More

    ಹಾಸ್ಟೆಲ್ ಮಕ್ಕಳು ಅತಂತ್ರ!

    ಅವಿನ್ ಶೆಟ್ಟಿ, ಉಡುಪಿ
    ಕರೋನಾ ಪರಿಣಾಮ ಜಿಲ್ಲೆಯ ವಸತಿ ನಿಲಯಗಳಲ್ಲಿರುವ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಈಗ ಅತಂತ್ರರಾಗಿದ್ದಾರೆ. ಅತ್ತ ಮನೆಗೂ ಹೋಗಲಾದರೆ, ಇತ್ತ ಹಾಸ್ಟೆಲ್‌ನಲ್ಲಿಯೂ ಇರಲಾಗದ ಸ್ಥಿತಿ ನಿರ್ಮಾಣವಾಗಿದೆ.

    ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.70ಕ್ಕೂ ಹೆಚ್ಚು ಮಕ್ಕಳು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ ಗದಗ, ಹಾವೇರಿ, ದಾವಣಗೆರೆ, ಕಲುಬುರಗಿ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಉತ್ತರ ಕರ್ನಾಟಕ ಹಲವು ಜಿಲ್ಲೆಯ ವಿದ್ಯಾರ್ಥಿಗಳಿದ್ದಾರೆ.
    ಕರೊನಾ ಮುಂಜಾಗ್ರತೆಗಾಗಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿರುವ ಮಕ್ಕಳಿಗೆ ಮನೆಗೆ ಕಳುಹಿಸುವಂತೆ ಸರ್ಕಾರ ಆದೇಶಿಸಿತ್ತು. ಪರೀಕ್ಷೆ ನಡೆಯುತ್ತಿರುವ ಮತ್ತು ಪರೀಕ್ಷೆ ಬಾಕಿ ಇರುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಮಕ್ಕಳನ್ನು ಮಾತ್ರ ಹಾಸ್ಟೆಲ್‌ನಲ್ಲಿ ಇರಿಸಲಾಗಿತ್ತು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಪಿಯುಸಿ ಇಂಗ್ಲಿಷ್ ಪರೀಕ್ಷೆಯನ್ನು ಸರ್ಕಾರ ಮುಂದೂಡಿದೆ. ಇದರಿಂದ ಹಾಸ್ಟೆಲ್‌ನಲ್ಲಿದ್ದ ಮಕ್ಕಳು ಮನೆಗೆ ತೆರಳಬೇಕಿದೆ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಎಸ್‌ಎಸ್‌ಎಲ್‌ಸಿ ಕಯುತ್ತಿರುವ 130 ವಿದ್ಯಾರ್ಥಿಗಳಲ್ಲಿ 70ರಿಂದ 80 ವಿದ್ಯಾರ್ಥಿಗಳು ಹೊರ ಜಿಲ್ಲೆಯವರು. ಬಿಸಿಎಂ 41 ಹಾಸ್ಟೆಲ್‌ಗಳಿದ್ದು, ಶೇ.60ಕ್ಕೂ ಅಧಿಕ ಮಕ್ಕಳು ಹೊರ ಜಿಲ್ಲೆಯವರು.

    ಬಸ್ ಇಲ್ಲದೆ ಅತಂತ್ರ!: ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಸರ್ಕಾರಿ ಮತ್ತು ಖಾಸಗಿ ಬಸ್ ಸೇವೆ ಇಲ್ಲದೆ ಜನ ಸಂಚಾರಕ್ಕೆ ತಾತ್ಕಾಲಿಕ ಸಮಸ್ಯೆಯಾಗಿದೆ. ಸದ್ಯ ಗಂಭೀರ ಸಮಸ್ಯೆಯಾಗಿರುವುದು ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಇಲ್ಲಿ ಉಳಿದುಕೊಳ್ಳಲು ಸಂಬಂಧಿಕರು, ನೆಂಟರು ಇಲ್ಲ. ಪರೀಕ್ಷೆ ಮುಂದೂಡಿಕೆ ಬಗ್ಗೆ ಭಾನುವಾರ ಆದೇಶ ಇದ್ದರೆ, ಸೋಮವಾರ ಬೆಳಗ್ಗೆ ಬಸ್ ನಿಲ್ದಾಣಕ್ಕೆ ಹೋದ ಮಕ್ಕಳು ಬಸ್ ಇಲ್ಲದೆ ಹಾಸ್ಟೆಲ್ ಕಡೆಗೆ ಹಿಂತಿರುಗಿದ್ದಾರೆ.

    ಪರ್ಯಾಯ ವ್ಯವಸ್ಥೆ ಗೊಂದಲ: ಮಕ್ಕಳು ಊರಿಗೆ ತೆರಳಲು ಬಸ್ ಇಲ್ಲದೆ ಹಾಸ್ಟೆಲ್‌ನಲ್ಲೇ ಇರಬೇಕಾಗುತ್ತದೆ. ಹಾಸ್ಟೆಲ್‌ನಿಂದ ಮಕ್ಕಳನ್ನು ಮನೆಗೆ ಕಳುಹಿಸಬೇಕೆಂಬ ಸರ್ಕಾರದ ಆದೇಶವನ್ನು ನಿರ್ಲಕ್ಷೃ ಮಾಡುವಂತಿಲ್ಲ. ಒಟ್ಟಾರೆ ಹಾಸ್ಟೆಲ್ ಮೇಲ್ವಿಚಾರಕರು, ಅಧಿಕಾರಿಗಳಿಗೆ ಈ ಸಮಸ್ಯೆ ತಲೆನೋವಾಗಿದೆ. ಮಕ್ಕಳ ಪಾಲಕರೊಂದಿಗೆ ಚರ್ಚಿಸಿ ಕೆಲವರನ್ನು ಕರೆದುಕೊಂಡು ಹೋಗುವಂತೆ ಮನವಿ ಮಾಡಲಾಗಿದೆ. ಖಾಸಗಿ ವಾಹನದಲ್ಲಿ ಕಳುಹಿಸುವ ಮಾತುಕತೆಯೂ ನಡೆಯುತ್ತಿದೆ. ಪರ್ಯಾಯ ವ್ಯವಸ್ಥೆ ಆಗದಿದ್ದಲ್ಲಿ ಹಾಸ್ಟೆಲ್‌ನಲ್ಲೇ ಉಳಿಸಿಕೊಳ್ಳುವ ಚಿಂತನೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನರ್ಸಿಂಗ್ ವಿದ್ಯಾರ್ಥಿಗಳಿಗೆ ತುರ್ತು ಬುಲಾವ್ : ಕರೊನಾ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಸೂಚನೆಯಂತೆ ಖಾಸಗಿ ನರ್ಸಿಂಗ್, ಶಾಲಾ ಕಾಲೇಜಿಗೆ ರಜೆ ನೀಡಲಾಗಿತ್ತು. ಇದೀಗ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ಕರೊನಾ ತುರ್ತು ಸೇವೆಗಾಗಿ ನರ್ಸಿಂಗ್ ವಿದ್ಯಾರ್ಥಿ ಸೇವೆ ಬಳಸಿಕೊಳ್ಳಬೇಕು. ರಜೆ ರದ್ದು ಮಾಡಿ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ವರದಿ ಮಾಡಿಕೊಳ್ಳುವಂತೆ ಸುತ್ತೋಲೆ ಹೊರಡಿಸಿದೆ.
    ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ಸುತ್ತೋಲೆ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿಗೆ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನರ್ಸಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚಿದೆ. ಹೆಚ್ಚಿನ ಸಂಖ್ಯೆಯ ಸಾವಿರಾರು ಮಂದಿ ವಿದ್ಯಾರ್ಥಿಗಳು ಹೊರ ಜಿಲ್ಲೆ, ಹೊರ ರಾಜ್ಯದವರಾಗಿದ್ದಾರೆ. ಉತ್ತರ ಕರ್ನಾಟಕ, ಮಲೆನಾಡು ಭಾಗ ಸೇರಿದಂತೆ ಕೇರಳ ವಿದ್ಯಾರ್ಥಿಗಳು ಇಲ್ಲಿ ನರ್ಸಿಂಗ್ ಕಲಿಯುತ್ತಿದ್ದಾರೆ. ಅವರಿಗೆ ಕಾಲೇಜಿಗೆ ಆಗಮಿಸಿ ವರದಿ ಮಾಡಿಕೊಳ್ಳಲು, ತುರ್ತು ಸೇವೆಯಲ್ಲಿ ಭಾಗವಹಿಸಲು ಸಾರಿಗೆ ಸಂಪರ್ಕ ಸ್ಥಗಿತವಾಗಿರುವುದರಿಂದ ಸಮಸ್ಯೆಯಾಗಿದೆ. ಆಗಮಿಸಿದರೂ ಕಾಲೇಜಿನ ಹಾಸ್ಟೆಲ್, ಮೆಸ್ ಬಂದ್ ಮಾಡಲಾಗಿದೆ, ಸರ್ಕಾರಿ ಹಾಸ್ಟೆಲ್‌ಗಳಲ್ಲಿಯೂ ಉಳಿದುಕೊಳ್ಳುವಂತಿಲ್ಲ, ಖಾಸಗಿ ಪಿಜಿ ವ್ಯವಸ್ಥೆಯೂ ಇಲ್ಲ.

     ಎಸ್‌ಎಸ್‌ಎಲ್‌ಸಿ, ಪಿಯುಸಿ ಮಕ್ಕಳಿಗೆ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಸಿಬ್ಬಂದಿ, ಅಧಿಕಾರಿಗಳು ಖರ್ಚು ಭರಿಸಿ ಹೊರ ಜಿಲ್ಲೆಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಳುಹಿಸುವ ಚಿಂತನೆ ನಡೆಸಿದ್ದೇವೆ. ಮಕ್ಕಳ ಪಾಲಕರೊಂದಿಗೂ ಮಾತುಕತೆ ನಡೆಸಿದ್ದೇವೆ.
    – ರಮೇಶ್ ಉಪ ನಿರ್ದೇಶಕ (ಪ್ರಭಾರ), ಸಮಾಜ ಕಲ್ಯಾಣ ಇಲಾಖೆ

    ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಊರಿಗೆ ತೆರಳಲು ಬಸ್ಸಿನ ಸಮಸ್ಯೆಯಾಗಿರುವುದು ಹೌದು. ಸದ್ಯ ಹಾಸ್ಟೆಲ್‌ನಲ್ಲೇ ವ್ಯವಸ್ಥೆ ಮಾಡುತ್ತೇವೆ. ಊರಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು.
    -ದಯಾನಂದ್
    ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

    ನರ್ಸಿಂಗ್ ವಿದ್ಯಾರ್ಥಿಗಳ ರಜೆ ರದ್ದುಗೊಳಿಸಲು ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ. ಆದರೆ ಬಹುತೇಕ ವಿದ್ಯಾರ್ಥಿಗಳು ಹೊರ ಜಿಲ್ಲೆ ಮತ್ತು ಕೇರಳದವರು. ಸಾರಿಗೆ ವ್ಯವಸ್ಥೆ ಇಲ್ಲದೆ ಅವರು ಬರುವುದು ಹೇಗೆ? ಬಂದರೂ ಇಲ್ಲಿ ವಸತಿಗೆ ವ್ಯವಸ್ಥೆ ಇಲ್ಲ. ಸರ್ಕಾರಿ ಹಾಸ್ಟೆಲ್, ಕಾಲೇಜು ಹಾಸ್ಟೆಲ್‌ಗಳು ಬಂದ್ ಇದೆ.
    – ಡಾ.ರಮೇಶ್ ನಾಯಕ್
    ಚೇರ್ಮನ್, ನ್ಯೂ ಸಿಟಿ ಆಸ್ಪತ್ರೆ ಕಾಲೇಜ್ ಆಫ್ ನರ್ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts