More

    ಮೈಲಾರ , ಕುರುವತ್ತಿ ಜಾತ್ರೆ ನಿಷೇಧ ಸರಿಯಲ್ಲ: ಶಾಸಕ ಪರಮೇಶ್ವರ ನಾಯ್ಕ, ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಖಂಡನೆ

    ಸರಳ ಆಚರಣೆಗೆ ಅವಕಾಶ ನೀಡಲು ಒತ್ತಾಯ

    ಹೂವಿನಹಡಗಲಿ: ತಾಲೂಕಿನ ಮೈಲಾರ ಕಾರ್ಣಿಕೋತ್ಸವ, ಕುರುವತ್ತಿ ರಥೋತ್ಸವವನ್ನು ಜಿಲ್ಲಾಧಿಕಾರಿ ರದ್ದುಪಡಿಸಿರುವುದು ಸರಿಯಲ್ಲ. ಸರಳವಾಗಿ ಜಾತ್ರೆ ನಡೆಸಲು ಅವಕಾಶ ನೀಡಬೇಕು ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಮೈಲಾರ ದೇವಸ್ಥಾನದ ಧರ್ಮಕರ್ತ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಒತ್ತಾಯಿಸಿದರು.

    ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಾತ್ರೆ ನಿಷೇಧದ ಬಗ್ಗೆ ಜಿಲ್ಲಾಧಿಕಾರಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಭಕ್ತರನ್ನು ಕಡೆಗಣಿಸಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಪ್ರತಿ ವರ್ಷದಂತೆ ಮೈಲಾರ ಕಾರ್ಣಿಕೋತ್ಸವ, ಕುರುವತ್ತಿ ರಥೋತ್ಸವ ನಡೆಯಬೇಕೆಂಬುದು ಲಕ್ಷಾಂತರ ಭಕ್ತರ ಅಭಿಪ್ರಾಯವಾಗಿದೆ ಎಂದು ಶಾಸಕ ಪರಮೇಶ್ವರ ನಾಯ್ಕ ಹೇಳಿದರು.

    ಈಗಾಗಲೇ ರಾಜ್ಯದಲ್ಲಿ ಕರೊನಾ ಕಡಿಮೆಯಾಗಿದ್ದು, ಹಲವು ಜಾತ್ರೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿವೆ. ರಾಜ್ಯ, ಅಂತಾರಾಜ್ಯದಿಂದ ಈ ಭಾಗದ ಜಾತ್ರೆಗಳಿಗೆ ಭಕ್ತರಿಗೆ ನಿರಾಸೆ ಮಾಡದೆ ಜಿಲ್ಲಾಧಿಕಾರಿಗಳು ಸರಳವಾಗಿ ಆಚರಿಸಲು ಅವಕಾಶ ನೀಡಬೇಕು. ಮೈಲಾರ ದೇವಸ್ಥಾನದಲ್ಲೇ ಭಕ್ತರು, ಜನಪ್ರತಿನಿಧಿಗಳ ಸಭೆ ಕರೆದು ಜಾತ್ರೆ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.

    ಧರ್ಮಕರ್ತ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಮಾತನಾಡಿ, ಮೈಲಾರದ ಜಾತ್ರೆ ನಡೆಸಲು ಜಿಲ್ಲಾಧಿಕಾರಿಗೆ ನಾನು ಮನವಿ ಮಾಡಿದ್ದೆ. ಆದರೆ ಕರೊನಾದಿಂದಾಗಿ ಜಾತ್ರೆ ನಿಷೇಧಿಸಿದ್ದೇವೆ ಎಂದು ಆದೇಶ ಮಾಡಿದ್ದಾರೆ. ಕೂಡಲೇ ಜಾತ್ರೆ ನಿಷೇಧದ ಬಗ್ಗೆ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು.

    ಟಿಎಪಿಸಿಎಂಸಿ ಅಧ್ಯಕ್ಷ ಹನುಮಂತಪ್ಪ, ಪುರಸಭೆ ಸದಸ್ಯ ಜ್ಯೋತಿ ಮಲ್ಲಣ್ಣ, ಪಕ್ಕೀರಪ್ಪ, ವಸಂತ, ಚಾಂದ್‌ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts