More

    ಮಗಳ ಧ್ವನಿಗಾಗಿ ಕಾಯುತ್ತಿರುವ ಪಾಲಕರು

    ಹೊಸಪೇಟೆ: ತಮ್ಮ ಮೊಬೈಲ್‌ಗೆ ಬರುವ ಪ್ರತಿ ಕರೆ ಯೂಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ತಮ್ಮ ಮಗಳದ್ದೇ ಆಗಿರಬಹುದೆಂಬ ಕಾತರದಲ್ಲಿ ಇಲ್ಲಿನ ಎಂ.ಜೆ.ನಗರದ ನಿವಾಸಿ ಬಿ.ಮಂಜುಳಾ ಮತ್ತು ಮಲ್ಲಿಕಾರ್ಜುನ ದಂಪತಿ ಮೊಬೈಲ್‌ಗಳನ್ನು ಕೈಯಲ್ಲೇ ಹಿಡಿದು ಕಣ್ಣೀರುಡುತ್ತಲೆ ಕಾಯುತ್ತಿದ್ದಾರೆ.

    ವಿಜಯವಾಣಿಯೊಂದಿಗೆ ಮಾತನಾಡಿದ ವಿದ್ಯಾರ್ಥಿ ನಂದಿನಿಯ ತಾಯಿ ಬಿ.ಮಂಜುಳಾ, ಯೂಕ್ರೇನ್‌ನಲ್ಲಿ ಎಂಬಿಬಿಎಸ್ ಓದುತ್ತಿರುವ ನಮ್ಮ ಮಗಳು ಬಂಕರ್‌ಗಳಲ್ಲಿ ಸಿಲುಕಿಕೊಂಡಿದ್ದಾಳೆ, ಅಲ್ಲಿ ಮದ್ದು ಗುಂಡಿನ ಸದ್ದು ಅವರನ್ನು ಧೈರ್ಯಗುಂದಿಸಿವೆ. ಅಲ್ಲಿನ ಮಾಹಿತಿಯನ್ನು ತಿಳಿಯೋಣವೆಂದರೆ ಸಿಗ್ನಲ್ ಸಿಗುತ್ತಿಲ್ಲ. ಅವರಿಗೆ ಸಿಗ್ನಲ್ ಸಿಕ್ಕಾಗ ನಮ್ಮೊಂದಿಗೆ ಮಾತನಾಡಿ ನಮಗೆ ಧೈರ್ಯ ತುಂಬುವ ಸಲುವಾಗಿ ಸುರಕ್ಷಿತವಾಗಿದ್ದೇನೆ ಎಂದು ಹೇಳುವ ಧ್ವನಿಯಲ್ಲೇ ಅವಳ ಆತಂಕ ಅಡಗಿದೆ. ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅಲ್ಲಿನ ಸೈರನ್‌ಗೆ ಹೆದರಿ ಎಲ್ಲಡಗಿದ್ದಾರೆ ಎಂಬುದೆ ತಿಳಿಯದಂತಾಗಿದೆ. ಶನಿವಾರ ರಾತ್ರಿ ಕರೆ ಮಾಡಿದ್ದಳು. ನಂತರ ಸಂಪರ್ಕಕ್ಕೆ ಪ್ರಯತ್ನಿಸಿದರೆ ಸಿಗ್ನಲ್ ಸಿಗುತ್ತಿಲ್ಲ. ಭಾನುವಾರ ಬೆಳಗ್ಗೆ 11ಕ್ಕೆ ಕರೆ ಬಂದಿತ್ತು. ಸುರಕ್ಷಿತವಾಗಿದ್ದೇವೆ ಎಂದಷ್ಟೇ ಹೇಳುತ್ತಾಳೆ. ಅಲ್ಲಿ ಎದುರಿಸುತ್ತಿರುವ ಸ್ಥಿತಿ ಬಗ್ಗೆ ನಮ್ಮ ಬಳಿ ಹೇಳಿಕೊಳ್ಳುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮ್ಮ ಮಕ್ಕಳನ್ನು ಕೂಡಲೇ ಕರೆತಂದು ನಮ್ಮ ಮನಗೆ ಕಳುಹಿಸಬೇಕು. ಈವರೆಗೂ ನಮ್ಮನ್ನು ಜಿಲ್ಲಾಡಳಿತವಾಗಲಿ, ಅಧಿಕಾರಿಗಳಾಗಲಿ ಸಂಪರ್ಕಿಸಿಲ್ಲ ಎಂದು ಕಣ್ಣೀರಿಟ್ಟರು.

    ಯೂಕ್ರೇನ್‌ನ ಜಾಫ್ರೋಜಿಯಾಸ್ ಮೆಡಿಕಲ್ ಕಾಲೇಜಿನಲ್ಲಿ ಮೂರು ವರ್ಷಗಳಿಂದ ಎಂಬಿಬಿಎಸ್ ಓದುತ್ತಿದ್ದಾಳೆ. ಕರೊನಾ ಸಂದರ್ಭದಲ್ಲಿ ಆನ್‌ಲೈನ್ ಇದ್ದುದರಿಂದ ಮನೆಯಲ್ಲೆ ಒಂದು ವರ್ಷ ಇದ್ದಳು. ಎಂಬಿಬಿಎಸ್ ಓದಬೇಕೆನ್ನುವ ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಗತ್ಯ ಸೌಕರ್ಯ ಮತ್ತು ಸೌಲಭ್ಯ ಕಲ್ಪಿಸಿಕೊಟ್ಟಲ್ಲಿ ವಿದೇಶಗಳಿಗೆ ಕಲಿಕೆಗೆ ತೆರಳುವುದನ್ನು ತಡೆಯಬಹುದು. ಮಗಳಿಗಾಗಿ ಊಟ ಮಾಡದೆ ನಂದಿನಿಯ ತಾಯಿ ಕಣ್ಣೀರಲ್ಲೇ ಕಾಲ ಕಳೆಯುತ್ತಿದ್ದಾಳೆ ಎಂದು ವಿದ್ಯಾರ್ಥಿನಿಯ ಸೋದರ ಮಾವ ಮಂಜುನಾಥ ಕಣ್ಣೀರಿಟ್ಟು, ನಾಡಿನ ಮಕ್ಕಳನ್ನು ಕೂಡಲೇ ಕರೆತನ್ನಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts