More

    ಹೊಸನಗರ ಕ್ಷೇತ್ರ ಮರುಪಡೆಯಲು ಶಪಥ ಮಾಡಿ

    ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರಳಿ ಪಡೆಯಬೇಕು. ಇದು ನಮ್ಮೆಲ್ಲರ ಶಪಥವಾಗಬೇಕು ಎಂದು ತಾಲೂಕು ಗ್ರಾಪಂಗಳ ಅಧ್ಯಕ್ಷ- ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಹೇಳಿದರು.
    ತಾಲೂಕಿನ ಪುರಪ್ಪೆಮನೆ ಗ್ರಾಪಂ ಆವರಣದಲ್ಲಿ ಬುಧವಾರ ವಿಧಾನಸಭಾ ಕ್ಷೇತ್ರ ಹೋರಾಟ ನಡಿಗೆ ಗ್ರಾಪಂಗಳ ಕಡೆಗೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಹೊಸನಗರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ಈ ಹೋರಾಟವನ್ನು ರೂಪಿಸಲಾಗಿದೆ. ಹೊಸನಗರ ತಾಲೂಕು ವಿವಿಧ ವಿದ್ಯುತ್ ಮತ್ತು ಜಲ ಯೋಜನೆಗಳಿಂದ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಒಂದೆಡೆ ಇಡೀ ನಾಡಿಗೆ ಬೆಳಕು ಕೊಡುವ ಯೋಜನೆಯಾದರೆ, ಇನ್ನೊಂದೆಡೆ ಪಶ್ಚಿಮಘಟ್ಟ. ಹೀಗಾಗಿ ಇಲ್ಲಿ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ವಿಂಗಡಣೆ ಆಗದೆ, ವಿಸ್ತೀರ್ಣ ಮತ್ತು ಭೌಗೋಳಿಕ ಹಿನ್ನಲೆ ಆಧಾರದಲ್ಲಿ ಕ್ಷೇತ್ರ ನೀಡಬೇಕು ಎಂದು ಅಗ್ರಹಿಸಿದರು.
    ಒಕ್ಕೂಟದ ಸಂಚಾಲಕ ಚಿದಂಬರ ಮಾರುತಿಪುರ ಮಾತನಾಡಿ, ಕ್ಷೇತ್ರಕ್ಕೆ ಒಳಪಡುವ ಪ್ರತಿ ಗ್ರಾಮ ಪಂಚಾಯಿತಿಗಳು ಒಕ್ಕೊರಲಿನಿಂದ ಈ ಹೋರಾಟವನ್ನು ಬೆಂಬಲಿಸುತ್ತಿದ್ದೇವೆ. ಅಲ್ಲದೆ ಪ್ರತಿ ಗ್ರಾಪಂಯು ವಿಶೇಷ ಸಾಮಾನ್ಯ ಸಭೆ ಮತ್ತು ಗ್ರಾಮಸಭೆಗಳ ಮೂಲಕ ನಿರ್ಣಯ ಕೈಗೊಂಡು ರಾಷ್ಟ್ರಪತಿ, ಚುನಾವಣಾ ಆಯೋಗ, ಪ್ರಧಾನಮಂತ್ರಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡುವ ನಿರ್ಣಯವನ್ನು ತಾಲೂಕು ಒಕ್ಕೂಟ ಕೈಗೊಂಡಿದೆ ಎಂದು ಹೇಳಿದರು.
    ಮಂಜುನಾಥ ಬ್ಯಾಣದ ಜಾಗೃತಿ ಯಾತ್ರೆಯ ಮಾಹಿತಿ ನೀಡಿದರು. ಪುರಪ್ಪೇಮನೆ ಗ್ರಾಪಂ ಅಧ್ಯಕ್ಷೆ ಸುಜಾತಾ ದಿನೇಶ್, ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ಸಂತೋಷ್ ಮಳವಳ್ಳಿ, ಜಯಪ್ರಕಾಶ್ ಶೆಟ್ಟಿ, ಗೋಪಾಲ್ ಹೀಲಗೋಡು, ಇಕ್ಬಾಲ್ ಅಹ್ಮದ್, ಕಲಾವಿದ ಗೋಪಾಲಮೂರ್ತಿ ಹೆಬ್ಬೈಲು, ಗ್ರಾಮಸ್ಥರು ಉಪಸ್ಥಿತರಿದ್ದರು. ಪುರಪ್ಪೆಮನೆ, ಹರಿದ್ರಾವತಿ, ಮಾರುತಿಪುರ, ಹರತಾಳು, ರಿಪ್ಪನ್‌ಪೇಟೆ, ಕೆಂಚನಾಲ, ಅರಸಾಳು, ಬೆಳ್ಳೂರು ಗ್ರಾಪಂಗಳಿಗೆ ರಥಯಾತ್ರೆ ಸಾಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts