More

    ಎರಡು ತಿಂಗಳಿಂದ ವಿಧಿಸಿದ್ದ ನಿರ್ಬಂಧ ತೆರವು: ಹಂಪಿಯತ್ತ ಪ್ರವಾಸಿಗರ ಹೆಜ್ಜೆ

    ಹೊಸಪೇಟೆ: ಕೋವಿಡ್ ಎರಡನೇ ಅಲೆಯಿಂದಾಗಿ ಕಳೆದ ಎರಡು ತಿಂಗಳಿಂದ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಿದ್ದರಿಂದ ಪ್ರವಾಸಿಗರು ಗುರುವಾರ ಹಂಪಿಗೆ ಭೇಟಿ ನೀಡಿ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ಮೊದಲ ದಿನವೇ ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ಕೇರಳ, ಮಹಾರಾಷ್ಟ್ರದಿಂದ ಪ್ರವಾಸಿಗರು ಆಗಮಿಸಿದ್ದರು.

    ಬೆಳಗ್ಗೆ ಆರರಿಂದ ಸಂಜೆ ಐದರವರೆಗೆ ಸ್ಮಾರಕಗಳ ವೀಕ್ಷಣೆಗೆ ಅವಕಾಶವಿದೆ. ಬೆಳಗ್ಗೆಯೇ ಹಂಪಿಯತ್ತ ಪ್ರವಾಸಿಗರು ದೌಡಾಯಿಸಿದ್ದರು. ವಿಜಯ ವಿಠ್ಠಲ, ಸಪ್ತಸ್ವರ ಮಂಟಪ, ಕಲ್ಲಿನ ರಥ, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ಸಾಸಿವೆಕಾಳು ಮತ್ತು ಕಡಲೆ ಕಾಳು ಗಣಪ, ಉಗ್ರನರಸಿಹ ಸ್ಮಾರಕ ಬಳಿ ಹೆಚ್ಚಿನ ಪ್ರವಾಸಿಗರು ಕಂಡು ಬಂದರು. ಸ್ಮಾರಕಗಳ ಪ್ರವೇಶ ದ್ವಾರದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಭದ್ರತಾ ಸಿಬ್ಬಂದಿ, ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಿದರು. ಕರೊನಾ ಮಾರ್ಗಸೂಚಿಯಂತೆ ಒಬ್ಬೊಬ್ಬರನ್ನೇ ಒಳಗೆ ಬಿಡಲಾಯಿತು. ನಾಲ್ಕು ಕಡೆ ಟಿಕೆಟ್ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಆನ್‌ಲೈನ್ ಟಿಕೆಟ್ ವ್ಯವಸ್ಥೆಯೂ ಇದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಇನ್ನೂ ಅವಕಾಶ ನೀಡದ ಕಾರಣ ಪ್ರವಾಸಿಗರು ಗೋಪುರದ ಬಳಿಯ ದ್ವಾರದ ಬಳಿ ನಿಂತು ದೇವರಿಗೆ ನಮಸ್ಕರಿಸಿ ತೆರಳುತ್ತಿದ್ದರು.

    ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳಕಾಲ ಮನೆಯಲ್ಲಿದ್ದೆವು. ಸೋಂಕು ತಗ್ಗುತ್ತಿದ್ದಂತೆ ಸ್ಮಾರಕ ವೀಕ್ಷಣೆಗೆ ಅವಕಾಶ ನೀಡಿದ್ದರಿಂದ ಮೊದಲ ದಿನವೇ ಕುಟುಂಬ ಸದಸ್ಯರೊಂದಿಗೆ ಬಂದು ವೀಕ್ಷಿಸಿದೆವು ಎಂದು ಪ್ರವಾಸಿಗ ಸಿದ್ಧಾರ್ಥ ಖುಷಿ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts