More

    23 ಮಕ್ಕಳ ಒತ್ತೆಯಾಳು ಪ್ರಕರಣ: ಪೊಲೀಸ್​ ಗುಂಡೇಟಿಗೆ ಬಲಿಯಾದ ಆರೋಪಿ ಮನೆಯಲ್ಲಿತ್ತು ಬೆಚ್ಚಿಬೀಳಿಸುವ ಪತ್ರ

    ಫಾರೂಕಾಬಾದ್: ಮಗಳ ಹುಟ್ಟುಹಬ್ಬ ಆಚರಣೆಗೆಂದು ಆಹ್ವಾನದ ಮೇರೆಗೆ ತನ್ನ ಮನೆಗೆ ಆಗಮಿಸಿದ್ದ 23 ಮಕ್ಕಳನ್ನು ಒತ್ತೆಯಾಗಿರಿಸಿಕೊಂಡು ಕೊನೆಗೆ ಪೊಲೀಸರ ಗುಂಡೇಟಿನಿಂದ ಆರೋಪಿ ಸಾವನ್ನಪಿದ್ದಾನೆ. ಅಲ್ಲದೆ, ಸ್ಥಳೀಯರ ಥಳಿತಕ್ಕೊಳಗಾಗಿ ಆತನ ಪತ್ನಿ ಮೃತಪಟ್ಟ ಘಟನೆ ಉತ್ತರ ಪ್ರದೇಶವನ್ನು ಅಕ್ಷರಶಃ ನಡುಗಿಸಿದೆ. ಆರೋಪಿ ಮತ್ತು ಆತನ ಪತ್ನಿ ಮಕ್ಕಳನ್ನೇಕೆ ಒತ್ತೆಯಾಳಾಗಿಟ್ಟುಕೊಂಡರು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.

    ಆರೋಪಿ ಸುಭಾಷ್​ ಬಾಥಮ್​ 2001ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ. ಆತನ ಮೇಲಿನ ಎಲ್ಲ ಅಪರಾಧ ಪ್ರಕರಣಗಳನ್ನು ಕೈಬಿಡಲು ಆರಂಭದಲ್ಲಿ ಬೇಡಿಕೆ ಇಟ್ಟಿದ್ದ ಎಂದು ಎಂದು ತಿಳಿದುಬಂದಿದೆ. ಇನ್ನೊಂದೆಡೆ ಆತನ ಪತ್ನಿ ರುಬಿ ಕಠಾರಿಯಾ ಮಗುವನ್ನು ಬಿಡಬೇಕಾದರೆ ಪ್ರತಿ ಮಗುವಿಗೆ 1 ಕೋಟಿ ರೂ. ಕೇಳಿದ್ದಳು ಎಂದು ಮನೆ ಪರಿಶೀಲನೆ ನಡೆಸಿದ ಪೊಲೀಸರಿಗೆ ಮಾಹಿತಿ ಸಿಕ್ಕಿರುವುದಾಗಿ ತಿಳಿಸಿದ್ದಾರೆ.

    ಆರೋಪಿ ಬಾಥಮ್​ ಜಿಲ್ಲಾಧಿಕಾರಿಗೆ ಪತ್ರವನ್ನು ಬರೆದಿದ್ದ. ಪತ್ರದಲ್ಲಿ ಸರ್ಕಾರದ ಯೋಜನೆ ಅಡಿಯಲ್ಲಿ ಮನೆಯಲ್ಲಿ ಶೌಚಗೃಹ ನಿರ್ಮಿಸಲು ಬಿಡುತ್ತಿಲ್ಲ. ಅಲ್ಲದೆ, ವಿಶೇಷ ಕಾರ್ಯಾಚರಣೆ ಪೊಲೀಸ್​ ತಂಡ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿದ್ದ ಎಂದು ತಿಳಿದುಬಂದಿದೆ.

    2001ರಲ್ಲಿ ಮೇಘನಾಡ್ ಗ್ರಾಮದ​ ವ್ಯಕ್ತಿಯೊಬ್ಬನಿಗೆ ಚರಂಡಿ ವಿಚಾರದಲ್ಲಿ ನಡೆದ ಗಲಾಟೆ ವೇಳೆ ಚಾಕು ಇರಿದು ಕೊಲೆ ಮಾಡಿದ್ದ. ಅಲ್ಲದೆ, ಮೂರು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪವು ಆತನ ಮೇಲಿತ್ತು. ಆದಾಯ ಇಲ್ಲದ ಕಾರಣ ತನ್ನ ಜಮೀನನ್ನು ಬಾಥಮ್​ ಮಾರಾಟ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: 23 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದವ ಪೊಲೀಸರ ಗುಂಡೇಟಿಗೆ ಬಲಿ: ಇದರ ಬೆನ್ನಲ್ಲೇ ಪತ್ನಿಯೂ ಸ್ಥಳೀಯರ ಥಳಿತದಿಂದ ಸಾವು

    ಘಟನೆ ಹಿನ್ನೆಲೆ ಏನು?
    ಗುರುವಾರ ರಾತ್ರಿ ತನ್ನ ಒಂದು ವರ್ಷದ ಮಗುವಿನ ಹುಟ್ಟುಹಬ್ಬವಿದೆ ಎಂದು ಹೇಳಿ ಕೆಲವು ಮಕ್ಕಳನ್ನು ತನ್ನ ಮನೆಗೆ ಬಾಥಮ್​ ಆಹ್ವಾನಿಸಿದ್ದ. ಕರೆಗೆ ಓಗೊಟ್ಟು ಮಕ್ಕಳು ಮನೆಯೊಳಗೆ ಬಂದಾಗ ಎಲ್ಲರನ್ನು ಬಂಧಿಸಿ, ಬಂದೂಕಿನ ಜೀವ ಭಯದಲ್ಲಿರಿಸಿದ್ದ. ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಮಕ್ಕಳು ಇನ್ನೂ ಮನೆಗೆ ಬರದಿದ್ದನ್ನು ನೋಡಿ ಪಾಲಕರು ಬಾಥಮ್​ ಮನೆಯ ಬಾಗಿಲನ್ನು ಬಡಿದಾಗ ತೆರೆಯದಿರುವುದನ್ನು ನೋಡಿ ಏನು ತೊಂದರೆ ಇದೆ ಎಂಬುದನ್ನು ಅರಿತುಕೊಂಡಿದ್ದರು. ಅದಕ್ಕೆ ಪುಷ್ಠಿ ನೀಡುವಂತೆ ಬಾಥಮ್​ ಗುಂಡಿನ ದಾಳಿ ನಡೆಸಿದ್ದ. ಇದರಿಂದ ಭಯಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದರು. ಪೊಲೀಸರು ಬಂದಾಗ ಅವರ ಮೇಲೆಯೂ ಗುಂಡಿನ ದಾಳಿ ನಡೆಸಿ, ಕಚ್ಚಾ ಬಾಂಬ್​ ಎಸೆದಿದ್ದ.

    ಉಗ್ರ ನಿಗ್ರಹ ಪಡೆಯ ಕಮಾಂಡೋಸ್​ ಮತ್ತು ಪೊಲೀಸ್​ ತಂಡ ಸ್ಥಳಕ್ಕೆ ಆಗಮಿಸಿದ್ದವು. ಈ ವೇಳೆ ಸಂಧಾನಕ್ಕೆ ಮುಂದಾಗಿ ಸುಮಾರು ಒಂದು ಗಂಟೆ ಕಾಲ ಫೋನ್​ ಮೂಲಕ ಮಾತುಕತೆ ನಡೆಸಿದರೂ ಫಲಪ್ರದವಾಗಲಿಲ್ಲ. ಬದಲಾಗಿ ಗುಂಡಿನ ದಾಳಿ ನಡೆಸಿದ ಆತ ಪಾನಮತ್ತನಾಗಿದ್ದ ಎಂದು ಊಹಿಸಲಾಗಿತ್ತು. ಬಳಿಕ ಮಧ್ಯರಾತ್ರಿ ದಾಳಿ ನಡೆಸುವ ಯೋಜನೆ ಹಾಕಿಕೊಂಡ ಪೊಲೀಸರು, ಆತನ ಮೇಲೆ ನಿರಂತರ ದಾಳಿ ನಡೆಸಿದಾಗ ಆತ ಗುಂಡಿನ ದಾಳಿಗೆ ಹತ್ಯೆಯಾಗಿದ್ದ. ಬಳಿಕ ಆತನ ಪತ್ನಿಯನ್ನು ಸ್ಥಳೀಯರು ಹಿಡಿದು ಥಳಿಸಿ ಹತ್ಯೆಗೈದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts