More

    ಮೆಕ್ಕೆಜೋಳಕ್ಕೆ ಭಾರಿ ಡಿಮಾಂಡ್! ಕ್ವಿಂಟಾಲ್‌ಗೆ 2100ರವರೆಗೆ ಮಾರಾಟ

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
    ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ಭಾರಿ ಡಿಮ್ಯಾಂಡ್ ಬಂದಿದ್ದು, ವ್ಯಾಪಾರ-ವಹೀವಾಟು ಜೋರಾಗಿಯೇ ನಡೆದಿದೆ. ಅಲ್ಲದೆ ಕ್ವಿಂಟಾಲ್‌ಗೆ 1400 ರೂ.ವರೆಗೂ ಇದ್ದ ಬೆಲೆ ಈಗ 2100 ರೂ.ವರೆಗೂ ಏರಿಕೆ ಕಂಡಿದೆ.


    ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ರೈತರು ಮೆಕ್ಕೆಜೋಳವನ್ನು ಜಮೀನು ಅಥವಾ ಒಣಗಿಸಲು ಹಾಕಿದ ಸ್ಥಳದಿಂದಲೇ ನೇರವಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದರು.

    ಆದರೀಗ ಮಳೆ ಕಾರಣದಿಂದ ಎಪಿಎಂಸಿ ಆವರಣದಲ್ಲಿಯೇ ಒಣಗಿಸಿ ಮಾರಾಟ ಮಾಡುತ್ತಿದ್ದಾರೆ. ಖರೀದಿಗಾಗಿ ರಾಜ್ಯದ ವಿವಿಧೆಡೆಯಿಂದ ವ್ಯಾಪಾರಿಗಳು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ.


    ಮೇ ತಿಂಗಳಲ್ಲಿ ಅತಿ ಹೆಚ್ಚು

    ನಗರದ ಎಪಿಎಂಸಿ ಆವರಣದಲ್ಲಿ ಹಾಗೂ ಇತರೆಡೆ ಸೇರಿ ಕಳೆದ ಜನವರಿ ತಿಂಗಳು 25,575 ಕ್ವಿಂಟಾಲ್, ಫೆಬ್ರವರಿಯಲ್ಲಿ 14,055 ಕ್ವಿಂಟಾಲ್, ಮಾರ್ಚ್ ತಿಂಗಳಲ್ಲಿ 33,604 ಕ್ವಿಂಟಾಲ್, ಏಪ್ರೀಲ್‌ನಲ್ಲಿ 25,120 ಕ್ವಿಂಟಾಲ್ ಮೆಕ್ಕೆಜೋಳ ಮಾರಾಟವಾಗಿದ್ದರೆ, ಮೇ ತಿಂಗಳಲ್ಲಿ 40 ಸಾವಿರ ಕ್ವಿಂಟಾಲ್‌ಗೂ ಅಧಿಕ ಮಾರಾಟವಾಗಿದೆ.


    ಮಳೆಯಿಂದ ಎಪಿಎಂಸಿ ಆವರಣ ಆಯ್ಕೆ

    ನೀರಾವರಿ ಮಾಡಿಕೊಂಡು 20 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಮೇ ತಿಂಗಳ ಆರಂಭದಲ್ಲಿ ಎಲ್ಲ ರೈತರು ಬೆಳೆಯನ್ನು ಕಟಾವು ಮಾಡಿ ಜಮೀನುಗಳ ಪಕ್ಕದ ರಸ್ತೆ, ಕಣಗಳಲ್ಲಿ ಒಣ ಹಾಕಿದ್ದರು. ಆದರೀಗ ಮಳೆ ಆರಂಭವಾಗಿರುವ ಪರಿಣಾಮ ಬಹುತೇಕ ರೈತರು ಮೆಕ್ಕೆಜೋಳವನ್ನು ಸಂರಕ್ಷಿಸಿಡಲು ಹಾಗೂ ಒಣಹಾಕಲು ಎಪಿಎಂಸಿ ಆವರಣಕ್ಕೆ ತಂದಿದ್ದಾರೆ.


    ಉತ್ತಮ ಬೆಲೆ

    2022ರ ಸೆಪ್ಟಂಬರ್‌ನಿಂದ ಡಿಸೆಂಬರ್‌ವರೆಗೆ ಮೆಕ್ಕೆಜೋಳದ ಬೆಲೆ ಸಂಪೂರ್ಣ ಕುಸಿತ ಕಂಡಿತ್ತು. ಆ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಮೆಕ್ಕೆಜೋಳ ಸಂಪೂರ್ಣ ಮಾರುಕಟ್ಟೆಗೆ ಬಂದ ಕಾರಣ ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 1000ದಿಂದ 1100 ರೂ. ವರೆಗೂ ಬೆಲೆ ಇಳಿಕೆಯಾಗಿತ್ತು. ಆಗ ರೈತರು ಕ್ವಿಂಟಾಲ್‌ಗೆ 1,600 ರೂಪಾಯಿ ನಿಗದಿ ಪಡಿಸಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಬೇಕು ಎಂದು ಹೋರಾಟ ಮಾಡಿದ್ದರು. ಆದರೀಗ ಮೆಕ್ಕೆಜೋಳಕ್ಕೆ ಭಾರಿ ಬೇಡಿಕೆ ಬಂದಿದ್ದು, ಒಂದು ಕ್ವಿಂಟಾಲ್‌ಗೆ 1950 ರೂ.ನಿಂದ 2100 ರೂ. ವರೆಗೂ ಮಾರಾಟವಾಗುತ್ತಿದೆ.

    ನೀರಾವರಿ ಮಾಡಿಕೊಂಡು ಮೆಕ್ಕೆಜೋಳ ಬೆಳೆದ ರೈತರು ಇದೀಗ ಬೇಡಿಕೆ ಹೆಚ್ಚಾಗಿದ್ದರಿಂದ ಮಾರುಕಟ್ಟೆಗೆ ತರುತ್ತಿದ್ದಾರೆ. ಹೀಗಾಗಿ ಬೆಲೆ ಕೂಡ ಹೆಚ್ಚಳವಾಗಿದೆ. ಆದ್ದರಿಂದ ಮೆಕ್ಕೆಜೋಳ ವ್ಯಾಪಾರ ಚನ್ನಾಗಿದೆ. ಬೆಲೆಯೂ ಸದ್ಯ ಉತ್ತಮವಾಗಿದೆ.
    — ಪರಮೇಶ ನಾಯ್ಕ ಎಪಿಎಂಸಿ ಸಹಾಯಕ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts