More

    ಶೋಷಿತರ ಧ್ವನಿಯಾಗಿ ಸರ್ಕಾರದ ಗಮನ ಸೆಳೆದ ಮಾಧ್ಯಮ: ಸ್ನೇಹ ಸಂಸ್ಥೆಯ ಮುಖ್ಯಸ್ಥ ರಾಮಾಂಜಿನಪ್ಪ ಅಭಿಪ್ರಾಯ

    ಹೊಸಪೇಟೆ: ಪತ್ರಕರ್ತರ ಮೇಲಿನ ದೌರ್ಜನ್ಯ ತಡೆ ದಿನದ ಅಂಗವಾಗಿ ಸ್ನೇಹ ಸಂಸ್ಥೆ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಕುರಿತ ಸಂವಾದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಸುಂಕಮ್ಮ ಉದ್ಘಾಟಿಸಿದರು.

    ಸ್ನೇಹ ಸಂಸ್ಥೆಯ ಮುಖ್ಯಸ್ಥ ರಾಮಾಂಜಿನಪ್ಪ ಮಾತನಾಡಿ, ಮಾಧ್ಯಮ ಎಂಬುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಸಮಾಜವನ್ನು ತಿದ್ದಿ ತೀಡುವ ಬಹುದೊಡ್ಡ ಜವಾಬ್ದಾರಿ ಮಾಧ್ಯಮದ ಮೇಲಿದೆ. ನಿರ್ಲಕ್ಷಿತರನ್ನು ಮುಖ್ಯವಾಹಿನಿಗೆ ತರುವುದು, ಶೋಷಿತರ ಧ್ವನಿಯಾಗಿ ಸರ್ಕಾರದ ಗಮನ ಸೆಳೆಯುವುದು ಮತ್ತು ಅಕ್ರಮ, ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವಲ್ಲಿ ಮಾಧ್ಯಮದ ಕೊಡುಗೆ ಅಪಾರ ಎಂದು ಬಣ್ಣಿಸಿದರು.

    2009ರಲ್ಲಿ ಫಿಲಿಫೈನ್ಸ್‌ನಲ್ಲಿ ನಡೆದ ದಾಳಿಯಲ್ಲಿ 32 ಜನ ಮಾಧ್ಯಮ ಪ್ರತಿನಿಧಿಗಳ ಹತ್ಯೆಯಾಗಿತ್ತು. ಅದರ ಸ್ಮರಣಾರ್ಥ ನ.2 ರಂದು ಪತ್ರಕರ್ತರ ಮೇಲಿನ ದೌರ್ಜನ್ಯ ತಡೆ ದಿನವನ್ನಾಗಿ ವಿಶ್ವ ಸಂಸ್ಥೆ ಘೊಷಿಸಿದೆ. ವಿಶ್ವಸಂಸ್ಥೆ ಮಾಹಿತಿ ಪ್ರಕಾರ 2006 ರಿಂದ 2020ರ ಮಧ್ಯೆ 1200 ಪತ್ರಕರ್ತರು ಕೊಲೆಯಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಕಾನಿಪ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಮಾತನಾಡಿ, ದೇವದಾಸಿ ಪದ್ಧತಿ ಸಮಾಜಕ್ಕೆ ಅಂಟಿಕೊಂಡಿರುವ ದೊಡ್ಡ ಪಿಡುಗು. ಶಿಕ್ಷಣದಿಂದ ಅದನ್ನು ತೊಲಗಿಸಲು ಸಾಧ್ಯ ಎಂದು ಹೇಳಿದರು.

    ಬಿಜೆಪಿ ಮುಖಂಡ ಜಗನ್ ಮಾತನಾಡಿ, ದೇವದಾಸಿ ಎಂಬುದು ಸಮಾಜಕ್ಕೆ ಅಂಟಿತ ಕಳಂಕ. ಅನೇಕರು ತಮಗೆ ಅರಿವಿಲ್ಲದೇ ದೇವದಾಸಿ ಪದ್ಧತಿಗೆ ಬಲಿಯಾಗಿದ್ದಾರೆ. ಯಾರೋ ಸೃಷ್ಟಿಸಿರುವ ದೇವದಾಸಿ ಪದ್ಧತಿ ಮುಗ್ಧ ಮಹಿಳೆಯರಿಗೆ ಶಾಪವಾಗಿ ಪರಿಣಮಿಸಿದೆ. ಅದರಿಂದ ಮುಕ್ತರಾಗಲು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಒದಗಿಸಬೇಕು ಎಂದು ಸಲಹೆ ನೀಡಿದರು.

    ಇದೇ ವೇಳೆ ದೇವದಾಸಿ ಮಹಿಳೆಯರು, ಅವರ ಮಕ್ಕಳು ಎದುರಿಸುತ್ತಿರುವ ಶೈಕ್ಷಣಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ತೋಡಿಕೊಂಡರು. ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಕೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳ ಗಮನ ಸೆಳೆಯುವಂತೆ ಬಸಮ್ಮ, ಪಲ್ಲವಿ ಮತ್ತಿತರರು ಮನವಿ ಮಾಡಿದರು.

    ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ, ಖಜಾಂಚಿ ಅನಂತ ಜೋಶಿ, ಪತ್ರಕರ್ತ ಕೃಷ್ಣ ಎನ್.ಲಮಾಣಿ, ಜಯಪ್ಪ ಹಾಗೂ ಸ್ನೇಹ ಸಂಸ್ಥೆಯ ಸ್ವಯಂ ಸೇವಕರು ಇತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts