More

    ಹೊಸಕೋಟೆಗೂ ಇತ್ತು ಲೋಕಸಭಾ ಕ್ಷೇತ್ರದ ಗತ್ತು

    ಆರ್​​.ತುಳಸಿಕುಮಾರ್​

    ಬೆಂಗಳೂರು: ರಾಜ್ಯದ ರಾಜಕೀಯ ಇತಿಹಾಸದಲ್ಲಿ 80 ಹಾಗೂ 90ರ ದಶಕದಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿತ್ತು. ಪ್ರತೀ ಚುನಾವಣೆಯಲ್ಲೂ ಕಾಂಗ್ರೆಸ್ ಹಾಗೂ ಜನತಾ ಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರ ನಡುವಿನ ಹೊಡೆದಾಟ ನಾಡಿನೆಲ್ಲೆಡೆ ಸುದ್ದಿಯಾಗುತ್ತಿತ್ತು. ಇಂತಹ ಹಿನ್ನೆಲೆಯುಳ್ಳ ಹೊಸಕೋಟೆ ಹಿಂದೊಮ್ಮೆ ಲೋಕಸಭಾ ಕ್ಷೇತ್ರವಾಗಿ ಗಮನ ಸೆಳೆದಿತ್ತು.

    ಮೈಸೂರು ರಾಜ್ಯವಾಗಿದ್ದಾಗ 1967ರ ಸಂಸತ್ ಚುನಾವಣೆ ವೇಳೆ ಮೊದಲ ಬಾರಿಗೆ ಹೊಸಕೋಟೆಯು ಲೋಕಸಭಾ ಕ್ಷೇತ್ರವಾಗಿ ರೂಪುಗೊಂಡಿತ್ತು. ಈ ಕ್ಷೇತ್ರವು ಈಗಿನ ಬಿಬಿಎಂಪಿಯ ಉತ್ತರ ಭಾಗದ ಹೊರವಲಯದ ಕೆಲ ಭಾಗ, ಹಾಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುತೇಕ ಪ್ರದೇಶ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ದಕ್ಷಿಣ ಭಾಗದ ಪ್ರದೇಶವನ್ನು ಒಳಗೊಂಡಿತ್ತು. ಮತದಾರರ ಸಂಖ್ಯೆ 5.03 ಲಕ್ಷದಷ್ಟಿತ್ತು. ಜತೆಗೆ ಸ್ಟ್ ಕ್ಲಾಸ್ ಮತದಾನ (ಶೇ. 60.83) ಕೂಡ ಆಗಿತ್ತು.

    ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸ್ವಾಂತ್ರ್ಯ ಹೋರಾಟಗಾರ ಎಂ.ವಿ.ಕೃಷ್ಣಪ್ಪ ಅವರು 1,60,374 ಮತಗಳನ್ನು ಪಡೆದು ಸಮೀಪ ಪ್ರತಿಸ್ಪರ್ಧಿ ಎಸ್.ಎ. ರೆಡ್ಡಿ (98,578 ಮತ) ಅವರನ್ನು 61,796 ಮತಗಳ ಅಂತರದಿಂದ ಸೋಲಿಸಿ ಹೊಸಕೋಟೆ ಕ್ಷೇತ್ರದ ಮೊದಲ ಸಂಸದರಾಗಿ ಆಯ್ಕೆಯಾಗಿದ್ದರು.

    ದಾಖಲೆ ಮತಗಳ ಅಂತರದ ಗೆಲುವು:

    1971ರ ಚುನಾವಣೆಯಲ್ಲೂ ಹೊಸಕೋಟೆ ಕ್ಷೇತ್ರವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಆ ಚುನಾವಣೆಯಲ್ಲಿ 5.75 ಲಕ್ಷ ಮತದಾರರಿದ್ದರು. ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಿದ್ದ ಎಂ.ವಿ.ಕೃಷ್ಣಪ್ಪ ಅವರು ಕಾಂಗ್ರೆಸ್ ಓ ಪಕ್ಷದ ಹುರಿಯಾಳು ಎಂ.ಚಂದ್ರಶೇಖರ್ (53,610 ಮತ) ಅವರನ್ನು 1.86 ಲಕ್ಷ ಮತಗಳ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
    ಈ ಎರಡೂ ಚುನಾವಣೆಗಳ ಬಳಿಕ ಹೊಸಕೋಟೆ ಕ್ಷೇತ್ರ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಬೆಂಗಳೂರು ಉತ್ತರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ವಿಲೀನವಾಯಿತು. ವಿಶೇಷವೆಂದರೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒಮ್ಮೆ ಹೊಸಕೋಟೆ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ಅವರು ಬೆಂಗಳೂರಿನಿಂದ ಹೊಸಕೋಟೆಗೆ ಸೈಕಲ್‌ನಲ್ಲಿ ತೆರಳಿ ಪ್ರಚಾರ ಕೈಗೊಂಡಿದ್ದರು. ಜನರಿಂದ ದೇಣಿಗೆ ಪಡೆದಿದ್ದ ಅವರು ಚುನಾವಣೆಯಲ್ಲಿ 10 ಸಾವಿರ ಮತ ಪಡೆದಿದ್ದರು.

    ಮೇಲ್ಮನೆ ಪ್ರವೇಶಿಸಿದ್ದ ಎಂವಿಕೆ:

    ಎಂ.ವಿ.ಕೃಷ್ಣಪ್ಪ ಅವರು 1962ರಲ್ಲಿ ತುಮಕೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ವೇಳೆ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ಪಕ್ಷದ ಹಿರಿಕರೊಬ್ಬರಿಗೆ ಪರ್ಯಾಯ ವ್ಯವಸ್ಥೆಗಾಗಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆಗ ಕೃಷ್ಣಪ್ಪ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿ ಎಸ್.ನಿಜಲಿಂಗಪ್ಪ ಸಂಪುಟದಲ್ಲಿ ಮಂತ್ರಿಯನ್ನಾಗಿ ಮಾಡಲಾಗಿತ್ತು. ಮೇಲ್ಮನೆ ಅವಧಿ ಮುಗಿಯುವುದರೊಳಗೆ ಮತ್ತೆ ಹೊಸಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿತ್ತು.

    ಎಂ.ವಿ.ಕೃಷ್ಣಪ್ಪ ಅವರ ಸಹೋದರರಾಗಿದ್ದ ಎಂ.ವಿ.ವೆಂಕಟಪ್ಪ ಅವರು ಶಾಸಕರಾಗಿ ಆಯ್ಕೆಯಾಗಿ ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

    4 ಕ್ಷೇತ್ರಗಳಲ್ಲಿ ಎಂಪಿ ಆಗಿದ್ದ ದಾಖಲೆ:

    ಎರಡು ಬಾರಿ ಹೊಸಕೋಟೆ ಸಂಸದರಾಗಿದ್ದ ಎಂ.ವಿ.ಕೃಷ್ಣಪ್ಪ ಅವರು ಒಟ್ಟು ನಾಲ್ಕು ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸಂಸತ್‌ಗೆ ಆಯ್ಕೆಯಾಗಿ ದಾಖಲೆ ಮಾಡಿದ್ದಾರೆ. 1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅವರು, 31ನೇ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿ ಯುವ ಮುಖಂಡರಾಗಿ ಹೊರಹೊಮ್ಮಿದ್ದರು. 1957ರಲ್ಲಿ ನಡೆದ ಎರಡನೇ ಹಾಗೂ 1957ರಲ್ಲಿ ನಡೆದ ಮೂರನೇ ಸಂಸತ್ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. ಆ ಬಳಿಕ 1967 ಮತ್ತು 1971ರಲ್ಲಿ ಹೊಸಕೋಟೆ ಕ್ಷೇತ್ರದಿಂದ ಜಯ ದಾಖಲಿಸಿದ್ದರು. 1977ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿದು ಜಯ ಸಾಧಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts