More

    ಕಾನೂನು ವ್ಯಾಪ್ತಿ ಮೀರಿದರೆ ಕ್ರಮ ಅನಿವಾರ್ಯ

    ಹೊಸದುರ್ಗ: ಅಧಿಕಾರಿಗಳು ಕಾನೂನು ವ್ಯಾಪ್ತಿ ಮೀರಿ ಕೆಲಸ ಮಾಡಿದರೆ ಶಿಸ್ತು ಕ್ರಮ ಅನಿವಾರ್ಯ. ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಂ.ಎಸ್.ದಿವಾಕರ್ ಎಚ್ಚರಿಸಿದರು.

    ಹೊಸದುರ್ಗ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಪ್ರಗತಿಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

    ಗ್ರಾಮ, ತಾಲೂಕು ಮಟ್ಟದ ಅಧಿಕಾರಿಗಳು ಯಾವುದೇ ಶಿಫಾರಸಿಗೆ ಒಳಗಾಗದೆ ಕಾನೂನು ವ್ಯಾಪ್ತಿಯೊಳಗೆ ಕೆಲಸ ಮಾಡಬೇಕು. ಕಚೇರಿಗೆ ಬರುವ ಜನರೊಂದಿಗೆ ಮಾನವೀಯತೆಯಿಂದ ವರ್ತಿಸುವ ಜತೆಗೆ ಕಾರ್ಯದಕ್ಷತೆ ಮೆರೆಯಬೇಕು ಎಂದರು.

    ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೆ ತಿಂಗಳ ಸಂಬಳ ಪೂರ್ತಿ ನೀಡುವ ಕಾನೂನಿಲ್ಲ. ಅವರು ನಿರ್ವಹಿಸಿದ ಕೆಲಸದ ಆಧಾರದಲ್ಲಿ ವೇತನ ನಿರ್ಧರಿಸಲಾಗುತ್ತದೆ. ಕರ್ತವ್ಯಲೋಪ ತೋರುವ ತಾಂತ್ರಿಕ ಸಹಾಯಕರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.

    ನರೇಗಾ ತಾಂತ್ರಿಕ ಸಿಬ್ಬಂದಿ ಎಲ್ಲಿ ಕೆಲಸ ಮಾಡುತ್ತಾರೆ, ಅವರ ಕಚೇರಿ ಎಲ್ಲಿದೆ ಎಂದು ಪ್ರಶ್ನಿಸಿದ ಸಿಇಒ, ಪ್ರತಿ ತಾಂತ್ರಿಕ ಸಿಬ್ಬಂದಿಗೆ ಎರಡು ಅಥವಾ ಮೂರು ಗ್ರಾಪಂಗಳ ಉಸ್ತುವಾರಿ ನೀಡಿ ವಾರದಲ್ಲಿ ಮೂರು ದಿನ ಗ್ರಾಪಂ ಕಚೇರಿಗಳಲ್ಲಿ ಹಾಜರಿರಲು ಸೂಚಿಸಿ ಎಂದರು.

    ಕೋವಿಡ್ ಸಮಯದಲ್ಲಿ ಗ್ರಾಪಂ ನೌಕರರನೇಕರು ಮೃತಪಟ್ಟಿದ್ದರು ಅವರ ಕುಟುಂಬಗಳಿಗೆ ಆಶ್ವಾಸನೆ ನಿಧಿ ಯೋಜನೆಯಡಿ ತಾಪಂ ನಿಧಿಯಿಂದ ತಲಾ 5 ಲಕ್ಷ ರೂ., ಗ್ರಾ.ಪಂ ನಿಧಿಯಿಂದ ತಲಾ 50 ಸಾವಿರ ಬಿಡುಗಡೆ ಮಾಡಿ ಫಲಾನುಭವಿಗಳಿಗೆ ತಲುಪಿಸಬೇಕು. ವಿಳಂಬ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಪಂ ಉಪಕಾರ್ಯದರ್ಶಿ ರಂಗಸ್ವಾಮಿ, ತಾಪಂ ಇಒ ವಿಶ್ವನಾಥ ಇತರರಿದ್ದರು.

    ಟೆಂಡರ್ ತಪ್ಪಿಸಲು ಬೇಡ ತುಂಡುಗುತ್ತಿಗೆ: ಪಂಚಾಯತ್‌ರಾಜ್ ಮತ್ತಿತರ ಇಲಾಖೆಗಳು ಟೆಂಡರ್ ತಪ್ಪಿಸಲು 5 ಲಕ್ಷಕ್ಕಿಂತ ಕಡಿಮೆ ಮಾಡಿ ತುಂಡು ಗುತ್ತಿಗೆ ನೀಡಕೂಡದು. ಸಾಮಗ್ರಿ ಖರೀದಿಯಲ್ಲಿ ಒಂದೇ ಸಂಸ್ಥೆ , ಒಂದೇ ಕಂಪನಿಗೆ ಆದ್ಯತೆ ನೀಡಿದರೂ ಒಪ್ಪುವುದಿಲ್ಲ. ಪಾರದರ್ಶಕತೆ ಇಲ್ಲದ ಕಾಮಗಾರಿಗಳ ಬಿಲ್ ಸಲ್ಲಿಸಿದಾಗ ಸಂಬಂದಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿ.ಪಂ ಸಿಇಒ ತಿಳಿಸಿದರು.

    ನಿಯುಕ್ತಿಗೆ ಅಧಿಕಾರವಿಲ್ಲ: ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೇಡ್-2 ಕಾರ್ಯದರ್ಶಿಗಳನ್ನು ಪಿಡಿಒ ಸ್ಥಾನಕ್ಕೆ ನಿಯುಕ್ತಿಗೊಳಿಸಿ ಸೇವೆಗೆ ಬಳಸಿಕೊಳ್ಳುವ ಕಾನೂನಿನಲ್ಲಿ ಅವಕಾಶವಿಲ್ಲ. ತಾಲೂಕಿನೊಳಗಿನ ಗ್ರಾಪಂಗಳಿಗೆ ಪಿಡಿಒಗಳನ್ನು ಬದಲಾಯಿಸುವ ಅಧಿಕಾರ ತಾಪಂ ಇಒಗೂ ಇಲ್ಲ. ಇಂತಹ ನಿಯುಕ್ತಿಗಳು ಕಾನೂನು ಬಾಹಿರವಾಗುತ್ತವೆ ಎಂದು ಸಿಇಒ ಸ್ಪಷ್ಟಪಡಿಸಿದರು. ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಪಶುಸಂಗೋಪನೆ ಇಲಾಖೆ ಆರಂಭಿಸಿರುವ ಕಾಲ್ ಸೆಂಟರ್ ಸೇವೆ ಪ್ರಚಾರದ ಕೊರತೆಯಿಂದ ಜನರನ್ನು ತಲುಪಿಲ್ಲ. ವ್ಯಾಪಕ ಪ್ರಚಾರ ನೀಡುವ ಮೂಲಕ ಯೋಜನೆಯನ್ನು ರೈತ ಸ್ನೇಹಿಯಾಗಿಸಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts