More

    18ನೇ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ತಾಲೂಕು ಪಂಚಾಯಿತಿ ಸದಸ್ಯರು

    ಹೊಸಪೇಟೆ: ಕೃಷಿ ಸಾಗುವಳಿದಾರರಿಗೆ ರಿಯಾಯಿತಿ ದರದಲ್ಲಿ ಬೀಜ ವಿತರಣೆ, ಹೊಲಗಳ ಬದುಗಳಲ್ಲೂ ಮೇವು ಬೆಳೆಸಲು ಕ್ರಮ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ, ತೋಟಗಾರಿಕೆ ಬೆಳೆಗಳ ಜಾಗೃತಿ ಸಭೆ ನಡೆಸದ ಅಧಿಕಾರಿಗಳ ವಿರುದ್ಧ ಗರಂ, ವೈದ್ಯರಿಲ್ಲದ ಪಶು ಚಿಕಿತ್ಸಾಲಯದಲ್ಲಿ ಕೌಂಪೌಂಡರ್‌ನಿಂದ ಅವಧಿ ಮುಗಿದ ಮಾತ್ರೆಗಳ ವಿತರಣೆಗೆ ಸದಸ್ಯರಿಂದ ಅಧಿಕಾರಿಗಳ ತರಾಟೆ.

    ನಗರದ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಎನ್.ನಾಗವೇಣಿ ಬಸವರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ 18ನೇ ಸಾಮಾನ್ಯ ಸಭೆಯಲ್ಲಿ ಮೇಲಿನ ಅಂಶಗಳು ತೀವ್ರ ಚರ್ಚೆಗೊಳಪಟ್ಟವು. ಸದಸ್ಯ ಬಿ.ಎಸ್. ರಾಜಪ್ಪ ಮಾತನಾಡಿ, ಗ್ರಾಮೀಣ ಭಾಗದ ರೈತ ಸಂಪರ್ಕ ಕೇಂದ್ರಗಳಲ್ಲಿ ಒಂದು ತಿಂಗಳ ಬಿತ್ತನೆ ಮುನ್ನ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ವಿತರಿಸಬೇಕು, ಕೃಷಿ ತಂತ್ರಾಂಶಗಳ ತಾಂತ್ರಿಕ ತೊಂದರೆಯಿಂದಾಗಿ ಅನೇಕ ರೈತರು ನೋಂದಣಿಯಿಂದ ವಂಚಿತರಾಗಿದ್ದಾರೆ. ಇವರನ್ನೂ ಸೌಲಭ್ಯಗಳಿಗೆ ಪರಿಗಣಿಬೇಕು ಎಂದು ಆಗ್ರಹಿಸಿದರು.

    ಕೃಷಿ ಸಹಾಯಕ ನಿರ್ದೇಶಕ ಕೆ.ವಾಮದೇವ ಪ್ರತಿಕ್ರಿಯಿಸಿ, ಬಿತ್ತನೆ ಅವಧಿಗೆ ಒಂದು ತಿಂಗಳ ಮುನ್ನ ಮರಿಯಮ್ಮನಹಳ್ಳಿ ಭಾಗದಲ್ಲಿ ಎರಡು ಕೇಂದ್ರಗಳಲ್ಲಿ ಬೀಜ ವಿತರಿಸಲಾಗಿದೆ. 5 ಎಕರೆ ಉಳ್ಳವರು ಕನಿಷ್ಠ ಎರಡು ಬೆಳೆ ಬೆಳೆಯಬೇಕು ಎಂದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಾಜೇಂದ್ರ ಮಾತನಾಡಿ, ತಾಲೂಕಿನ 117ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರದಂತೆ ಒಟ್ಟು 88 ಹೆಕ್ಟೇರ್‌ಗೆ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ವಿತರಿಸಲಾಗುವುದು. ಹಣ್ಣು, ತರಕಾರಿ ಬೆಳೆದ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

    ಪಶುಪಾಲನಾ ಮತ್ತು ವಶುವೈದ್ಯಸೇವೆಗಳ ಸಹಾಯಕ ನಿರ್ದೇಶಕ ಬಸವರಾಜ ಬೆಣ್ಣೆ ಇಲಾಖೆಯ ವರದಿ ಒಪ್ಪಿಸುತ್ತಿದ್ದಂತೆ, ಸದಸ್ಯ ಬಿ.ಎಸ್.ರಾಜಪ್ಪ ಮಾತನಾಡಿ, ಚಿಲಕನಹಟ್ಟಿಯಲ್ಲಿ ರಾಸುಗಳನ್ನು ಚಿಕಿತ್ಸೆಗೆಂದು ಕರೆದೊಯ್ದರೆ ಪಶು ವೈದ್ಯರೇ ಇರುವುದಿಲ್ಲ. ಕಾಂಪೌಂಡರ್ ಅವಧಿ ಮುಗಿದ(ಎಕ್ಸ್‌ಫೈರ್ಡ್‌)ಮಾತ್ರೆಗಳನ್ನು ನೀಡುತ್ತಿದ್ದಾರೆ. ಪಶುಗಳು ಸಾವಿಗೀಡಾದರೆ ಯಾರು ಹೊಣೆ?ಎಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಡಾ.ಬಸವರಾಜ ಬೆಣ್ಣೆ ಪ್ರತಿಕ್ರಿಯಿಸಿದರು.

    ಬಿಇಒ ಎಲ್.ಡಿ.ಜೋಷಿ ಇಲಾಖೆ ವರದಿ ವಿವರಿಸುತ್ತ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 17ರ ಬದಲಿಗೆ 22 ಕೇಂದ್ರಗಳನ್ನು ಗುರುತಿಸಿ, ಹೆಚ್ಚುವರಿಯಾಗಿ 200 ಕೊಠಡಿಗಳನ್ನು ಪಡೆದು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.

    ಗ್ರಾಮೀಣ ವಿದ್ಯಾರ್ಥಿನಿಯರು ಹೈಸ್ಕೂಲ್ ಶಿಕ್ಷಣದಿಂದ ವಂಚಿತರಾಗದಂತೆ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ವಿಳಂಬವಾಗುತ್ತಿದೆ ಏಕೆ ಎಂದು ತಾಪಂ ನೂತನ ಅಧ್ಯಕ್ಷೆ ನಾಗವೇಣಿ ಬಸವರಾಜ್ ಬಿಇಒ ಎಲ್.ಡಿ.ಜೋಷಿಯನ್ನು ಪ್ರಶ್ನಿಸಿದರು. ಶಾಲೆಗಳ ಮೇಲ್ದರ್ಜೇಗೇರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಶೀಘ್ರ ಈಡೇರಬಹುದು ಎಂದು ಬಿಇಒ ಪ್ರತಿಕ್ರಿಯಿಸಿದರು.

    ತಾಪಂ ಉಪಾಧ್ಯಕ್ಷ ಮಜ್ಜಿಗಿ ಶಿವಪ್ಪ, ಸ್ಥಾಯಿಸಮಿತಿ ಅಧ್ಯಕ್ಷೆ ಸುಬ್ಬಮ್ಮ ನಾಯಕರ್, ನೋಡಲ್ ಅಧಿಕಾರಿ ಎಸ್.ಎಚ್.ಶರಣಬಸಪ್ಪ, ಇಒ ಆರ್.ಕೆ.ಶ್ರೀಕುಮಾರ್ ಇದ್ದರು. ವಿವಿಧ ಇಲಾಖೆಯ ಅಧಿಕಾರಿಗಳು, ಪಿಡಿಒಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts