More

    ವಿಜಯನಗರ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ನಿಶ್ಚಿತ- ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಇಮಾಮ್ ನಿಯಾಜಿ ಹೇಳಿಕೆ

    ಹೊಸಪೇಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ನನಗೆ ಕಾಂಗ್ರೆಸ್ ಟಿಕೇಟ್ ಸಿಗುವ ಸಂಪೂರ್ಣ ವಿಶ್ವಾಸವಿದೆ. ಟಿಕೇಟ್ ಸಿಗದಿದ್ದರೂ ಈ ಬಾರಿ ನನ್ನ ಸ್ಪರ್ಧೆ ನಿಶ್ಚಿತ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ ಸ್ಪಷ್ಟಪಡಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವು ವರ್ಷಗಳಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ದುಡಿಯುತ್ತಿದ್ದೇನೆ. ಪಕ್ಷದ ಎಲ್ಲ ಕಾರ್ಯಕ್ರಮಗಳು, ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ. ಸದ್ಯ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ನಗರಸಭೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಹಗಲಿರುಳು ಶ್ರಮಿಸುತ್ತಿದ್ದೇನೆ. ಆದರೂ, ಬೇರೆ ಬೇರೆ ಕಾರಣಗಳಿಂದಾಗಿ ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದೆ. ಮುಂದಿನ ಬಾರಿ ಅವಕಾಶ ನೀಡುವುದಾಗಿ ಪಕ್ಷದ ವರಿಷ್ಠರು ಭರವಸೆ ನೀಡಿದ್ದರು. ಈ ಬಾರಿ ಕಾಂಗ್ರೆಸ್ ಬಿ ಫಾರ್ಮ್ ದೊರೆಯುವ ಬಗ್ಗೆ ವಿಶ್ವಾಸವಿದೆ ಎಂದರು.

    ಈ ಹಿಂದೆಯೂ ಹೊರಗಿನವರಿಗೆ ಅವಕಾಶ ನೀಡಲಾಗಿತ್ತು. ಆದರ ಫಲಿತಾಂಶ ಏನಾಯ್ತು ಎಂಬುದು ಹೈಕಮಾಂಡ್‌ಗೆ ಮನವರಿಕೆಯಾಗಿದೆ. ಈ ಬಾರಿ ಅಂತಹ ಪ್ರಯತ್ನಗಳಿಗೆ ಪಕ್ಷ ಮಣೆ ಹಾಕುವುದಿಲ್ಲ. ವಿಜಯನಗರ ಕ್ಷೇತ್ರದಲ್ಲಿ ಮುಸ್ಲಿಂ, ಅಲ್ಪಸಂಖ್ಯಾತರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ವಿಜಯನಗರ ಮತ್ತು ಹರಪನಹಳ್ಳಿ ಮಾತ್ರ ಸಾಮಾನ್ಯ ಕ್ಷೇತ್ರಗಳು. ಸಮಾನತೆ, ಸಾಮಾಜಿಕ ನ್ಯಾಯದಲ್ಲಿ ವಿಶ್ವಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದ ನನಗೆ ಅವಕಾಶ ನೀಡಲಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಸಿ.ವೀರಸ್ವಾಮಿ, ವೆಂಕೋಬ ಹಾನಗಲ್, ಸತ್ಯನಾರಾಯಣ, ಅಣ್ಣಾಮಲೈ, ಶಿವರಾಮಪ್ಪ, ಹನುಮಂತಪ್ಪ, ಪಾಂಡುರಂಗ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts