More

    ವರೂರ ನವಗ್ರಹ ತೀರ್ಥಕ್ಷೇತ್ರದಲ್ಲಿ ಪದ್ಮಾವತಿ ಶಕ್ತಿಪೀಠ ಮಂದಿರ ಶಿಲಾನ್ಯಾಸ ಫೆ. 28ರಂದು

    ಹುಬ್ಬಳ್ಳಿ: ತಾಲೂಕಿನ ವರೂರ ಗ್ರಾಮದಲ್ಲಿರುವ ಶ್ರೀ ನವಗ್ರಹ ತೀರ್ಥಕ್ಷೇತ್ರದಲ್ಲಿ ಫೆ. 28ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಪದ್ಮಾವತಿ ದೇವಿ ಶಕ್ತಿಪೀಠ ದೇವಸ್ಥಾನದ ಶಿಲಾನ್ಯಾಸ, ಜೈನ ಎಜಿಎಂ ಆಯುರ್ವೇದಿಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಹೊಸ ಸಂಕೀರ್ಣದ ಉದ್ಘಾಟನೆ ಹಾಗೂ ಎಜಿಎಂಆರ್ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಭವನದ ಶಂಕುಸ್ಥಾಪನೆ ನೆರವೇರಲಿದೆ ಎಂದು ಎಜಿಎಂ ಸಮೂಹ ಸಂಸ್ಥೆ ಸಂಸ್ಥಾಪಕರು, ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರ ನಂದಿ ಮಹಾರಾಜರು ಹೇಳಿದರು.
    ವರೂರ ಶ್ರೀ ನವಗ್ರಹ ತೀರ್ಥಕ್ಷೇತ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜಯಶಂಕರ ಹೊಸ ಸಂಕೀರ್ಣ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಶ್ವಶಾಂತಿ ಸಂಸ್ಥೆ ಸಂಸ್ಥಾಪಕರು ಆಚಾರ್ಯ ಡಾ. ಲೋಕೇಶ ಮುನಿಜಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಶೇಷ ಆಹ್ವಾನಿತರಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಎಂ.ಆರ್. ಪಾಟೀಲ, ಅಭಯಕುಮಾರ ಪಾಟೀಲ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ವಿಪ ಮಾಜಿ ವಿಪ ಸದಸ್ಯ ನಾಗರಾಜ ಛಬ್ಬಿ, ಮುಂಬೈನ ದಿಗಂಬರ ಜೈನ ಗ್ಲೋಬಲ್ ಮಹಾಸಭಾ ಅಧ್ಯಕ್ಷ ಜಮನಲಾಲ ಜೈನ ಹಪಾವತ, ದಿಗಂಬರ ಜೈನ ಮಹಾಸಮಿತಿ ಅಧ್ಯಕ್ಷ ಡಾ. ಮಣಿಂದರ ಜೈನ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಬೆಳಗಾವಿ ತಾಂತ್ರಿಕ ವಿವಿ ಉಪಕುಲಪತಿ ಎಸ್. ವಿದ್ಯಾಶಂಕರ ಭಾಗವಹಿಸಲಿದ್ದಾರೆ ಎಂದರು.
    ಅಂದಾಜು 1.68 ಕೋಟಿ ರೂ. ವೆಚ್ಚದಲ್ಲಿ ಪದ್ಮಾವತಿ ದೇವಸ್ಥಾನ ನಿರ್ಮಿಸಲಾಗುತ್ತಿದೆ. ದೇವಿ ಮೂರ್ತಿ 3 ಅಡಿ ಎತ್ತರ ಇರಲಿದ್ದು. ಮೂರ್ತಿಯನ್ನು ಭಕ್ತರಾದ ಅಮೆರಿಕ ನಿವಾಸಿ ಸುನೀಲ ಕಠಾರಿಯಾ ಅವರು ಕೊಡಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಎಜಿಎಂಆರ್ ಸಮೂಹ ಸಂಸ್ಥೆ ನಿರ್ದೇಶಕ ಸಂದೀಪ ಕ್ಯಾತನವರ, ಪ್ರಾಚಾರ್ಯ ಡಾ. ಎಸ್.ಎ. ಶ್ರೀನಿವಾಸ, ಡಾ. ಆಕಾಶ ಕೆಂಭಾವಿ, ಡಾ. ಆನಂದ ಕುಲಕರ್ಣಿ ಇದ್ದರು.

    ಪದ್ಮಾವತಿ ಶಕ್ತಿಪೀಠದ ವಿಶೇಷ
    ಹಿಂದು ಪರಂಪರೆಯಲ್ಲಿ ಮಾತೆ ಪಾರ್ವತಿ, ಆದಿ ಶಕ್ತಿ ಇರುವಂತೆ ಜೈನ ಧರ್ಮದಲ್ಲಿ ಪದ್ಮಾವತಿ ದೇವಿಗೆ ವಿಶೇಷ ಸ್ಥಾನವಿದೆ. ಕಲಿಯುಗದ ಕಾಮಧೇನು ಪದ್ಮಾವತಿ ಮಾತೆಯ ಮಂದಿರವನ್ನು ಒಂದು ಎಕರೆ ಪ್ರದೇಶದಲ್ಲಿ ಕಾರ್ಕಳದ ಗ್ರಾನೈಟ್ ಕಲ್ಲಿನಿಂದ ನಿರ್ಮಿಸಲಾಗುತ್ತಿದೆ. ವಿಶೇಷವೆಂದರೆ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಿರುವ ಶ್ರೀರಾಮನ ಮೂರ್ತಿಗೆ ಬಳಸಿರುವ ಮೈಸೂರು ಬಳಿಯ ಕಲ್ಲಿನಿಂದಲೇ ಪದ್ಮಾವತಿ ಮೂರ್ತಿಯನ್ನು ತಯಾರಿಸಲಾಗುತ್ತಿದೆ. ಇದು ಪ್ರಪಂಚದ ಬೃಹತ್ ಪದ್ಮಾವತಿ ದೇವಾಲಯ ಆಗಲಿದೆ. ಜತೆಗೆ ಜೈನ ಪರಂಪರೆಯ ಸಾಹಿತ್ಯ, ಸಂಸ್ಕೃತಿ, ಸಿದ್ಧಾಂತ ಹೀಗೆ ಹತ್ತು ಹಲವು ವಿಚಾರಗಳನ್ನು ಒಳಗೊಳ್ಳಲಿದೆ ಎಂದು ಶ್ರೀಗಳು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts