿಂದ ಬಹಳಷ್ಟು ಅನುಕೂಲವಾಗಿದೆ. ಉತ್ತಮ ಬೆಳೆ ಕೂಡ ಬೆಳೆಯುತ್ತಿದ್ದೇವೆ.
    | ಲಕ್ಷ್ಮಣ ಇಟಗಿಹಾಳ್ ರೈತ, ಸಿರಗುಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts