More

    ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ಮಾಣ ಶೀಘ್ರ ಅಭಿವೃದ್ಧಿ

    ಹುಬ್ಬಳ್ಳಿ : ಈಗಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ಸಂಚಾರ ದಟ್ಟಣೆ ಅವಶ್ಯಕತೆ ಹಾಗೂ ಸಾಮರ್ಥ್ಯದ ಪರಿಮಿತಿಯನ್ನು ವಿಸ್ತರಿಸುವ ಹಾಗೂ ಹುಬ್ಬಳ್ಳಿ ನಿಲ್ದಾಣದ ಅಗತ್ಯತೆಗಳನ್ನು 2026 ರ ನಂತರದ ಸಂಚಾರ ದಟ್ಟಣೆಗೆ ಅನುಗುಣವಾಗಿ ಹೊಸ ನಿಲ್ದಾಣದ ನಿರ್ಮಾಣ ಕಾರ್ಯ ಡಿಸೆಂಬರ್ ಅಂತ್ಯದೊಳಗೆ ಆರಂಭಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

    ಅವರು ಮಂಗಳವಾರ ಬೆಳಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ, ಒಟ್ಟಾರೆ ವಿಮಾನ ನಿಲ್ದಾಣದ ಕಾರ್ಯ ಪ್ರಗತಿ ಪ್ರಯಾಣಿಕರ ಬೇಡಿಕೆಗಳ ವಿಷಯಗಳ ಬಗ್ಗೆ ಸಮಗ್ರವಾಗಿ ಅಧಿಕಾರಿಗಳ ಸಭೆ ನಡೆಸಿದರು.

    ಹುಬ್ಬಳ್ಳಿ ವಿಮಾನ ನಿಲ್ದಾಣದ ಈಗಿನ ಸಾಮರ್ಥ್ಯ ಗಾತ್ರ ಹಾಗೂ ಇತರ ಸೌಲಭ್ಯಗಳ ವಿಸ್ತರಣೆಗಾಗಿ ಸಚಿವ ಜೋಶಿ ಅವರ ಕೋರಿಕೆಯ ಮೇರೆಗೆ ಈಗಾಗಲೇ ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದು , ಈಗ ಒಟ್ಟು 340 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಕೊನೆಗೊಳ್ಳಲಿದೆ. ಡಿಸೆಂಬರ್ ಅಂತ್ಯದ ಒಳಗೆ ಕಾಮಗಾರಿ ಆರಂಭವಾಗುವುದು. ನಿರ್ಮಾಣ ಕಾರ್ಯ ಮುಕ್ತಾಯಗೊಂಡಾಗ ಈ ಭಾಗದ ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಪ್ರತಿಫಲಿಸುವಂತೆ ಹೊರನೋಟ (ಫ್ರಂಟ್ ಎಲಿವೇಶನ್) ಹೇಗಿರಬೇಕೆಂಬ ಬಗ್ಗೆ ಸಚಿವ ಜೋಶಿ ಅಧಿಕಾರಿಗಳಿಗೆ ವಿವರಿಸಿದರು. ಈ ಸಂಬಂಧವಾಗಿ ಸ್ಥಳೀಯವಾಗಿ ಲಭ್ಯವಿರುವ ತಜ್ಞ ಸಂಸ್ಥೆಗಳ ಸೇವೆ ಪಡೆಯಲು ಸೂಚಿಸಿದರು.

    15,950 ಚ.ಮಿ. ವಿಸ್ತೀರ್ಣದಲ್ಲಿ ಹೊಸ ನಿಲ್ದಾಣದಲ್ಲಿ 4 ಏರೋ ಬ್ರಿಜ್ ಸಹಿತ ಏಕ ಕಾಲಕ್ಕೆ 2,400 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ, ಮತ್ತಿತರ ಸುಸಜ್ಜಿತ ನಿಲ್ದಾಣವಾಗಲಿದೆ ಹಾಗೂ ಸಮಸ್ತ ಉತ್ತರ ಕರ್ನಾಟಕದ ಹೆಮ್ಮೆಯ ನಿಲ್ದಾಣವಾಗಿ ಹೊರಹೊಮ್ಮಲಿದೆ . ಈ ಹೊಸ ನಿಲ್ದಾಣ ಪರಿಸರ ಸ್ನೇಹಿಯಾಗಿರಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

    ನೂತನ ಯೋಜನೆಯಂತೆ ಹುಬ್ಬಳ್ಳಿ ವಿಮಾನ ನಿಲ್ದಾಣ ಅಗಾಧ ಬೆಳವಣಿಗೆ ಕಾಣುತ್ತಿದೆ. ಈ ಬಗ್ಗೆ ಸಭೆಯಲ್ಲಿ ಹಲವಾರು ವಿಷಯಗಳನ್ನು ರ್ಚಚಿಸಲಾಯಿತು. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಸಾಕಷ್ಟು ನವೀಕರಣ ಕಾಣಲಿದ್ದು, ಇದು ಪ್ರಯಾಣಿಕರಿಗೆ ಅದ್ಭುತ ಅನುಭವವನ್ನು ನೀಡಲಿದೆ.

    ಹುಬ್ಬಳ್ಳಿ ವಿಮಾನ ನಿಲ್ದಾಣ ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರವಾಗಿದ್ದು, ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ದೇಶದ ವಿವಿಧ ನಗರಗಳಿಂದ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ವಿಮಾನ ನಿಲ್ದಾಣ ಪ್ರಮುಖ ಪಾತ್ರ ವಹಿಸುತ್ತದೆ.

    ಧಾರವಾಡ ಕರ್ನಾಟಕದ ವಿದ್ಯಾಕಾಶಿಯಾಗಿದೆ. ಐಐಟಿ ಸೇರಿದಂತೆ ಹಲವಾರು ಉನ್ನತ ಶಿಕ್ಷಣದ ಕಾಲೇಜುಗಳಿವೆ. ಬೃಹತ್ ಕೈಗಾರಿಕಾ ಸಂಸ್ಥೆಗಳನ್ನು ಹೊಂದಿರುವ ಧಾರವಾಡ ಜಿಲ್ಲೆಗೆ ಭವಿಷ್ಯದಲ್ಲಿ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಗಮನದಲ್ಲಿಟ್ಟುಕೊಂಡು ಹೊಸ ಕಟ್ಟಡ ವಿಸ್ತರಣೆ ಯೋಜನೆ ಕೈಗೊಳ್ಳಲಾಗಿದೆ.

    ಹೊಸ ಟರ್ವಿುನಲ್ ಕಟ್ಟಡ ನಿರ್ವಣಗೊಂಡ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗುವ ನಿರೀಕ್ಷೆ ಇದೆ. ದೇಶದ ಹಲವು ನಗರಗಳಿಗೆ ಹುಬ್ಬಳ್ಳಿಯಿಂದ ವಿಮಾನ ಸೇವೆಯನ್ನು ಆರಂಭಿಸಲು ಸಹ ಅನುಕೂಲವಾಗಲಿದೆ.

    ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್ ಶೇಖರನ್, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರನ್, ತಹಶೀಲ್ದಾರ ಕಲ್ಲನಗೌಡ ಪಾಟೀಲ, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರಾದ ಕೌಸ್ತುಭ ಸಂಶೀಕರ, ಸತೀಶ ಮುನವಳ್ಳಿ, ಜಯರಾಮ ಶೆಟ್ಟಿ, ಸುನೀಲ ಸರ್ವದೆ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts