More

    ರಾಜ್ಯಕ್ಕೆ ಹಂಚಿಕೆಯಾದ ನೀರಿನ ಬಳಕೆಗೆ ಒತ್ತು: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ

    ಹೊಸಪೇಟೆ: ಕೃಷ್ಣ ನ್ಯಾಯಾಧೀಕರಣದಲ್ಲಿ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ಬಳಸಲು ಕ್ರಿಯಾಯೋಜನೆ ತಯಾರಿಸಿ ಅನುಷ್ಠಾನಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

    ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ಮುನ್ನ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲವು ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದು, ಆದೇಶ ಬರೋವರೆಗೆ ಕಾಯಬೇಕಿದೆ. ರಾಜ್ಯಕ್ಕೆ ಹಂಚಿಕೆಯಾದ ನೀರಿನ ಬಳಕೆಗೆ ಆಡಳಿತಾತ್ಮಕ, ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲಾಗುವುದು. ಸಿಎಂ ಬಸವರಾಜ ಬೊಮ್ಮಾಯಿ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದರು. ಅವರಿಗೆ ಈ ಯೋಜನೆಗಳ ಅರಿವಿದ್ದು, ಪೂರ್ಣಗೊಳಿಸಲು ಅನುಕೂಲವಾಗಲಿದೆ ಎಂದರು.

    ತುಂಗಭದ್ರಾ ಜಲಾಶಯದಲ್ಲಿ 31 ಟಿಎಂಸಿ ಹೂಳು ತುಂಬಿದೆ. ಹಂಚಿಕೆಯಾದ ನೀರಿನ ಪ್ರಮಾಣ ಬಳಕೆಯಾಗುತ್ತಿಲ್ಲ. ಹೀಗಾಗಿ ಬಹುದಿನದ ಬೇಡಿಕೆಯಾದ ಸಮಾನಾಂತರ ಜಲಾಶಯ ನಿರ್ಮಿಸಲು ಡಿಪಿಆರ್ ಮಾಡಲಾಗುತ್ತಿದೆ. ತೆಲಂಗಾಣ, ಆಂಧ್ರ ರಾಜ್ಯಗಳ ಒಪ್ಪಿಗೆ ಬೇಕಿರುವ ಕಾರಣ ಮೂವರೂ ಸಿಎಂಗಳ ನೇತೃತ್ವದಲ್ಲಿ ಸಭೆ ನಡೆಸಿ ಒಪ್ಪಿಗೆ ಪಡೆದಬಳಿಕ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.

    371 ಕೋಟಿ ರೂ.ಯಲ್ಲಿ 15 ವಿಜಯನಗರ ಕಾಲುವೆ, ಮೂರು ಸಣ್ಣಪುಟ್ಟ ಅಣೆಕಟ್ಟೆಗಳ ಆಧುನೀಕರಣ ಮಾಡಲಾಗುತ್ತಿದೆ. ಬಾಕಿ ಎಂಟು ಸಣ್ಣ ಪ್ರಮಾಣ ಅಣೆಕಟ್ಟು ಒಂದು ಕಾಲುವೆ ಆಧುನೀಕರಣಕ್ಕೆ 139 ಕೋಟಿ ರೂ. ಅನುದಾನಕ್ಕೆ ಮಂಜೂರಾತಿ ನೀಡಿ, ಟೆಂಡರ್ ಕರೆಯಲಾಗುವುದು. ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ 16 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಬಲ ಭಾಗದಲ್ಲಿ 35,791 ಎಕರೆ ಪ್ರದೇಶ ನೀರಾವರಿಯಾಗಿದೆ. ಎಡ ಭಾಗದಲ್ಲಿ 2,16,467 ಎಕರೆ ಪ್ರದೇಶ ಸೂಕ್ಷ್ಮ ನೀರಾವರಿಗೆ ಒಳಪಡಲಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

    ಆನಂದ ಸಿಂಗ್ ಗೈರು
    ಸ್ವಂತ ಕ್ಷೇತ್ರದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮವಿದ್ದರೂ, ಅದರಲ್ಲಿ ಪಾಲ್ಗೊಳ್ಳದ ಸಚಿವ ಆನಂದ ಸಿಂಗ್, ಮಂಗಳವಾರ ಬೆಳಗ್ಗೆ ಯಲ್ಲಾಪುರಕ್ಕೆ ತೆರಳಿದರು. ಅಲ್ಲಿ ರಾಜನಹಳ್ಳಿಯ ವಾಲ್ಮೀಕಿ ಆಶ್ರಮಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ರಥ ನಿರ್ಮಾಣ ಕಾರ್ಯ ವೀಕ್ಷಿಸಲು ತೆರಳಿದ್ದರು.

    21ಕ್ಕೆ ಆಲಮಟ್ಟಿಗೆ ಸಿಎಂ
    ಆ.21 ರಂದು ಆಲಮಟ್ಟಿ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಿಸಲಿದ್ದಾರೆ. ಆಗಸ್ಟ್‌ನಲ್ಲಿ ಎಲ್ಲ ಜಲಾಶಯಗಳು ಭರ್ತಿಯಾಗಿರುವುದು ಇತಿಹಾಸದಲ್ಲಿ ಇದೆ ಮೊದಲು. ಪ್ರತಿವರ್ಷ ಇದೇ ರೀತಿ ಮಳೆಯಾಗಲಿ ಎಂದು ಗಂಗಾಮಾತೆಗೆ ಬಾಗಿನ ಅರ್ಪಿಸಿರುವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts