More

    ವಾಹನ ವ್ಯವಸ್ಥೆಯಿಲ್ಲದೆ ಆಸ್ಪತ್ರೆ ಸಿಬ್ಬಂದಿ ಸಂಕಷ್ಟ

    ಪುತ್ತೂರು/ ಉಡುಪಿ: ಕೋವಿಡ್ ಆಸ್ಪತ್ರೆಗಳಲ್ಲಿ ನರ್ಸ್‌ಗಳು, ವೈದ್ಯರು , ಟೆಕ್ನೀಶಿಯನ್ಸ್ ಹಾಗೂ ಸಹಾಯಕರ ಸೇವೆ ಅತ್ಯಂತ ಪ್ರಮುಖವಾಗಿದ್ದು , ಆದರೆ ಈ ಸಿಬಂದಿಗಳು ಓಡಾಟಕ್ಕೆ ಸಮರ್ಪಕ ವಾಹನ ಸವಲತ್ತು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಇಲಾಖೆ ಸ್ಟಾಫ್‌ಗಳು, ನರ್ಸ್, ಹೊರ ಗುತ್ತಿಗೆಯ ವೈದ್ಯಕೀಯ ಸಹಾಯಕರಲ್ಲಿ ಬಹಳಷ್ಟು ಮಂದಿ ಗ್ರಾಮೀಣ ಪ್ರದೇಶಗಳಿಂದ ಬರುವವರು. ಕೆಲವರು ವಾಹನ ಇಲ್ಲದೆ ಯಾರ‌್ಯಾರದೋ ಬಳಿ ಡ್ರಾಪ್ ಕೇಳಿ ಕಚೇರಿಗೆ ಬರುತ್ತಿದ್ದಾರೆ. ಮತ್ತೆ ಹಲವರು ಮನೆಯವರ, ಸಂಬಂಧಿಕರ ವಾಹನಗಳಲ್ಲಿ ಪ್ರತಿದಿನ ಡ್ರಾಪ್ ಪಡೆಯುತ್ತಿದ್ದಾರೆ. ಈ ನಡುವೆ ಪೊಲೀಸರಿಗೂ ಉತ್ತರ ಕೊಡಬೇಕಿದೆ ಎನ್ನುವ ದೂರು ನೌಕರರದ್ದು . ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ ಹಾಗೂ ಉಡುಪಿ ಆಸ್ಪತ್ರೆಗಳಲ್ಲಿ ವಾಹನ ಸವಲತ್ತು ಒದಗಿಸಿದ್ದರೂ ಅದು ನಗರಕ್ಕಷ್ಟೇ ಸೀಮಿತವಾಗಿದೆ.
    ಬಂದ್ ಹಿನ್ನೆಲೆಯಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳು ತಮ್ಮ ಸಿಬ್ಬಂದಿ ಕರೆತರಲು ವಿಶೇಷ ವಾಹನದ ವ್ಯವಸ್ಥೆ ಕಲ್ಪಿಸಿವೆ. ಸಮಸ್ಯೆ ಇರುವುದು ಸರ್ಕಾರಿ ಆಸ್ಪತ್ರೆಗಳದ್ದು . ವೆನ್ಲಾಕ್ ಆಸ್ಪತ್ರೆ ವತಿಯಿಂದ ಸಿಬಂದಿಗಳಿಗಾಗಿ 4 ಕೆಎಸ್‌ಆರ್‌ಟಿಸಿ ಬಸ್ ಹಾಗೂ ಇಲಾಖಾ ವಾಹನ ವ್ಯವಸ್ಥೆ ಮಾಡಲಾಗಿದೆ. ಆದರೆ ಇದು ಸೀಮಿತ ಪ್ರದೇಶಕ್ಕೆ ಮಾತ್ರ ಸಂಚರಿಸುವುದರಿಂದ ಸುಳ್ಯ, ಬೆಳ್ತಂಗಡಿ ಭಾಗದ ಸಿಬಂದಿಗಳಿಗೆ ಸಮಸ್ಯೆಯಾಗುತ್ತಿದೆ. ಇರುವ ವಾಹನ ವ್ಯವಸ್ಥೆಯಲ್ಲೂ ಲೆಕ್ಕಕ್ಕಿಂತ ಜಾಸ್ತಿ ಸಿಬಂದಿಯನ್ನು ಕರೆದೊಯ್ಯಲಾಗುತ್ತಿದೆ ಎನ್ನುವ ದೂರುಗಳು ಬಂದಿವೆ.

    ಸುಳ್ಯ-ಬೆಳ್ತಂಗಡಿಗೆ ವಾಹನ ಇಲ್ಲ: ಜಿಲ್ಲಾ ಆಸ್ಪತ್ರೆ ವೆನ್ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಗಳಲ್ಲಿ ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಗ್ರೂಪ್- ಡಿ ನೌಕರರು, ದಿನಗೂಲಿ ನೌಕರರು ಬಹುತೇಕ ಜನ ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದವರಾಗಿದ್ದು, ಸ್ವಂತ ವಾಹನ ಅಥವಾ ಬಸ್ ಮೂಲಕ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ಬಂದ್ ಹಿನ್ನೆಲೆಯಲ್ಲಿ ಇವರು ಕರ್ತವ್ಯಕ್ಕೆ ರಜೆ ಹಾಕಿದ್ದರೂ, ತುರ್ತು ಹಾಜರಾಗುವಂತೆ ಸರ್ಕಾರ ಸೂಚಿಸಿದೆ. ಆದರೆ ಮನೆಯಿಂದ ಹೋಗಿ ಬರಲು ವಾಹನ ಸಂಪರ್ಕಕ್ಕೆ ಸಮಸ್ಯೆ.

    ಉಡುಪಿಯಲ್ಲೂ ಇದೆ ಸಮಸ್ಯೆ: ಉಡುಪಿ: ಜಿಲ್ಲೆಯಲ್ಲೂ ನರ್ಸ್, ವೈದ್ಯರೊಂದಿಗೆ ಆರೋಗ್ಯ ಇಲಾಖೆ ಇತರೆ ವರ್ಗದ ನೌಕರರಿಗೆ ಓಡಾಟ ದೊಡ್ಡ ಸಮಸ್ಯೆಯಾಗಿದೆ. ಉಡುಪಿ ಜಿಲ್ಲಾ ಕೇಂದ್ರ ಸೇರಿದಂತೆ ಉಡುಪಿ, ಕುಂದಾಪುರ, ಕಾರ್ಕಳ ಮೂರು ಕಡೆಗಳಲ್ಲೂ ಈ ಸಮಸ್ಯೆ ಇದೆ.

    ಆಸ್ಪತ್ರೆ ಸಿಬ್ಬಂದಿ ಸಂಚಾರಕ್ಕೆ ವಿಶೇಷ ವಾಹನದ ವ್ಯವಸ್ಥೆ ಮಾಡುವಂತೆ ಆಯಾ ಆಸ್ಪತ್ರೆ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಲವು ಸಿಬ್ಬಂದಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ, ವಾಹನ ಸೌಲಭ್ಯ ನೀಡುವುದು ನಮ್ಮ ಕರ್ತವ್ಯ. ಅದಕ್ಕಾಗಿ ಸಿಬ್ಬಂದಿಯ ಕರ್ತವ್ಯಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

    ರಾಮಚಂದ್ರ ಬಾಯರಿ
    ದ.ಕ ಜಿಲ್ಲಾ ಆರೋಗ್ಯಾಧಿಕಾರಿ

    ತುರ್ತು ಸಂದರ್ಭ ಆರೋಗ್ಯ ಇಲಾಖೆ ನೌಕರರು ರಜೆ ಇಲ್ಲದೆ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ವಾಹನ ವ್ಯವಸ್ಥೆ ಇಲ್ಲದ, ದೂರದ ಊರುಗಳಿಂದ ಬರುವ ನೌಕರರು ಬರುವುದು, ಹೋಗುವುದು ತೀವ್ರ ಸಮಸ್ಯೆಯಾಗಿದೆ. ಬಸ್ ಅಥವಾ ಇತರೆ ಇಲಾಖೆ ವಾಹನಗಳನ್ನು ಪಡೆಯಬಹುದು. ಈ ಬಗ್ಗೆ ಕಾಳಜಿ ವಹಿಸಿ, ಸೂಕ್ತ ವಾಹನ ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು.

    ಸುಬ್ರಮಣ್ಯ ಶೇರಿಗಾರ್
    ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ ಉಡುಪಿ ಜಿಲ್ಲೆ.

    ನೌಕರರಿಗೆ ಮನೆ ಕಚೇರಿಗೆ ಓಡಾಟಕ್ಕೆ ಸಮಸ್ಯೆಯಾಗದಂತೆ ಎಲ್ಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೆ ಬೇರೆ ಇಲಾಖೆ ವಾಹನಗಳನ್ನು ಆರೋಗ್ಯ ಇಲಾಖೆ ಸೇವೆಗೆ ಪಡೆಯಲಾಗಿದೆ. ಮಿನಿ ಬಸ್ಸುಗಳನ್ನು ಪಡೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ.

    ಡಾ.ಪ್ರಶಾಂತ್ ಭಟ್
    ಉಡುಪಿ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts