More

    ಮಾನವ ಹಕ್ಕುಗಳು ದೇಶದಿಂದ ದೇಶಕ್ಕೆ ವಿಭಿನ್ನ

    ಬೆಳಗಾವಿ: ಪ್ರತಿ ದೇಶವೂ ತನ್ನ ನಾಗರಿಕ ಹಿತರಕ್ಷಣೆಗಾಗಿ ಮೂಲ ಹಕ್ಕುಗಳನ್ನು ನೀಡಿರುತ್ತವೆ. ಅವುಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ಆದರೆ, ಮಾನವ ಹಕ್ಕುಗಳು ವಿಶ್ವವ್ಯಾಪಕವಾಗಿದ್ದು, ಸಾರ್ವತ್ರಿಕವಾಗಿವೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ವಿ. ಕುಲಕರ್ಣಿ ಅಭಿಪ್ರಾಯ ಪಟ್ಟಿದ್ದಾರೆ.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಘಟಕ, ಮಹಾವಿದ್ಯಾಲಯದ ಮಾನವ ಹಕ್ಕುಗಳ ಘಟಕ ಹಾಗೂ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಗುರುವಾರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

    ಮಾನವ ಹಕ್ಕುಗಳು ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದು ಜಗತ್ತಿನಾದ್ಯಂತ ಜಾರಿಯಲ್ಲಿವೆ. ಅಲ್ಲದೆ, ಸಂವಿಧಾನ ನೀಡಿದ ಮೂಲ ಹಕ್ಕುಗಳಿಗಿಂತ ವಿಶಾಲ ವ್ಯಾಪ್ತಿಯನ್ನು ಮಾನವ ಹಕ್ಕುಗಳು ಹೊಂದಿರುತ್ತವೆ. ಜಗತ್ತಿನ ಎಲ್ಲರೂ ಹುಟ್ಟಿದಾಗಿನಿಂದ ಪ್ರಾಪ್ತವಾಗಿರುವ ನೈತಿಕ ಹಕ್ಕುಗಳೇ ಮಾನವ ಹಕ್ಕುಗಳಾಗಿವೆ.

    ಇಂದು ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಹಳ್ಳಿ-ಹಳ್ಳಿಗಳಿಂದ ವಿಶ್ವಮಟ್ಟದಲ್ಲಿ ಅಮ್ನೇಸ್ಟಿ ಇಂಟರನ್ಯಾಷನಲ್, ಮಾನವ ಹಕ್ಕುಗಳ ಸಂರಕ್ಷಣಾ ಸಂಘಟನೆಗಳು ಅವುಗಳ ಅನುಷ್ಠಾನಕ್ಕಾಗಿ, ಜಾಗೃತಿ ಮೂಡಿಸುವುದಕ್ಕಾಗಿಯೇ ಸ್ಥಾಪನೆಯಾಗಿವೆ ಎಂದರು.

    ನಾಲ್ಕು ತಲೆಮಾರು: ಮಾನವ ಹಕ್ಕುಗಳನ್ನು ನಾಲ್ಕು ತಲೆಮಾರಿನಲ್ಲಿ ವಿಂಗಡಿಸಬಹುದಾಗಿದೆ. ಮೊದಲನೆಯದಾಗಿ ನಾಗರಿಕ ಹಾಗೂ ರಾಜಕೀಯ ಹಕ್ಕುಗಳಿಗಾಗಿ ಜಗತ್ತಿನ ವಿವಿಧ ದೇಶಗಳು ಸ್ವತಂತ್ರವಾಗಿ ಪ್ರಜಾಪ್ರಭುತ್ವ ಸರ್ಕಾರಗಳನ್ನು ಸ್ಥಾಪಿಸಿಕೊಂಡವು.
    ಎರಡನೆಯದಾಗಿ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳ ಅಡಿಯಲ್ಲಿ ವ್ಯಕ್ತಿಗತ ಹಕ್ಕುಗಳ ಸ್ಥಾಪನೆಗೆ
    ಹೋರಾಟಗಳಾದವು.

    ಮೂರನೆಯ ತಲೆಮಾರಿನ ಹಕ್ಕುಗಳೆಂದರೆ ಗುಂಪು ಹಕ್ಕುಗಳು. ಈ ಹಂತದಲ್ಲಿ ಮಹಿಳೆ, ಮಕ್ಕಳು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಜಾರಿಗೆ ಬಂದವು. ಇನ್ನೂ ಪ್ರಸ್ತುತವಾಗಿ ಹಕ್ಕುಗಳ ಬಗ್ಗೆ ಜಗತ್ತಿನಾದ್ಯಂತ ಜಿನೆಟಿಕ್ ತಂತ್ರಜ್ಞಾನ, ಪರಿಸರ ಸಮತೋಲನ, ಭೌದ್ಧಿಕ ಹಕ್ಕುಗಳು, ಪೇಟೆಂಟ್ ಹಕ್ಕುಗಳು ಇವೆ. ಈ ಎಲ್ಲ ಮಾನವ ಹಕ್ಕುಗಳು ಮಾನವನ ಅಸ್ತಿತ್ವಕ್ಕಾಗಿ, ಆತನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿವೆ ಎಂದು ಮಾಹಿತಿ ನೀಡಿದರು.

    ಅರಿವಿರಲಿ: ಅಧ್ಯಕ್ಷತೆ ವಹಿಸಿದ್ದ ಕಾಲೇಜ್‌ನ ಪ್ರಾಚಾರ್ಯ ಪ್ರೊ. ಎಂ.ಜಯಪ್ಪ ಮಾತನಾಡಿ, ದೇಶದ ಜನರು ಮೂಲ ಹಕ್ಕುಗಳ ಜತೆಗೆ ಮಾನವ ಹಕ್ಕುಗಳನ್ನು ಬಳಸಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಅವಶ್ಯಕತೆ ಇದೆ. ವಿಜ್ಞಾನ-ತಂತ್ರಜ್ಞ್ಞಾನ ಬೆಳೆದಂತೆ ಹೊಸ ಹೊಸ ಸವಾಲುಗಳು ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮಾನವ ಹಕ್ಕುಗಳ ಸ್ವರೂಪದ ವ್ಯಾಪ್ತಿಯೂ ಬದಲಾಗುತ್ತಿದೆ.

    ಹೀಗಾಗಿ ಮಾನವ ಹಕ್ಕುಗಳ ಬದಲಾದ ಸ್ವರೂಪಗಳ ಬಗ್ಗೆ ಇಂತಹ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಡಾ. ರಮೇಶ ಎಂ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕು.ಸುಕನ್ಯಾ ಹಿರೇಮಠ ಪ್ರಾರ್ಥಿಸಿದರು. ಡಾ.ಮಲ್ಲೇಶ ದೊಡ್ಡಲಕ್ಕಣ್ಣವರ ಸ್ವಾಗತಿಸಿದರು. | }|| |}ಉಪಪ್ರಾಚಾರ್ಯ ಅನಿಲ ರಾಮದುರ್ಗ ವಂದಿಸಿದರು. ಕು.ಸಂಗೀತಾ ಲಮಾಣಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts