More

    ನೂರಾರು ಶಿವಲಿಂಗ ಕಣ್ಮರೆ!

    ರಾಜೇಂದ್ರ ಶಿಂಗನಮನೆ ಶಿರಸಿ

    ಶಾಲ್ಮಲಾ ನದಿ ತಟದ ಪ್ರಸಿದ್ಧ ಶಿವತಾಣ ಸಹಸ್ರಲಿಂಗದಲ್ಲಿ ಕಲ್ಲಿನಿಂದ ನಿರ್ವಿುಸಿರುವ ಲಿಂಗಗಳಿಗೆ ರಕ್ಷಣೆ ಇಲ್ಲದ್ದರಿಂದ ಅವು ಅಳಿವಿನಂಚಿಗೆ ಸರಿಯುತ್ತಿವೆ. ಲಿಂಗಗಳ ಕಣ್ಮರೆ ಹೆಚ್ಚುತ್ತಿರುವುದನ್ನು ಗಮನಿಸಿದರೆ ಭವಿಷ್ಯದಲ್ಲಿ ಕೇವಲ ಹೆಸರಿಗಷ್ಟೇ ಸಹಸ್ರಲಿಂಗ ಸೀಮಿತವಾಗುವ ಆತಂಕ ಎದುರಾಗಿದೆ.

    ಸಹಸ್ರಾರು ಪ್ರವಾಸಿಗರನ್ನು ಸೆಳೆಯುವ ಶಿರಸಿ ತಾಲೂಕಿನ ಸಹಸ್ರಲಿಂಗ ವಿಶೇಷ ಶಿವತಾಣವಾಗಿ ಗುರುತಿಸಿಕೊಂಡಿದೆ. ಶಿವರಾತ್ರಿ, ಸಂಕ್ರಾಂತಿ ಸಂದರ್ಭದಲ್ಲಿ ಸಾವಿರಾರು ಜನರು ಆಗಮಿಸಿ ನದಿಯಲ್ಲಿರುವ ಶಿವಲಿಂಗಗಳಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ, ಇಲ್ಲಿನ ಶಿಲಾ ಲಿಂಗಗಳಿಗೆ ಸೂಕ್ತ ರಕ್ಷಣೆಯಿಲ್ಲದ ಕಾರಣ ಅವು ವಿನಾಶದಂಚಿಗೆ ಬಂದಿವೆ. ಇಲ್ಲಿ ಚದುರಿದ ಸ್ಥಿತಿಯಲ್ಲಿರುವ ಬಹುತೇಕ ಲಿಂಗಗಳು ಮಣ್ಣಿನ ಮೇಲ್ಪದರದ ಮೇಲಿನ ಕಲ್ಲಿನ ಮೇಲಿವೆ. ಪ್ರವಾಹದ ನೀರು ಅದರ ಜತೆ ಬರುವ ಮರದ ದಿಮ್ಮಿಗಳು ಈ ಕಲ್ಲುಗಳಿಗೆ ತಾಗಿದರೆ ಬುಡಸಹಿತ ಕಿತ್ತುಕೊಂಡು ಹೋಗುತ್ತವೆ. ಈಗಾಗಲೇ ಬೆರಳೆಣಿಕೆಯ ಲಿಂಗಗಳು ನದಿಗುಂಟ ಕಾಣಸಿಗುತ್ತಿದ್ದು, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇವುಗಳ ಪ್ರಮಾಣ ಮತ್ತಷ್ಟು ಕುಂಠಿತವಾಗಿದೆ.

    40 ಲಕ್ಷ ರೂ. ಅನುದಾನ ಸಾಕಾಗಲಿಲ್ಲ: 2013-14ರಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರು ಲ್ಯಾಂಡ್ ಆರ್ವಿುಗೆ ಶಿವಲಿಂಗಗಳ ರಕ್ಷಣೆಯ ಜವಾಬ್ದಾರಿ ವಹಿಸಿ 40 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರು. ಕಲ್ಲಿನ ಲಿಂಗಗಳ ತಳವನ್ನು ಕಾಂಕ್ರಿಟ್ ಹಾಗೂ ಇತರ ವಸ್ತುಗಳ ಸಹಕಾರದಿಂದ ಗಟ್ಟಿಗೊಳಿಸಲು ಯೋಜನೆ ರೂಪಿಸಿ ತ್ವರಿತವಾಗಿ ಅನುಷ್ಠಾನ ಮಾಡುವಂತೆ ಸೂಚಿಸಿದ್ದರು. ಆದರೆ, ಆ ಅನುದಾನದಲ್ಲಿ ನಿಗದಿತ ಕಾಮಗಾರಿ ಹೊರತುಪಡಿಸಿ ಉಳಿದೆಲ್ಲ ಕಾರ್ಯ ಮಾಡಲಾಗಿದೆ. ಹೀಗಾಗಿ, ಯಾವೊಂದು ಕಲ್ಲಿನ ಲಿಂಗವನ್ನು ಭದ್ರಗೊಳಿಸುವ ಕಾರ್ಯ ನಡೆದಿಲ್ಲ.

    ನಿರ್ಲಕ್ಷ್ಯ ಧೋರಣೆ: ಪ್ರತಿ ವರ್ಷ ಮಳೆ ನೀರಿನ ರಭಸಕ್ಕೆ ಕೆಲವು ಭಗ್ನವಾದರೆ, ಇನ್ನು ಕೆಲವು ಪ್ರವಾಹದ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತವೆ. ಇನ್ನೂ ಕೆಲವು ಮಣ್ಣಿನಾಳಕ್ಕೆ ಮುಚ್ಚುತ್ತಿವೆ. ನಿರಂತರವಾಗಿ ನೀರಲ್ಲಿರುವ ಲಿಂಗಗಳು ಸವಕಳಿಯಾಗಿ ಹಾಳಾಗುತ್ತಿವೆ. ಈವರೆಗೆ ನೂರಾರು ಲಿಂಗಗಳು ಕಣ್ಮರೆಯಾಗಿದ್ದು, ಇದುವರೆಗೆ ಯಾರಿಗೂ ಗೋಚರಿಸಿಲ್ಲ. ಅವುಗಳ ಭದ್ರತೆಗೆ ಆದ್ಯತೆ ನೀಡದಿರುವುದರಿಂದ ಸಹಸ್ರಲಿಂಗದಲ್ಲಿ ಸದ್ಯ ಕೆಲವೇ ಕೆಲವು ಲಿಂಗಗಳನ್ನು ಕಾಣಬಹುದಾಗಿದೆ ಎನ್ನುತ್ತಾರೆ ಸ್ಥಳೀಯರು.

    ಕಳೆದ ಮೂರು ವರ್ಷಗಳಲ್ಲಿ ಶಾಲ್ಮಲಾ ನದಿ ಅಬ್ಬರದ ಪ್ರವಾಹಗಳನ್ನು ಕಂಡಿದೆ. ಈ ವೇಳೆ ಪ್ರವಾಹದೊಟ್ಟಿಗೆ ಶಿವಲಿಂಗಗಳೂ ಕೊಚ್ಚಿಕೊಂಡು ಹೋಗಿವೆ. ಈ ಬಾರಿಯ ಮಳೆಗಾಲದಲ್ಲಿಯೂ ಕೆಲವು ಲಿಂಗಗಳು ಕಣ್ಮರೆಯಾಗಿವೆ. ಬೇಸಿಗೆಯಲ್ಲಿ ನೋಡಿದ ಸ್ಥಳದಲ್ಲಿ ಈಗ ಲಿಂಗ ಕಾಣುತ್ತಿಲ್ಲ. ಇದೇ ರೀತಿಯಾದರೆ ಸಹಸ್ರಲಿಂಗ ಹೆಸರಿಗಷ್ಟೇ ಸೀಮಿತವಾಗುವ ಸಾಧ್ಯತೆಯಿದೆ. ಸಂಬಂಧಪಟ್ಟ ಇಲಾಖೆ ತಕ್ಷಣ ಲಿಂಗಗಳ ಭದ್ರತೆಗೆ ಆದ್ಯತೆ ನೀಡಬೇಕು.

    | ಹರೀಶ ನಾಯ್ಕ ಸ್ಥಳೀಯ

    ಸಹಸ್ರಲಿಂಗ ಅಭಿವೃದ್ಧಿ ಸಂಬಂಧ ಅಂದಿನ ಲ್ಯಾಂಡ್ ಆರ್ವಿುಗೆ (ಕ್ರೆಡಿಲ್) 40 ಲಕ್ಷ ರೂಪಾಯಿ ಅನುದಾನ ನೀಡಲಾಗಿತ್ತಾದರೂ ಅದರಲ್ಲಿ ರೇಲಿಂಗ್ಸ್, ಪೇವರ್ಸ್, ಮೆಟ್ಟಿಲುಗಳು, ರಕ್ಷಣಾ ಬೇಲಿ, ತೂಗು ಸೇತುವೆಗೆ ದಾರಿ ಸೇರಿ ಇತರ ಕಾರ್ಯ ಮಾಡಲಾಗಿದೆ. ಲಿಂಗಗಳ ರಕ್ಷಣೆಗೆ ಈ ಅನುದಾನದಲ್ಲಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಪ್ರತ್ಯೇಕ ಅನುದಾನ ನೀಡಿದ್ದರೆ ಅನುಕೂಲವಾಗುತ್ತಿತ್ತು.

    | ಡಿ.ಎಲ್. ನಾಯ್ಕ ಕ್ರೆಡಿಲ್ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts