More

    ಧನ್ವಂತರಿ: ಮೊಡವೆಯ ನಿಯಂತ್ರಣದ ಪರಿಹಾರಗಳು

    ಧನ್ವಂತರಿ: ಮೊಡವೆಯ ನಿಯಂತ್ರಣದ ಪರಿಹಾರಗಳು

    ಹದಿಹರೆಯದವರಿಗೆ ಬಹಳಷ್ಟು ಚಿಂತೆಯನ್ನು ಉಂಟುಮಾಡುವುದು ಒಂದು ಪರೀಕ್ಷೆ, ಇನ್ನೊಂದು ಮೊಡವೆ. ಕಂಡ ಕಂಡ ಕ್ರೀಮ್ಳು, ಫೇಶಿಯಲ್ ಟ್ರೀಟ್​ವೆುಂಟ್​ಗಳನ್ನು ಪಡೆದ ನಂತರವೂ ನಮ್ಮ ಮುಖವೇ ತನ್ನ ಸ್ವಂತ ಮನೆ ಎಂಬಂತೆ ಮೊಡವೆ ಕುಳಿತುಬಿಡುತ್ತದೆ. ಒಂದು ಹೋಯಿತೆನ್ನುವಷ್ಟರಲ್ಲಿ ಇನ್ನೊಂದು ಬರುತ್ತದೆ. ಆದರೆ ಮೊಡವೆಗೆ ಕಾರಣಗಳನ್ನು ಸರಿಯಾಗಿ ತಿಳಿದುಕೊಂಡರೆ ಸುಲಭವಾಗಿ ಅದರಿಂದ ಮುಕ್ತಿಯನ್ನು ಪಡೆಯಬಹುದು.

    ಸಕ್ಕರೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಜಂಕ್​ಫುಡ್​ಗಳನ್ನು ಸೇವಿಸುವುದು, ರಾತ್ರಿ ನಿದ್ರೆಗೆಡುವುದು, ಹಗಲಿಗೆ ನಿದ್ರೆ ಮಾಡುವುದು, ಸೌಂದರ್ಯವರ್ಧಕಗಳನ್ನು ಅತಿಯಾಗಿ ಬಳಸುವುದು, ಮಾನಸಿಕ ಒತ್ತಡ, ತಲೆಹೊಟ್ಟು ಮುಂತಾದವು ಮೊಡವೆಗೆ ಕಾರಣಗಳಾಗುತ್ತವೆ. ಹಲವಾರು ಕಾರಣಗಳಿಂದ ಹಾಮೋನ್​ಗಳಲ್ಲಿ ವ್ಯತ್ಯಾಸವಾಗುವುದೂ ಮೊಡವೆಯನ್ನು ಉಂಟುಮಾಡುತ್ತದೆ. ಮೊಡವೆಗಳು ಏಳುತ್ತಿದ್ದರೂ ಅವನ್ನು ನಿರ್ಲಕ್ಷಿಸಿ, ಅದಕ್ಕೆ ಕಾರಣವಾದ ಅಂಶಗಳನ್ನು ಬಿಡದೆ ಹೋದರೆ ನಿಧಾನವಾಗಿ ಉರಿ, ನೋವು, ಕೀವು ತುಂಬಿ ಅದು ದೊಡ್ಡ ರೋಗ ಎಂಬಂತೆ ತೊಂದರೆ ಕೊಡಬಹುದು. ಮೊಡವೆ ಎದ್ದಾಗ ಸೌಂದರ್ಯಕ್ಕೆ ಕುಂದು ಎಂದಷ್ಟೇ ಯೋಚಿಸದೆ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಯ ಸೂಚನೆ ಎಂದು ಭಾವಿಸಬೇಕು. ಮೊಡವೆಗಳನ್ನು ಉಗುರಿನಿಂದ ಚಿವುಟುವುದರಿಂದ, ಅವುಗಳನ್ನು ಮರೆಮಾಚಲು ಸೌಂದರ್ಯವರ್ಧಕ ಕ್ರೀಮ್ಳನ್ನು ಬಳಸುವುದರಿಂದ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳೇ ಹೆಚ್ಚು.

    ಮತ್ತೆ ಮತ್ತೆ ಮೊಡವೆಗಳು ಏಳದಿರಲು ನಮ್ಮ ಆಹಾರದಲ್ಲಿ ಹಣ್ಣುಗಳು, ಸ್ವಲ್ಪಮಟ್ಟಿಗೆ ಕಹಿ ಮತ್ತು ಒಗರು ಇರುವ ಆಹಾರಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಅರಿಶಿಣ, ದಾಳಿಂಬೆ, ನೆಲ್ಲಿಕಾಯಿ, ಒಣದ್ರಾಕ್ಷಿ, ಕ್ಯಾರೆಟ್, ಸೌತೆಕಾಯಿ, ಎಳನೀರು, ಬೂದುಗುಂಬಳಕಾಯಿ, ಪಡವಲಕಾಯಿ ಮುಂತಾದ ಆಹಾರಪದಾರ್ಥಗಳು ಸಹಕಾರಿ. ಉಪ್ಪು, ಹುಳಿ, ಖಾರಗಳ ಬಳಕೆ ಕಡಿಮೆ ಮಾಡಬೇಕು. ರಕ್ತಶುದ್ಧಿ ಮಾಡುವಂತಹ ಬೇವು, ಲಾವಂಚ, ಸೊಗದೆಬೇರು, ಮಂಜಿಷ್ಟ, ರಕ್ತಚಂದನ ಇವುಗಳ ಕಷಾಯವನ್ನು ಆಗಾಗ ಮಾಡಿ ಕುಡಿಯುತ್ತಿದ್ದರೆ ಸಹಾಯವಾಗುತ್ತದೆ. ಇವೆಲ್ಲ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತವೆ.

    ಗರಿಕೆ ಹುಲ್ಲಿನ ಜ್ಯೂಸ್ ಕುಡಿದರೆ ಉಷ್ಣದ ಕಾರಣದಿಂದಾದ ಮೊಡವೆ ಹತೋಟಿಗೆ ಬರುತ್ತದೆ. ವಾರಕ್ಕೆ ಅಥವಾ ಹದಿನೈದು ದಿನಗಳಿಗೊಮ್ಮೆ ಹರಳೆಣ್ಣೆ ಅಥವಾ ತ್ರಿಫಲಾ ಚೂರ್ಣ ಸೇವಿಸಿ ಭೇದಿ ಮಾಡಿಕೊಂಡರೆ ಅನುಕೂಲವಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಪ್ರಮಾಣದಲ್ಲಿ ಇವುಗಳ ಸೇವನೆ ಮಾಡಬೇಕಾಗುತ್ತದೆ. ಹಾಗಾಗಿ ದೇಹ ಪ್ರಕೃತಿಗನುಗುಣವಾಗಿ ಎರಡರಿಂದ ಮೂರು ಬಾರಿ ಭೇದಿಯಾಗುವಷ್ಟು ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಒಳ್ಳೆಯದು.

    ನಿತ್ಯ ಬೇವು ಮತ್ತು ಅರಿಶಿಣಗಳ ಪೇಸ್ಟ್ ಹಚ್ಚುತ್ತಿದ್ದರೆ ಎಲ್ಲ ರೀತಿಯ ಮೊಡವೆಗಳ ತಡೆಗೂ ಸಹಾಯವಾಗುತ್ತದೆ. ಮೊಡವೆಯ ಕಲೆ ಉಳಿದಿದ್ದರೆ ಬೇವಿನಸೊಪ್ಪು, ನುಗ್ಗೆಸೊಪ್ಪು ಮತ್ತು ಗ್ರಂಥಿಗೆ ಅಂಗಡಿಗಳಲ್ಲಿ ಸಿಗುವ ಜ್ಯೇಷ್ಠಮಧುವಿನ ಪುಡಿಯನ್ನು ಸೇರಿಸಿ ಹಚ್ಚುತ್ತ ಬಂದರೆ ಕಡಿಮೆಯಾಗುತ್ತದೆ. ಜಿಡ್ಡಿನ ಚರ್ಮವಾದರೆ, ಹುತ್ತದ ಮಣ್ಣಿನ ಫೇಸ್ ಪ್ಯಾಕ್ ಮಾಡಿಕೊಳ್ಳುವುದು ಅನುಕೂಲ. ಮಾವು ಮತ್ತು ಸೀಬೆ ಎಲೆಗಳನ್ನೂ ಪೇಸ್ಟ್ ಮಾಡಿ ಹಚ್ಚಬಹುದು. ಒಣ ಚರ್ಮವಾದರೆ ಜ್ಯೇಷ್ಠಮಧು ಮತ್ತು ಸೊಗದೆಬೇರಿನ ಪುಡಿಗಳನ್ನು ಹಾಲಿನ ಕೆನೆ ಅಥವಾ ಹಾಲಿನಲ್ಲಿ ಕಲಸಿ ಫೇಸ್​ಪ್ಯಾಕ್ ಮಾಡಿಕೊಳ್ಳಬೇಕು. ಇವುಗಳನ್ನು ಕಾಲು ಚಮಚದಷ್ಟು ಹೊಟ್ಟೆಗೂ ಸೇವಿಸಿದರೆ ಅನುಕೂಲವಾಗುತ್ತದೆ. ಮುಟ್ಟಿನ ಸಮಯಕ್ಕೆ ಅನುಗುಣವಾಗಿ ಅಂದರೆ ಮುಟ್ಟಿನ ಮೊದಲು ಅಥವಾ ನಂತರ ಏಳುತ್ತಿದ್ದರೆ ಅದು ಹಾಮೋನ್ ವ್ಯತ್ಯಯದಿಂದ ಎಂದು ಅರಿತುಕೊಂಡು ಹಾಮೋನ್​ಗಳನ್ನು ಸರಿಪಡಿಸಿಕೊಳ್ಳಲು ಚಿಕಿತ್ಸೆ ಪಡೆಯಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts